ಬೆಂಗಳೂರು : ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ವಿಧೇಯಕ ಮಂಡನೆಗೆ ಒಪ್ಪಿಗೆ ನೀಡಲಾಗಿದೆ. ‘ದಿ ಕರ್ನಾಟಕ ಸ್ಟೇಟ್ ಎಂಪ್ಲಾಯ್ ಮೆಂಟ್ ಆಫ್ ಲೋಕಲ್ ಕ್ಯಾಡಿಡೇಟ್ಸ್ ಇನ್ ದಿ ಇಂಡಸ್ಟ್ರೀಸ್, ಫ್ಯಾಕ್ಟರೀಸ್ ಆ್ಯಂಡ್ ಲೋಕಲ್ ಎಷ್ಟಾಬ್ಲಿಷ್ಮೆಂಟ್ ಬಿಲ್-2024 ವಿಧೇಯಕದಂತೆ ಮ್ಯಾನೇಜ್ಮೆಂಟ್ ಹುದ್ದೆಗಳು ಶೇ.50 ಹಾಗೂ ನಾನ್ ಮ್ಯಾನೇಜ್ಮೆಂಟ್ ಶೇ.75ರಷ್ಟು ಹುದ್ದೆಗಳು ಸ್ಥಳೀಯರಿಗೆ ಮೀಸಲಿಡಲಾಗುತ್ತದೆ.
ಕರ್ನಾಟಕದಲ್ಲಿಯೇ ಹುಟ್ಟಿದವರು, ಕರ್ನಾಟಕದಲ್ಲಿ 15 ವರ್ಷದಿಂದ ವಾಸಿಸುತ್ತಿರುವವರು, ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರುವವರು, ನೋಡಲ್ ಏಜೆನ್ಸಿ ನಡೆಸುವ ಕನ್ನಡ ಕುರಿತು ಪರೀಕ್ಷೆಯಲ್ಲಿ ಪಾಸಾದವರನ್ನು ಸ್ಥಳೀಯರು ಎಂದು ಪರಿಗಣಿಸಲಾಗುವುದು. ಮ್ಯಾನೇಜ್ಮೆಂಟ್ ನಲ್ಲಿ ಸೂಪರ್ವೈಸರ್, ಮ್ಯಾನೇಜಿರಿಯಲ್, ಟೆಕ್ನಿಕಲ್, ಆಪರೇಷನಲ್, ಆಡಳಿತ ಸೇರಿ ಉನ್ನತ ಹುದ್ದೆಗಳಲ್ಲಿ ಶೇ.50 ಉದ್ಯೋಗ ಸ್ಥಳೀಯರಿಗೆ ಮೀಸಲಿಡಲಾಗುವುದು. ಇನ್ನು ನಾನ್-ಮ್ಯಾನೇಜ್ಮೆಂಟ್ ನಲ್ಲಿ ಕ್ಲರ್ಕ್ಗಳು, ಕೌಶಲ, ಕೌಶಲ ರಹಿತ ಹಾಗೂ ಅರೆ ಕೌಶಲ, ಗುತ್ತಿಗೆ ನೌಕರ ಹಾಗೂ ಐಟಿ ಹುದ್ದೆಗಳಲ್ಲಿ ಶೇ.75 ಮೀಸಲು ಸ್ಥಳೀಯರಿಗೆ ನೀಡುವ ವಿಧೇಯಕ ಇದಾಗಿದೆ.
ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ದಂಡ ವಿಧಿಸುವ ಅಂಶವನ್ನೂ ವಿಧೇಯಕದಲ್ಲಿ ಸೇರಿಸಲಾಗಿದೆ. ಕನಿಷ್ಠ 10 ಸಾವಿರ ರೂ. ಹಾಗೂ 25 ಸಾವಿರ ರೂ.ಗಳ ವರೆಗೆ ದಂಡ ವಿಸ್ತರಣೆ ಮಾಡಲು ಅವಕಾಶ ನೀಡಲಾಗುತ್ತದೆ. ಆ ನಂತರವೂ ಉದ್ಯೋಗ ನೀಡದೇ ಹೋದರೆ ದಿನಕ್ಕೆ 100 ರೂ. ದಂಡ ವಿಧಿಸಲಾಗುತ್ತದೆ.
ಶಾಲಿನಿ ರಜನೀಶ್ ಮುಂದಿನ ಮುಖ್ಯಕಾರ್ಯದರ್ಶಿ?:

ಅಚಿವ ಸಂಪುಟ ಸಭೆಯಲ್ಲಿ ಮುಂದಿನ ಮುಖ್ಯ ಕಾರ್ಯದರ್ಶಿ ನೇಮಕದ ಅಧಿಕಾರವನ್ನು ಸಿಎಂಗೆ ನೀಡಲಾಗಿದೆ. ಜೇಷ್ಟತೆ ಆಧಾರದಲ್ಲಿ ರಾಜ್ಯದ ಮುಂದಿನ ಮುಖ್ಯಕಾರ್ಯದರ್ಶಿಯಾಗಿ ಅಭಿವೃದ್ಧಿ ಆಯುಕ್ತರಾಗಿರುವ ಶಾಲಿನಿ ರಜನೀಶ್ ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಹೆಸರು ಮುಖ್ಯಕಾರ್ಯದರ್ಶಿ ರೇಸ್ನಲ್ಲಿ ಇತ್ತಾದರೂ ಬಹುತೇಕ ಶಾಲಿನಿ ರಜನೀಶ್ ಅವರಿಗೆ ಅವಕಾಶ ಒಲಿಯುವುದು ನಿಚ್ಚಳವಾಗಿದೆ. ಹಾಲಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಸೇವಾವಧಿ ಜುಲೈ 31ಕ್ಕೆ ಅಂತ್ಯವಾಗಲಿದೆ.
ವಾಲ್ಮೀಕಿ ನಿಗಮದ ಅಕ್ರಮ ಬಗ್ಗೆ ಚರ್ಚೆ:
ಸಚಿವ ಸಂಪುಟ ಸಭೆಯಲ್ಲಿ ವಾಲ್ಮೀಕಿ ನಿಗಮದ ಅಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು. ಪ್ರತಿಪಕ್ಷಗಳ ಆರೋಪಕ್ಕೆ ಗಟ್ಟಿಯಾಗಿ ನಿಂತು ತಕ್ಕ ಉತ್ತರ ನೀಡುವಂತೆ ಸಿಎಂ ಸಂಪುಟ ಸಹದ್ಯೋಗಿಗಳಿಗೆ ಸೂಚಿಸಿದರು. ಈ ಪ್ರಕರಣದಲ್ಲಿ ಸರ್ಕಾರದ ಪಾತ್ರವಿಲ್ಲ. ಪ್ರಕರಣದ ಕುರಿತು ವಿವರವಾದ ಮಾಹಿತಿಯನ್ನು ಲಿಖಿತವಾಗಿ ಸಿದ್ಧಪಡಿಸಿಕೊಂಡಿದ್ದ ಸಿಎಂ, ಸಂಪುಟ ಸಹೋದ್ಯೋಗಿಗಳಿಗೆ ವಿತರಿಸಿ, ಒಟ್ಟಾಗಿ ನಿಲ್ಲುವಂತೆ ಕೋರಿದರು ಎನ್ನಲಾಗಿದೆ.
ಸಂಪುಟದ ಪ್ರಮುಖ ತೀರ್ಮಾನಗಳೇನು?:

-ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಭದ್ರತೆ ನೀಡುವ ಮಂಡಳಿ ಸ್ಥಾಪನೆಗೆ ಸಂಪುಟ ಒಪ್ಪಿಗೆ
-ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 25000 ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್, ಜೆಇಇ, ಸಿಇಟಿ ತರಬೇತಿಯನ್ನು 12.50 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ
-ರಾಜ್ಯದ 10 ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್ ಮ್ಯಾಮೊಗ್ರಾಫಿ ಯಂತ್ರ. 4 ಜಿಲ್ಲಾ ಆಸ್ಪತ್ರೆಗಳಲ್ಲಿ ಕಾಲ್ಕ್ಕಾಪಿ ಉಪಕರಣ 10 ಕೋಟಿ ರೂ. ಅಂದಾಜು ಮೊತ್ತದಲ್ಲಿ ಖರೀದಿಸಲು ಒಪ್ಪಿಗೆ.
-2012ರಲ್ಲಿ ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಪೊಲೀಸ್ ಸಿಬ್ಬಂದಿ, ವಕೀಲರು ಮತ್ತು ಮಾಧ್ಯಮದವರ ನಡುವೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಯ ಅಭಿಯೋಜನಾ ಮಂಜೂರಾತಿ ಕೋರಿಕೆ ತಿರಸ್ಕಾರ.
-ಕರ್ನಾಟಕ ಲೋಕಾಯುಕ ಸಂಸ್ಥೆಯ 2022-23ನೇ ಸಾಲಿನ 37ನೇ ಸಂಚಿತ ವಾರ್ಷಿಕ ವರದಿ ಅಂಗೀಕಾರ
-ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿಗೆ ಎತ್ತಿನಹೊಳೆ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ 62 ಕೆರೆಗಳಿಗೆ ನೀರನ್ನು ತುಂಬಿಸುವ 299 ಕೋಟಿ ರೂ. ಮೊತ್ತದ ಕಾಮಗಾರಿಗೆ ಅನುಮೋದನೆ.
-ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಅಂತರ್ಜಲ ಎತ್ತಿನಹೊಳೆ ಅಭಿವೃದ್ಧಿ ಸಲುವಾಗಿ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ ನೀರನ್ನು 45 ಕೆರೆಗಳಿಗೆ ತುಂಬಿಸುವ ಕಾಮಗಾರಿಯ 302 ಕೋಟಿ ರೂ. ಮೊತ್ತದ ಅಂದಾಜಿಗೆ ಒಪ್ಪಿಗೆ
-ಕರ್ನಾಟಕ ಸರಕು ಮತ್ತು ಸೇವೆಗಳು (ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ