HD KUMARASWAMY ON MUDA SCAM: ಮೈಸೂರಿನ ಮುಡಾ ಹಗರಣವನ್ನು ಮುಚ್ಚಿ ಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಹುನ್ನಾರ: HD ಕುಮಾರಸ್ವಾಮಿ

ಬೆಂಗಳೂರು: ಮೈಸೂರಿನ ಮುಡಾ ಹಗರಣವನ್ನು ಮುಚ್ಚಿ ಹಾಕಲು ರಾಜ್ಯ ಕಾಂಗ್ರೆಸ್ ಸರಕಾರ ಹುನ್ನಾರ ನಡೆಸಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಇಡೀ ಹಗರಣದ ಸುತ್ತಮುತ್ತ ನಡೆಯುತ್ತಿರುವ ಘಟನೆಗಳು, ಈಗಲೂ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಇದೊಂದು ದೊಡ್ಡ ಹಗರಣ ಎಂದರೆ ತಪ್ಪಲ್ಲ. ಆದರೆ, ಈ ಹಗರಣವನ್ನು ಮುಚ್ಚಿಹಾಕಲು ಸರ್ಕಾರವೇ ಹೊರಟಿದೆ. ಇದು ಅರ್ಕಾವತಿ ರೀಡೂ ಹಗರಣದ್ದಂತೆ ಇದೆ ಎಂದು ದೂರಿದರು.

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಹಗರಣವೇ ನಡೆದಿಲ್ಲ ಎಂದು ಹೇಳಿದ್ದಾರೆ. ಆದರೆ, ಮೈಸೂರಿಗೆ ವಿಶೇಷ ಹೆಲಿಕಾಪ್ಟರ್ ನಲ್ಲಿ ಹೋಗಿ ಕಂತೆಗಟ್ಟಲೇ ಕಡತಗಳನ್ನು, ದಾಖಲೆಗಳನ್ನು ತುಂಬಿಕೊಂಡು ತಂದವರು ಯಾರು? ಸಚಿವ ಭೈರತಿ ಸುರೇಶ್ ಅವರೇ ತಾನೇ ಎಂದು ಕೇಂದ್ರ ಸಚಿವರು ನೇರ ಆಪಾದನೆ ಮಾಡಿದರು.

ಕುಮಾರಸ್ವಾಮಿ ಅವರು ಕಾಂಗ್ರೆಸ್‌ ನಾಯಕರ ಪಿತೂರಿ ಇದೆ ಅಂತಿದಾರೆ, ಈ ರೀತಿ ನಡೆದೇ ಇಲ್ಲ ಅಂತಾರೆ. ಹಾಗಾದರೆ ಅಧಿಕಾರಿಗಳನ್ನು ಕಳಿಸಿ ಯಾಕೆ ತನಿಖೆ ಮಾಡ್ತಿದಾರೆ. ದಿಢೀರ್ ವರ್ಗಾವಣೆಗಳು ಯಾಕೆ ಆಗುತ್ತಿವೆ? ವರ್ಗಾವಣೆಗೆ ಗುರಿಯಾದ ಅಧಿಕಾರಿ ಈ ಹಗರಣದ ಬಗ್ಗೆ ಸರ್ಕಾರಕ್ಕೆ ಎಷ್ಟು ಸಲ ದೂರು ನೀಡಿದ್ದರು? ಎಷ್ಟು ಕಡತಗಳನ್ನು, ದಾಖಲೆಗಳನ್ನು ಕಳಿಸಿದ್ದರು ಎಂಬ ಬಗ್ಗೆ ಹಾದಿಬೀದಿಯಲ್ಲಿ ಚರ್ಚೆ ಆಗುತ್ತಿದೆ ಎಂದು ಅವರು ಹೇಳಿದರು.

ಮೈಸೂರಿನಿಂದ ತಂದ ಹೆಲಿಕಾಪ್ಟರ್ ನಲ್ಲಿ ತಂದ ದಾಖಲೆಗಳನ್ನು ಭೈರತಿ ಸುರೇಶ್ ಎಲ್ಲೆಲ್ಲಿ ಇಟ್ಟಿದ್ದಾರೋ ಇಟ್ಟಿದ್ದಾರೆಯೋ ಗೊತ್ತಿಲ್ಲ. ಆ ಬಗ್ಗೆ ಮಾಹಿತಿ ಜನರಿಗೆ ಗೊತ್ತಾಗಬೇಕು ಎಂದು ಅವರು ಹೇಳಿದರು.

ಹಿಂದೆ ಅರ್ಕಾವತಿ ರೀಡೂ ಹಗರಣ ನಡೆಯಿತಲ್ಲಾ? ಅದು ಎಲ್ಲಿಗೆ ಮುಟ್ಟಿತು? ಅದಕ್ಕೊಂದು ಆಯೋಗ ಮಾಡಿಕೊಂಡು ಹಗರಣ ಮುಚ್ಚಿ ಹಾಕಿದರಲ್ಲವೇ? ಮುಡಾದಲ್ಲಿ ಹದಿನಾಲ್ಕುನಿವೇಶನಗಳನ್ನು ಅಧಿಕಾರಿಗಳು ಇವರಿಗೆ ರೆಡ್‌ ಕಾರ್ಪೆಟ್ ಹಾಕಿ ಕೊಟ್ಟಿದ್ದಾರೆ ಪಾಪ. ಇವರ ಭೂಮಿಗೆ ಬದಲಾಗಿ ಇವರಿಗೆ ನಿವೇಶನಗಳನ್ನು ಹಂಚಿದ್ದಾರಂತೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಇವರ ಜಮೀನಿಗೆ ₹62 ಕೋಟಿ ಬೆಲೆ ಕಟ್ಟಿಕೊಂಡಿದ್ದಾರೆ. ಅದರ ಬಗ್ಗೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಅದರ ಬಗ್ಗೆ ನಾನು ಮಾತಾಡಲ್ಲ. ಅವರ ಸಂಪುಟದ ಸದಸ್ಯರೇ ಮಾತನಾಡಲು ರೆಡಿ ಇದ್ದಾರೆ ಎಂದು ಟಾಂಗ್ ಕೊಟ್ಟರು ಸಚಿವರು.

ಶುಕ್ರವಾರ ಒಬ್ಬರು ಕುಮಾರಸ್ವಾಮಿಗೆ ಹುಚ್ಚು ಹಿಡಿದಿದೆ, ಚಿಕಿತ್ಸೆ ಕೊಡಿಸಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ. ನಾನು ನೋಡಿದರೆ ಹಾಗೆ ಕಾಣುತ್ತೇನೆಯೇ? ಜನರು ನನ್ನನ್ನು, ಆ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಲಿ. ಹುಚ್ಚು ಯಾರಿಗೆ ಇದೆ ಎಂಬುದು ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.

ನನ್ನ ಆರೋಗ್ಯದ ಬಗ್ಗೆ ಅವರಿಗೆ ಚಿಂತೆ ಬೇಡ. ನನಗೆ ಹೃದಯದ ಸಮಸ್ಯೆ ಇತ್ತು. ವಾಲ್ವ್ ರೀಪ್ಲೇಸ್‌ಮೆಂಟ್ ಮಾಡಿಸಬೇಕಿತ್ತು. ಅದನ್ನು ಮಾಡಿಸಿಕೊಂಡಿದ್ದೇನೆ. ನನ್ನ ಬಗ್ಗೆ ಅವರಿಗೆ ಯಾಕೆ ಚಿಂತೆ? ಎಂದು ಅವರು ಕೇಳಿದರು.

||ಚನ್ನಪಟ್ಟಣಕ್ಕೆ ಅಚ್ಚರಿಯ ಅಭ್ಯರ್ಥಿ||

ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಹಲವಾರು ಹೆಸರುಗಳು ಚರ್ಚೆಯಲ್ಲಿ ಇವೆ. ಅಂತಿಮವಾಗಿ ಕಾರ್ಯಕರ್ತರ ಅಭಿಪ್ರಾಯದಂತೆ ತೀರ್ಮಾನ ಮಾಡುತ್ತೇವೆ. ಕಾದು ನೋಡಿ, ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು. ಈ ಬಗ್ಗೆ ಬಿಜೆಪಿ ದೆಹಲಿ, ರಾಜ್ಯದ ನಾಯಕರ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಉಪ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು; ನಾನು ನನ್ನ ಕಾರ್ಯಕರ್ತರ ಅಭಿಪ್ರಾಯ ಪಡೆಯಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ತೀರ್ಮಾನ ಮಾಡಬೇಕು. ಅಭ್ಯರ್ಥಿ ಬಗ್ಗೆ ಬಿಜೆಪಿಯ ಕೇಂದ್ರದ ನಾಯಕರ ಜತೆ ಯಾಗಲಿ, ರಾಜ್ಯದ ನಾಯಕರುಗಳ ಜತೆ ಇನ್ನೂ ಚರ್ಚೆ ಮಾಡಿಲ್ಲ. ನನ್ನ ಕಾರ್ಯಕರ್ತರ ಸಹಮತ ಇಲ್ಲದೇ ಯಾವುದನ್ನೂ ತೀರ್ಮಾನ ಮಾಡಲ ಆಗಲ್ಲ. ಯೋಗೇಶ್ವರ್ ಅವರು ಆ ಕ್ಷೇತ್ರದಲ್ಲಿ ಹಿಂದೆ ಶಾಸಕರಾಗಿದ್ದವರು. ಆದರೆ ಅಂತಿಮವಾಗಿ ಎಲ್ಲರ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.

More News

You cannot copy content of this page