Search

Road Accidents: ರಾಜ್ಯದಲ್ಲಿ ರಸ್ತೆ ಅಪಘಾತಕ್ಕೆ 11611 ಬಲಿ-51 ಸಾವಿರ ಗಾಯಾಳು

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ 2023ರ ಏಪ್ರಿಲ್‌ನಿಂದ ಈ ವರ್ಷ ಮಾರ್ಚ್ ಅಂತ್ಯದವರೆಗೆ ರಸ್ತೆ ಅಪಘಾತದಲ್ಲಿ 11,611 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ 51ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆಂದು ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ವರದಿ ಹೇಳಿದೆ.

ಡಿಸಿ, ಸಿಇಒಗಳೊಂದಿಗಿನ ಸಭೆಯಲ್ಲಿ ಮಂಗಳವಾರ ಈ ವಿಚಾರ ಚರ್ಚೆಗೊಳಗಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಪಘಾತ ವಲಯ ಮತ್ತು ಬ್ಲ್ಯಾಕ್‌ಸ್ಪಾಟ್ ಗುರುತಿಸಿ ಕೈಕಟ್ಟಿ ಕುಳಿತರೆ ನಿಮ್ಮ ಜವಾಬ್ದಾರಿ ಮುಗೀತಾ? ರಸ್ತೆಗಳಿದು ಸುರಕ್ಷತೆ ಪರೀಕ್ಷಿಸಿ ಎಂದು ಖಡಕ್ ಸೂಚನೆ ನೀಡಿದ್ದಾರೆ.

ಕರ್ನಾಟಕದಲ್ಲಿ ವರ್ಷಕ್ಕೆ ಸರಾಸರಿ ಸುಮಾರು 10ಸಾವಿರ ಸಾವುಗಳು ರಸ್ತೆ ಅಪಘಾತದಲ್ಲಿ ಸಂಭವಿಸುತ್ತಿವೆ. ಅಂದರೆ, ಪ್ರತೀ ನಾಲ್ಕು ತಾಸಿಗೆ 5 ಜೀವ ಬಲಿಯಾಗುತ್ತಿವೆ. ರಾಜ್ಯದಲ್ಲಿ ರಸ್ತೆ ಅಪಘಾತದಿಂದ ಉಂಟಾಗುವ ಸಾವುನೋವುಗಳಲ್ಲಿ ಸುಮಾರು ಶೇ.50ರಷ್ಟು ಕೇವಲ 10 ಜಿಲ್ಲೆಗಳಲ್ಲಿ ಸಂಭವಿಸಿವೆ.
ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ 30 ಜಿಲ್ಲೆಗಳಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ 34,916 ಅಪಘಾತಗಳು ಸಂಭವಿಸಿದ್ದು, 9943 ಜನರು ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಅತೀ ಹೆಚ್ಚು 2676 ಅಪಘಾತಗಳು ಸಂಭವಿಸಿದ್ದು, 738 ಜನ ಮೃತಪಟ್ಟಿದ್ದಾರೆ. ಅತೀ ಕಡಿಮೆ ಅಪಘಾತ ಸಂಭವಿಸಿದ್ದು ಗದಗ ಜಿಲ್ಲೆಯಲ್ಲಿ. ಇಲ್ಲಿ 339 ಅಪಘಾತಗಳಷ್ಟೇ ಘಟಿಸಿದ್ದರೂ 168 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ 535 ಅಪಘಾತಗಳಾಗಿದ್ದು, 83 ಜನರ ಜೀವಹಾನಿಯಾಗಿದೆ.

ನಗರ ಪ್ರದೇಶದಲ್ಲಿ 1,668 ಜನ ಮೃತ್ಯು

ನಗರ ಪ್ರದೇಶಗಳಲ್ಲಿನ ಅಪಘಾತಗಳನ್ನು ಗಮನಿಸಿದರೆ, ಬೆಂಗಳೂರು ನಗರದಲ್ಲೇ ಗರಿಷ್ಠ 5057 ಅಪಘಾತಗಳು ಘಟಿಸಿ 901 ಜನರು ಮೃತ್ಯುವನ್ನಪ್ಪಿದ್ದಾರೆ. ಮೈಸೂರು ನಗರದಲ್ಲಿ ಸಂಭವಿಸಿದ 1054 ಅಪಘಾತಗಳಲ್ಲಿ 168 ಜನ ಸಾವನ್ನಪ್ಪಿದ್ದಾರೆ. ಮಂಗಳೂರು ನಗರದಲ್ಲಿ 1003 ಅಪಘಾತಗಳಲ್ಲಿ 147 ಜನರು ಕೊನೆಯುಸಿರೆಳೆದಿದ್ದಾರೆ. ರಾಜ್ಯದ ಏಳು ನಗರಗಳಲ್ಲಿ ರಸ್ತೆ ಅಪಘಾತದಿಂದ 1,668 ಜನರು ಮೃತಪಟ್ಟಿದ್ದು, 8,388 ಜನ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಿಂದ 35% ಸಾವು

ರಾಜ್ಯದಲ್ಲಿ 14 ರಾಷ್ಟ್ರೀಯ ಹೆದ್ದಾರಿ ಮತ್ತು 114 ರಾಜ್ಯ ಹೆದ್ದಾರಿಗಳು ಶೇ.63 ಸಾವುಗಳಿಗೆ ಕಾರಣವಾಗಿವೆ. ಕರ್ನಾಟದಲ್ಲಿರುವ 7,652 ಕಿಮೀ ಉದ್ದವಿರುವ ರಾಷ್ಟ್ರೀಯ ಹೆದ್ದಾರಿಯು ಶೇ.35 ಸಾವುಗಳು ಮತ್ತು ಶೇ.33 ಅಪಘಾತಗಳಿಗೆ ಕಾರಣವಾಗಿದೆ. ಅಲ್ಲದೇ 27,880 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಶೇ.28ರಷ್ಟು ಸಾವುಗಳು ಮತ್ತು ಶೇ.25 ಅಪಘಾತಗಳಿಗೆ ಹೇತುವಾಗಿದೆ.

ಅತಿ ವೇಗವು ಶೇ.90 ಸಾವುಗಳಿಗೆ ಕಾರಣವಾಗುತ್ತದೆ. ಶೇ.81 ಸಾವುಗಳು ದ್ವಿಚಕ್ರ ವಾಹನ ಮತ್ತು ಲಘು ಮೋಟಾರು ವಾಹನಗಳಿಂದಾಗಿವೆ. ಶೇ.38ರಷ್ಟು ಸಾವುಗಳು ನಿರ್ಬಂಧಗಳ ಉಲ್ಲಂಘನೆಯಿಂದ ಸಂಭವಿಸುತ್ತಿವೆ ಕರ್ನಾಟಕ ಸರ್ಕಾರದ 2023ರ ಆರ್ಥಿಕ ಸಮೀಕ್ಷೆ ಹೇಳಿದೆ.

ದೇಶದಲ್ಲಿ ಐದನೇ ಸ್ಥಾನದಲ್ಲಿದೆ ಕರ್ನಾಟಕ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಪಘಾತಗಳ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿವರ್ಷ ನಡೆಯುವ ರಸ್ತೆಅಪಘಾತದಲ್ಲಿ ಕರ್ನಾಟಕದ ಪಾಲು ಶೇ.8.6ರಷ್ಟಿದೆ. ಇಡೀ ದೇಶದ ರಸ್ತೆ ಅಪಘಾತಗಳಲ್ಲಿನ ಸಾವಿನ ಪ್ರಮಾಣದಲ್ಲಿ ಶೇ.6.9 ಸಾವುನೋವುಗಳು ಕರ್ನಾಟಕದಲ್ಲಿ ಸಂಭವಿಸುತ್ತವೆ. ದೇಶದ ಐದನೇ ಅತೀ ಹೆಚ್ಚು ಸಾವುನೋವು ಸಂಭವಿಸುವ ರಾಜ್ಯ ಕರ್ನಾಟಕ. ದ್ವಿಚಕ್ರ ವಾಹನಗಳಲ್ಲಿ ಸಾವುನೋವು ಸಂಭವಿಸುವ ನಾಲ್ಕನೇ ಮತ್ತು ತಲಾವಾರು ಸಾವುಗಳಲ್ಲಿ 2ನೇ ರಾಜ್ಯವಾಗಿದೆ. ರಸ್ತೆ ಅಪಘಾತಗಳ ಸಾವುನೋವಿನಲ್ಲಿ ಮಹಾನಗರಗಳ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.

More News

You cannot copy content of this page