G PARAMESHWAR: ಅಧಿಕಾರಿಗಳು ರಸ್ತೆಗಿಳಿದು ಕೆಲಸ ಮಾಡಬೇಕು: ಗೃಹ ಸಚಿವ ಪರಮೇಶ್ವರ

ಬೆಂಗಳೂರು:- ಬೆಂಗಳೂರು ನಗರದ ಸಂಚಾರ ಸಮಸ್ಯೆಯನ್ನು ನಿಯಂತ್ರಿಸಲು ಅಧಿಕಾರಿಗಳು ಪ್ರತಿದಿನ ರಸ್ತೆಗಿಳಿದು ಕೆಲಸ ಮಾಡಬೇಕು ಎಂದು ಗೃಹ ಸಚಿವ ಡಾ.‌ ಜಿ.ಪರಮೇಶ್ವರ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಪ್ರಧಾನ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು.

ಬೆಂಗಳೂರು ನಗರದಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಹೊಸ ಯೋಜನೆಗಳನ್ನು ರೂಪಿಸಬೇಕು. ಎಸಿಪಿ, ಇನ್‌ಸ್ಪೆಕ್ಟರ್‌ಗಳು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕನಿಷ್ಟ ಎರಡು ತಾಸು ಆದರೂ ರಸ್ತೆಯಲ್ಲಿ ನಿಂತು ಕೆಲಸ ಮಾಡಬೇಕು ಎಂದರು.

ಅನೇಕ ಸಲ ಖಾಸಗಿ ಕಾರಿನಲ್ಲಿ ಸಂಚರಿಸದಾಗ ಗಮನಿಸಿದ್ದೇನೆ. ಅಧಿಕಾರಿಗಳು ರಸ್ತೆಗಿಳಿದು ಕೆಲಸ ಮಾಡುವುದು ಕಾಣಿಸುವುದೇ ಇಲ್ಲ. ಇದನ್ನು ಸರಿಪಡಿಸಿಕೊಳ್ಳದೇ ಹೋದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು‌.

ಹೈವೇ ಪ್ಯಾಟ್ರೋಲಿಂಗ್ ವಾಹನಗಳು ಎಲ್ಲಿರುತ್ತವೆ ಎಂಬುದೇ ಕಾಣಿಸುವುದಿಲ್ಲ.‌ ಈ ವಾಹನಗಳನ್ನು ಗಣ್ಯರ ಮುಂಗಾವಲು ಪಡೆಗೆ ಬಳಸಿಕೊಳ್ಳುವುದು ಬೇಡ. ರಸ್ತೆ ಬದಿ ಕೆಟ್ಟು ನಿಂತಿರುವ ವಾಹನಗಳನ್ನು ಕೂಡಲೇ ತೆರವುಗೊಳಿಸುವ ಕೆಲಸವಾಗಬೇಕು. ಇದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಬೇಕು ಎಂದರು.

ಸಿಬ್ಬಂದಿಗಳು ಆಡರ್ಲಿಗೆ ಬೇಡ:- ಇಲಾಖೆಯ ಸಿಬ್ಬಂದಿಗಳನ್ನು ಆಡರ್ಲಿಗೆ ಬಳಸಿಕೊಂಡರೆ ಸಹಿಸುವುದಿಲ್ಲ. ಬಹುತೇಕರು ಇಲಾಖೆಗೆ ಸೇರಬೇಕು ಎಂದು ಕನಸು ಹೊತ್ತಿರುತ್ತಾರೆ. ತರಬೇತಿ ಪಡೆದು ಇಲಾಖೆಯ ಕರ್ತವ್ಯಕ್ಕೆ ಸೇರಿದವರನ್ನು ಮನೆಯ ಕೆಲಸಗಳಿಗೆ ಬಳಸಿಕೊಳ್ಳಬೇಕೇ? ಕೆಳಹಂತದ ಸಿಬ್ಬಂದಿ ನಮ್ಮಂತೆಯೇ ಮನುಷ್ಯರು ಎಂಬುದನ್ನು ಮರೆಯಬಾರದು. ಕೆಳಹಂತದ ಸಿಬ್ಬಂದಿಗಳಲ್ಲಿರುವ ಕ್ರಿಯಾಶೀಲತೆ, ಕೌಶಲ್ಯವನ್ನು ಇಲಾಖೆಯ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.

ಇ-ಬೀಟ್ ವ್ಯವಸ್ಥೆ ಸರಿಪಡಿಸಿ:- ರಾಜ್ಯದಲ್ಲಿ ಅನೇಕ ಠಾಣೆಗಳಿಗೆ ಭೇಟಿ ನೀಡಿ, ಪರಿಶೀಲಿಸಿದಾಗ ಶೇ. 70ರಷ್ಟು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಇ-ಬೀಟ್ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ. ಬೀಟ್ ಸಿಬ್ಬಂದಿಯ ಲೋಕೇಷನ್ ಮಾತ್ರ ಸಿಗುತ್ತದೆ. ಆತ ಕರ್ತವ್ಯದ ವೇಳೆ ಕೈಗೊಂಡ ಚಟುವಟಿಕೆಗಳ ಮಾಹಿತಿ ಅಧಿಕಾರಿಗಳ ಇರುವುದಿಲ್ಲ. ಇದನ್ನು ಯಾವ ರೀತಿ ಯಶಸ್ವಿ ಗೊಳಿಸುತ್ತೀರೋ ಗೊತ್ತಿಲ್ಲ. ಇ-ಬೀಟ್ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳದೇ ಹೋದರೆ, ಇಲಾಖೆಯ ಗುಣ್ಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಬೀಟ್ ಕರ್ತವ್ಯದ ಬಗ್ಗೆ ಡೈರಿಯಲ್ಲಿ ಬರೆದಿಡುವ ಹಳೇ ವ್ಯವಸ್ಥೆಗೆ ಹಿಂದಿರುಗಬೇಕೆ ಎಂದು ಪ್ರಶ್ನಿಸಿದರು.

ಫೇಕ್‌ನ್ಯೂಸ್ ಬಿಸಿ ಮುಟ್ಟಿಸಿ:- ಸುಳ್ಳು ಸುದ್ದಿ ಹಬ್ಬಿಸುವುದು ಹಚ್ಚಾಗುತ್ತಿದೆ. ಸರ್ಕಾರ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ವಿರುದ್ಧ ಅವಾಚ್ಯವಾಗಿ, ತಿರುಚಿದ ಹೇಳಿಕೆಗಳನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಸಾಮಾನ್ಯ ಜನರ ವಿರುದ್ಧವು ಆಗುತ್ತಿದೆ. ಅಂತವರನ್ನು ಕೂಡಲೇ ಪತ್ತೆಹಚ್ಚಿ, ಬಿಸಿ ಮುಟ್ಟಿಸುವ ಕೆಲಸವಾಗಬೇಕು. ಇಂತಹ ತಪ್ಪುಗಳನ್ನು ಮತ್ತೊಬ್ಬರು ಮಾಡಲು ಮುಂದಾಗಬಾರದು. ತ್ವರಿತಗತಿಯಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸುವ ಕೆಲಸ ಆಗಬೇಕು ಎಂದು ತಾಕೀತು ಮಾಡಿದರು.

ಕೊಲೆಗಾರರನ್ನು ತ್ವರಿತಗತಿಯಲ್ಲಿ ಹಿಡಿಯಲಾಗುತ್ತಿದೆ. ಇಂತಹ ಅಪರಾಧ ಚಟುವಟಿಕೆಗಳು ಮರುಕಳಿಸಬಾರದು. ಯಾವುದೇ ಕಾರಣಕ್ಕು ಠಾಣೆಗೆ ಬರುವ ಜನರ ದೂರುಗಳನ್ನು ನಿರ್ಲಕ್ಷಿಸಬಾರದು. ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು.‌ ಇದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದರು.

ಸಾಮಾಜಿಕ, ಕೌಟುಂಬಿಕ, ಮಕ್ಕಳ, ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳು ಬರುತ್ತವೆ. ಅಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ಕೆಲಸ‌ ಮಾಡಬೇಕು ಎಂದು ಸೂಚಿಸಿದರು.

ಮಾದಕ ದ್ರವ್ಯ ಮುಕ್ತ ಕರ್ನಾಟಕದ ನಿಟ್ಟಿನಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ‌ ಮಾಡಬೇಕು. ಮಾದಕ ದ್ರವ್ಯ ಚಟುವಟಿಕೆಗಳಲ್ಲಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಹಿಡಿದು ಜೈಲಿಗೆ ಕಳುಹಿಸಿದರೆ ಸಾಲುವುದಿಲ್ಲ. ಮೂಲ ಆರೋಪಿಯನ್ನು ಪತ್ತೆಹಚ್ಚಬೇಕು. ಶಾಲಾ-ಕಾಲೇಜುಗಳಿಗೆ ಹೋಗಿ ಮಾದಕ ದ್ರವ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು‌. ಇಂತಹ ಅಭಿಯಾನ ಕಾರ್ಯಕ್ರಮಗಳನ್ನು ನಡೆಸಲು ಖಾಸಗಿ ಕಂಪನಿಗಳು ಮುಂದೆ ಬರುತ್ತಿವೆ. ಅವರೊಂದಿಗೆ ಕೈಜೋಡಿಸಿ ಎಂದು ಸೂಚಿಸಿದರು.

ಜನಸ್ನೇಹಿ ಪೊಲೀಸ್:- ರಾಜ್ಯದಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಸರಿಯಾಗಿ ಆಗುತ್ತಿದೆಯೇ? ನ್ಯಾಯ ಕೇಳಿಕೊಂಡು ಬರುವ ಜನರಿಗೆ ಸ್ನೇಹ ತೋರದೇ ಇದ್ದರೆ ಜನಸ್ನೇಹಿ ಪೊಲೀಸ್ ಅರ್ಥ ಬರುವುದಿಲ್ಲ.

ರಾಜ್ಯದ ಪೊಲೀಸರ ಸಮಸ್ಯೆಯನ್ನು ಕೇಂದ್ರದ ಗಮನಕ್ಕೆ ತಂದಿದ್ದು, ಸುಮಾರು ರೂ. 1600 ಕೋಟಿ ಅನುದಾನ ನೀಡುವಂತೆ ಮನವಿ‌ ಮಾಡಿದ್ದೇವೆ. ನಮ್ಮ ಸರ್ಕಾರವು ಪೊಲೀಸ್ ಗೃಹ ಯೋಜನೆಯಡಿ ಶೇ.70ರಷ್ಟು ಸಿಬ್ಬಂದಿಗಳಿಗೆ ಮನೆ ಒದಗಿಸುವ ಗುರಿ ಹೊಂದಿದೆ. ಪ್ರಸ್ತುತ ಶೇ. 40ರಷ್ಟು ಮನಗಳನ್ನು ಒದಗಿಸಲಾಗಿದ್ದು, ಪೊಲೀಸ್ ಗೃಹ ಯೋಜನೆಗೆ ಅನುದಾನ ಕೇಳಲಾಗಿದೆ. ಇಲಾಖೆಯ ಸಿಬ್ಬಂದೊಗಳು ಕರ್ತವ್ಯನಿರ್ವಹಿಸುವ ವ್ಯಾಪ್ತಿಯಲ್ಲಿ ಮನೆ ಒದಗಿಸಲಾಗುವುದು ಎಂದು ತಿಳಿಸಿದರು.

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ತನಿಖೆಯಲ್ಲಿ ಕೆಳಹಂತದ ಅಧಿಕಾರಿ‌ ಮತ್ತು ಸಿಬ್ಬಂದಿಗಳು ಆರಂಭದಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ದರ ಪರಿಣಾಮವಾಗಿ ಶಂಕಿತರನ್ನು ಪತ್ತೆಹಚ್ಚಲು ಸಹಕಾರಿಯಾಯಿತು. ಶಂಕಿತ ಧರಿಸಿದ್ದ ಟೋಪಿಯನ್ನು (CAP) ಆಧರಿಸಿ ಮೂಲ ಪತ್ತೆಹಚ್ಚಿರುವುದಕ್ಕೆ ಗೃಹ ಸಚಿವ ಪರಮೇಶ್ವರ ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಹೊಸ ಅಪರಾಧ ಕಾನೂನುಗಳ ಮಾಹಿತಿ ಒದಗಿಸುವ ಸಂಚಯ ಮೊಬೈಲ್ ಆ್ಯಪ್, ನಾಗರಿಕರಿಗೆ ಹೋಯ್ಸಳ ವಾಹನದ ಟ್ರ್ಯಾಕಿಂಗ್ ಮಾಹಿತಿ ಒದಗಿಸುವ ‘ರಿಯಲ್ ಟೈಮ್ ಟ್ರ್ಯಾಕಿಂಗ್ ಆಫ್ ಹೊಯ್ಸಳ’ ತಂತ್ರಜ್ಞಾನ ಹಾಗೂ ನಾಗರಿಕರು ಸಂಕಷ್ಟದ ಸಂದರ್ಭದಲ್ಲಿ ಕಮಾಂಡ್ ಸೆಂಟರ್‌ನೊಂದಿಗೆ ತುರ್ತು ವೀಡಿಯೋ ಕರೆ ಮಾಡಲು ಸಹಾಯವಾಗುವ ‘ಸೇಫ್ ಕನೆಕ್ಟ್’ ಮೊಬೈಲ್ ಆ್ಯಪ್ಲಿಕೇಶನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೂಡಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ, ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್ ಉಪಸ್ಥಿತರಿದ್ದರು.

More News

You cannot copy content of this page