————ವಿವೇಕಾನಂದ. ಎಚ್. ಕೆ. ಹಿರಿಯ ಪತ್ರಕರ್ತರು ——————-
ರಾಜ್ಯದ 224 ಚುನಾಯಿತ ಶಾಸಕರಾದ ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಒಟ್ಟಿಗೆ ಸೇರಿ ವಿಚಾರ ವಿನಿಮಯ ಮಾಡುವ ಸಮಾವೇಶ. ಇದನ್ನು ಕೆಳಮನೆ ಎಂದು ಕರೆಯಲಾಗುತ್ತದೆ. ಹಾಗೆಯೇ 75 ಜನ ವಿಧಾನಪರಿಷತ್ತಿನ ಸದಸ್ಯರ ಮತ್ತೊಂದು ಸಭೆ ಇದೇ ರೀತಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ವಿಧಾನ ಪರಿಷತ್ತು ಅಥವಾ ಮೇಲ್ಮನೆ ಎಂದು ಕರೆಯಲಾಗುತ್ತದೆ……
ಶಾಸಕಾಂಗದ ಬಹುಮುಖ್ಯ ಭಾಗವಾದ ಈ ಅಧಿವೇಶನಕ್ಕಾಗಿ ರಾಜ್ಯ ಬೊಕ್ಕಸದ ಬಹುದೊಡ್ಡ ಹಣವನ್ನು ಖರ್ಚು ಮಾಡಲಾಗುತ್ತದೆ.
38 ಜನರ ಸಚಿವ ಸಂಪುಟದ ಆಡಳಿತ ಪಕ್ಷದ ಕಾರ್ಯ ನಿರ್ವಹಣೆ ಅಗ್ನಿಪರೀಕ್ಷೆಗೆ ಒಳಪಡುತ್ತದೆ. ನಿಜಕ್ಕೂ ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಈ ಅಧಿವೇಶನದಲ್ಲಿ ಚರ್ಚಿಸಿ ಅದಕ್ಕೆ ಪರಿಹಾರಗಳನ್ನು ಕಂಡುಹಿಡಿಯುವುದು ಇದರ ಬಹುಮುಖ್ಯ ಉದ್ದೇಶ. ಸ್ವಾತಂತ್ರ್ಯ ಬಂದು ಪ್ರಜಾಪ್ರಭುತ್ವ ಸ್ಥಾಪಿತವಾದ ದಿನದಿಂದಲೂ ವರ್ಷಕ್ಕೆ ನಾಲ್ಕೈದು ಬಾರಿ ಈ ಅಧಿವೇಶನಗಳು ನಿರಂತರವಾಗಿ ನಡೆಯುತ್ತಲೇ ಬಂದಿದೆ. ವಿಧಾನಸಭಾಧ್ಯಕ್ಷರು ಮತ್ತು ವಿಧಾನ ಪರಿಷತ್ತಿನ ಸಭಾಧ್ಯಕ್ಷರು ಈ ಕಾರ್ಯಕಲಾಪಗಳನ್ನು ಪಕ್ಷಾತೀತವಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಹೊಂದಿದ್ದಾರೆ……
ಆದರೆ ಹಿಂದಿನ ಕಾಲಘಟ್ಟದ ಕೆಲವು ಅತ್ಯಂತ ಗುಣಮಟ್ಟದ ಪ್ರಮುಖ ಅಧಿವೇಶನಗಳನ್ನು ಹೊರತುಪಡಿಸಿದರೆ, ಅದರಲ್ಲೂ ಇತ್ತೀಚಿನ ಆಧುನಿಕ ಕಾಲದ ವಿಧಾನಸಭಾ ಅಧಿವೇಶನದ ಕಾರ್ಯಕಲಾಪಗಳನ್ನು ಗಮನಿಸಿದರೆ ನಾಚಿಕೆ, ವಿಷಾದ, ಆಕ್ರೋಶ, ಕಣ್ಣೀರು ಒಟ್ಟಿಗೆ ಉಂಟಾಗುತ್ತದೆ. ಏಕೆಂದರೆ ಇದೊಂದು ಯುದ್ಧ ಭೂಮಿಯಂತೆ, ಕುರುಕ್ಷೇತ್ರದಂತೆ, ಯುದ್ಧಕಾಂಡದಂತೆ, ಜಂಗೀ ಕುಸ್ತಿಯಂತೆ, ತರಲೆಗಳ ಆಟದಂತೆ, ಹರಟೆ ಕೇಂದ್ರದಂತೆ, ಕುತಂತ್ರಿಗಳ ಜಾಲದಂತೆ, ಸೋಮಾರಿಗಳ ಸಂತೆಯಂತೆ. ಉಡಾಫೆ ಮನೋಭಾವದ ಜಗಳಗಂಟರ ಜಾತ್ರೆಯಂತೆ ಬಹುತೇಕ ನಮಗೆ ಕಂಡು ಬರುತ್ತದೆ…..
ಮಾತಿನ ಬಲ ಪ್ರದರ್ಶನ, ಕೂಗಾಟ, ರಂಪಾಟ, ಕೆಲವೊಮ್ಮೆ ನೂಕಾಟ, ತಳ್ಳಾಟ, ಸಭಾತ್ಯಾಗ, ಬಹಿಷ್ಕಾರ, ಬಲಪ್ರಯೋಗ, ರಾತ್ರಿ ಇಡೀ ಪ್ರತಿಭಟನೆ ಹೀಗೆ ಮುಖ್ಯವಾದ ಚರ್ಚೆ ಮಂಥನಗಳನ್ನು ಹೊರತುಪಡಿಸಿ, ಇತರ ಎಲ್ಲಾ ಚಟುವಟಿಕೆಗಳು ನಡೆಯುತ್ತವೆ. ರಾಜ್ಯದ ಎಲ್ಲಾ ಒಟ್ಟು ಸಂಪನ್ಮೂಲಗಳ ಒಡೆತನವನ್ನು ಹೊಂದಿ, ಅದನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿ, ಇಡೀ ಜನಸಮೂಹಕ್ಕೆ ಮಾರ್ಗದರ್ಶಕವಾಗಬೇಕಾದ ವಿಧಾನಸಭಾ ಅಧಿವೇಶನ ಈ ರೀತಿ ದುರುಪಯೋಗವಾಗುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ……
ಇಲ್ಲಿ ಆ ಪಕ್ಷ ಈ ಪಕ್ಷ, ಅವರು ಇವರು ಎನ್ನುವ ಭೇದವಿಲ್ಲದೆ ಎಲ್ಲರ ವರ್ತನೆಯು ಬಹುತೇಕ ಒಂದೇ ರೀತಿ ಇರುತ್ತದೆ. ಪಾತ್ರಗಳು ಮಾತ್ರ ಅದಲು ಬದಲಾಗುತ್ತಿರುತ್ತದೆ. ನಾವು ಸಹ ಇದನ್ನು ದೂರದರ್ಶನದ ನೇರ ಪ್ರಸಾರದಲ್ಲಿ ಒಂದು ಮನರಂಜನಾ ಕಾರ್ಯಕ್ರಮದಂತೆ ವೀಕ್ಷಿಸಬೇಕಾಗಿದೆ…..
ಒಂದು ವೇಳೆ ಈ ಅಧಿವೇಶನಗಳು ಜನಮುಖಿಯಾಗಿ ಕೆಲಸ ಮಾಡಬೇಕೆಂಬ ಸಂಕಲ್ಪದಿಂದ ಕಾರ್ಯನಿರ್ವಹಿಸಿದರೆ, ಅದೊಂದು ಅದ್ಭುತ ಚಿಂತನ ಮಂಥನಗಳ ವೇದಿಕೆಯಾಗುತ್ತದೆ.12 ನೆಯ ಶತಮಾನದ ವಚನಕ್ರಾಂತಿಯ ಅನುಭವ ಮಂಟಪದಂತೆ ವಿಚಾರಗಳು ಹೊರಹೊಮ್ಮುತ್ತದೆ. ಹೊಸ ಹೊಸ ಕಾನೂನುಗಳು, ಹಳೆಯ ನ್ಯೂನ್ಯತೆಯುಳ್ಳ ಕಾನೂನುಗಳಿಗೆ ತಿದ್ದುಪಡಿ, ಕಾರ್ಯಾಂಗದ ಮೇಲೆ ಸಂಪೂರ್ಣ ನಿಯಂತ್ರಣ, ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳ ಪ್ರಾಮಾಣಿಕ ಅನುಷ್ಠಾನ, ಹೊಸ ಹೊಸ ಸಮಸ್ಯೆಗಳಿಗೆ ಹೊಸ ಹೊಸ ಪರಿಹಾರಗಳು, ಇಡೀ ನೋಡುಗರ, ಕೇಳುಗರ ಮನದಾಳದಲ್ಲಿ ಅದ್ಭುತ ಚಿಂತನೆಗಳ ಮಾದರಿಯಾಗಿ ಈ ಅಧಿವೇಶನವನ್ನು ಮಾಡಬಹುದು. ಒಬ್ಬೊಬ್ಬ ಶಾಸಕ ಜನಪ್ರತಿನಿಧಿಗಳು ಅಥವಾ ಮಂತ್ರಿ ಮಹೋದಯರು ತಮ್ಮೆಲ್ಲ ಅನುಭವಗಳನ್ನು, ಜ್ಞಾನವನ್ನು ಇಲ್ಲಿ ಪ್ರಾಮಾಣಿಕವಾಗಿ ಹಂಚಿಕೊಂಡರೆ ನಿಜಕ್ಕೂ ಅದೊಂದು ಬಹುದೊಡ್ಡ ಸಾಧನೆಯಾಗುತ್ತದೆ……
ನ್ಯಾಯಾಲಯಗಳಲ್ಲಿ ವಕೀಲಿಕೆಗಳು ನಡೆದು ಅದಕ್ಕೆ ಅನೇಕ ಇತಿಮಿತಿಗಳಿರುತ್ತದೆ. ಆದರೆ ವಿಧಾನಸಭೆಯ ಅಧಿವೇಶನದಲ್ಲಿ ಆ ರೀತಿ ಯಾವುದೇ ಇತಿಮಿತಿ ಇರುವುದಿಲ್ಲ. ಸ್ವಲ್ಪ ಹೆಚ್ಚು ಕಡಿಮೆ ಮುಕ್ತ ಸ್ವಾತಂತ್ರ್ಯ ಹೊಂದಿರುತ್ತದೆ. ಇಲ್ಲಿ ಎಲ್ಲವನ್ನು ಬಿಡಿ ಬಿಡಿಯಾಗಿ, ಸಮಗ್ರವಾಗಿ, ಮುಕ್ತವಾಗಿ ಮಾತನಾಡಬಹುದು. ಅಷ್ಟೊಂದು ಅಭೂತಪೂರ್ವ ಸ್ವಾತಂತ್ರ್ಯ ಇದ್ದಾಗಿಯೂ ಈ ಅಧಿವೇಶನಗಳು ಭಯಂಕರ ಕೆಳಮಟ್ಟದ ದಗಾಕೋರ ಸಂಸ್ಥೆಗಳಂತೆ ಕಾರ್ಯನಿರ್ವಹಿಸುವುದು ನಿಜಕ್ಕೂ ಬೇಸರದ ಸಂಗತಿ. ಪಕ್ಷಗಳ ಸೈದ್ಧಾಂತಿಕ ನಿಲುವುಗಳ ಗುಲಾಮಗಿರಿಯಂತೆ ಸದಸ್ಯರು ಕಾರ್ಯನಿರ್ವಹಿಸುತ್ತಾರೆ……
ಇದರ ಸುಧಾರಣೆಗೆ ಹೆಚ್ಚು ಮಹತ್ವ ಕೊಡಬೇಕಾಗಿದೆ. ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಬೇಕಾಗಿದೆ. ಮಿತಿಮೀರಿದಲ್ಲಿ ಶಾಸಕ ಸ್ಥಾನವನ್ನೇ ರದ್ದುಗೊಳಿಸುವಂತಹ ಕಾನೂನು ಜಾರಿಯಾಗಬೇಕು. ಅಧಿವೇಶನದ ತೂಕ ಹೆಚ್ಚಾಗಬೇಕು. ಸರಳತೆ, ಪ್ರಾಮಾಣಿಕತೆ, ದಕ್ಷತೆ, ಪಾರದರ್ಶಕತೆ ಸೃಷ್ಟಿಯಾಗಬೇಕು. ಆಗ ಮಾತ್ರ ಈ ಅಧಿವೇಶನಗಳಿಗೆ ಪ್ರಾಮುಖ್ಯತೆ ಇರುತ್ತದೆ. ಇಲ್ಲದಿದ್ದರೆ ಇದೊಂದು ದುಂದು ವೆಚ್ಚದ, ಕಾಟಾಚಾರದ ಒಂದು ಶಿಷ್ಟಾಚಾರದ ನಡವಳಿಕೆ ಮಾತ್ರ ವಾಗುತ್ತದೆ…..
ದಯವಿಟ್ಟು ಜನಪ್ರತಿನಿಧಿಗಳೇ, ತೀರ ಕೆಳ ಹಂತಕ್ಕೆ ಇಳಿಯಬೇಡಿ. ಒಂದಷ್ಟು ಪ್ರಜಾಪ್ರಭುತ್ವದ ಘನತೆ, ಗೌರವಗಳನ್ನು ಕಾಪಾಡಿ ಎಂದು ಸಾರ್ವಜನಿಕರ ಪರವಾಗಿ ಮನವಿ ಮಾಡಿಕೊಳ್ಳುತ್ತಾ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,