HD KUMARASWAMY ON MUDA SCAM: ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟವರಿಂದಲೇ ಮುಡಾ ಹಗರಣ ಬಹಿರಂಗ: HDK ಗಂಭೀರ ಆರೋಪ

ಮೈಸೂರು: ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟವರಿಂದಲೇ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ ಬಯಲಾಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಯಾಕೆ ಮತ್ತು ಹೇಗೆ? ಇದರ ಹಿಂದೆ ಸಿಎಂ ಕುರ್ಚಿ ಮೇಲೆ ಟವಲ್ ಹಾಕಿರುವವರ ಪಾತ್ರವಿದೆ. ಸೀಡಿ ಫ್ಯಾಕ್ಟರಿ ಬಂದ್ ಆಯಿತು. ಈಗ ಮುಡಾ ಫ್ಯಾಕ್ಟರಿ ಶುರುವಾಗಿದೆ ಎಂದು ಯಾರ ಹೆಸರನ್ನೂ ಹೇಳದೇ ಕೇಂದ್ರ ಸಚಿವರು ಟೀಕಾ ಪ್ರಹಾರ ನಡೆಸಿದರು.

ಬಿಜೆಪಿ ಸ್ನೇಹಿತರು ಈ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ಆದರೆ ಹಗರಣ ಆಚೆ ಬರಲು ಕಾಂಗ್ರೆಸ್‌ನವರೇ ಒಳಗೊಳಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇದೆ.
ಸಿಎಂ ಪತ್ನಿಗೆ ಆ ಜಾಗ ಹೇಗೆ ಬಂತು ಅಂತಲೂ ನನಗೆ ಗೊತ್ತಿದೆ. 62 ಕೋಟಿ ರೂ. ಪರಿಹಾರ ಕೇಳುವ ಸಿಎಂ ಅವರು ಭೂಮಿ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ರೈತರಿಗೂ ಪರಿಹಾರ ಕೊಡಿಸಲಿ ಎಂದು ಕೇಂದ್ರ ಸಚಿವರು ಒತ್ತಾಯ ಮಾಡಿದರು.

62 ಕೋಟಿ ಪರಿಹಾರವನ್ನು ಸರಕಾರ ಕೊಡಬೇಕು ಎನ್ನುತ್ತಿದ್ದಾರೆ ಸಿಎಂ. ಹೀಗೆ ಹೇಳುವ ಸಿದ್ದರಾಮಯ್ಯ ಅವರಿಗೆ ಜನರ ಕಷ್ಟ ಗೊತ್ತಿಲ್ಲವೇ? ರಾಜ್ಯದ ಬಡವರ ನೋವು ಗೊತ್ತಾಗುತ್ತಿಲ್ಲವೇ? ರಾತ್ರೋರಾತ್ರಿ ಭೂಸ್ವಾಧೀನ ಮಾಡಿಕೊಳ್ಳುತ್ತಾರೆ. ಅವರನ್ನು ಬೀದಿಗೆ ನಿಲ್ಲಿಸುತ್ತಾರೆ. ಪರಿಹಾರ ಮಾತ್ರ ಕೊಡುವುದಿಲ್ಲ. ನೀವು ಮಾತ್ರ ದೊಡ್ಡ ಮೊತ್ತದ ಪರಿಹಾರ ಕೇಳುತ್ತಿದ್ದೀರಿ. ಇದು ಯಾವ ನ್ಯಾಯ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಸರ್ಕಾರದಿಂದ ದ್ವೇಷ ರಾಜಕಾರಣ

ಜನತಾ ದರ್ಶನ ವಿಚಾರದಲ್ಲಿ ರಾಜ್ಯ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ನೇರ ಆರೋಪ ಮಾಡಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ನನ್ನ ಜನತಾ ದರ್ಶನದ ಬಗ್ಗೆಯೇ ಸಚಿವ ಸಂಪುಟದ ಸಭೆ ಕರೆದು ಚರ್ಚೆ ಮಾಡಿದ್ದಾರೆ. ಸರ್ಕಾರ ಅಧಿಕಾರಿಗಳನ್ನು ನನ್ನಿಂದ ದೂರ ಇಡಬಹುದು. ಆದರೆ, ಜನರನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರು ಈ ರೀತಿ ಸಭೆ ಮಾಡಿದ್ದಾಗ ಏನು ನಡೆಯಿತು? ಚುನಾವಣೆಗೆ ಇನ್ನೆರಡು ಮೂರು ತಿಂಗಳು ಇದ್ದಾಗ ಜನ ಸ್ಪಂದನ ಅಂತ ನಡೆಯಿತಲ್ಲ, ಆಗ ಅವರ ಹಿಂದೆ ಅಧಿಕಾರಿಗಳು ಇರಲಿಲ್ಲವೇ? ಎಂದು ಸರ್ಕಾರದ ವಿರುದ್ಧ ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.

ಈಗ ಜನತಾ ದರ್ಶನ ತಪ್ಪಿಸಲು ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ಜನತಾ ದರ್ಶನ ನಿಲ್ಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

More News

You cannot copy content of this page