HD REVANNA SPEECH IN ASSEMBLY: ನನ್ನ ಮಗ ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಿ..! ಎಚ್.ಡಿ.ರೇವಣ್ಣ ಭಾವುಕ

ಬೆಂಗಳೂರು : ನನ್ನ ಮಗ ತಪ್ಪು ಮಾಡಿದರೆ ಗಲ್ಲಿಗೆ ಹಾಕಿ ಎಂದು ವಿಧಾನಸಭೆಯಲ್ಲಿ ಎಚ್ ಡಿ ರೇವಣ್ಣ ಭಾವುಕರಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನಿಯಮ 69 ಅಡಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಎಚ್ ಡಿ ರೇವಣ್ಣ ಹಾಗೂ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಆಕ್ಟೀವ್ ಆಗಿ ಕೆಲಸ ಮಾಡುತ್ತದೆ. ಆದರೆ, ವಾಲ್ಮೀಕಿ ಹಗರಣದಲ್ಲಿ ಆರೋಪ ಎದುರಿಸುತ್ತಿರುವವರ ವಿರುದ್ಧ ಅಷ್ಟೇ ಆಸಕ್ತಿಯಿಂದ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ರಿಜ್ವಾನ್ ಅರ್ಷದ್,ಎರಡು ಪ್ರಕರಣವನ್ನು ಹೋಲಿಕೆ ಮಾಡುವುದು ಸರಿಯಲ್ಲ.
ರೇವಣ್ಣ ಪ್ರಕರಣದಲ್ಲಿ ಮಹಿಳೆಯರ ಮಾನ ಹರಾಜಾಗಿದೆ. ಇದರ ವಿರುದ್ಧ ಕ್ರಮ ಆಗ್ಬಾರ್ಬಾ? ರೇವಣ್ಣ ಪ್ರಕರಣ ಗಂಭೀರ ಅಲ್ವಾ? ಎರಡು ಪ್ರಕರಣ ಹೋಲಿಕೆ ಮಾಡುವುದು ಸರಿಯೇ? ಎಂದು ರಿಜ್ವಾನ್ ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯ ನಾರಾಯಣ ಸ್ವಾಮಿ, ಹಣ ಹೋಗಿದೆ ಹಣ ಬರುತ್ತದೆ.ಆದರೆ ಮಾನ ಹೋದರೆ ವಾಪಸ್ ಬರುತ್ತಾ? ಹೆಣ್ಣುಮಕ್ಕಳ‌ಮಾನ ಕಾಪಾಡೋದು ಯಾರು? ಎಂದು ಪ್ರಶ್ನಿಸಿದರು.

ಈ ವೇಳೆ ಎಚ್ ಡಿ ರೇವಣ್ಣ ಮಾತನಾಡಿ,ನಿಮ್ಮ ಬಂಡವಾಳ ಏನು ಅಂತ ಗೊತ್ತಿದೆ. ನನ್ನ ಮಗ ತಪ್ಪು ಮಾಡಿದರೆ ಗಲ್ಲಿಗೆ ಹಾಕಿ. ನನ್ನ ಮೇಲೆ ಯಾರೋ ಹೆಣ್ಣು ಮಕ್ಕಳನ್ನು ಕರೆಸಿಕೊಂಡು ಡಿಜಿ ಕಚೇರಿಯಲ್ಲಿ ದೂರು ಬರೆಸಿಕೊಳ್ಳುತ್ತಾರೆ. ಡಿಜಿ ಆಗಲು ಯೋಗ್ಯನಾ ಅವನು? ಇದು ನೀಚ ಕೆಟ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು,ಪ್ರಜ್ವಲ್ ಮಾಡಿದ್ದು ಸರಿಯಾ? ಡಿಜಿ ದೂರು ತೆಗೆದುಕೊಳ್ಳುವುದು ತಪ್ಪಾ? ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್,ಅಧಿಕಾರಿಗಳ ಬಗ್ಗೆ ಆರೋಪ ಮಾಡ್ತಿದ್ದಾರೆ. ಅನ್ಯಾಯ ಆಗಿದ್ದರೆ ನೋಟಿಸ್ ಕೊಟ್ಟು ಚರ್ಚೆ ಮಾಡಲಿ ಎಂದರು.

ಅಲ್ಲದೆ, ಎಸ್ಐಟಿ ಯನ್ನು ಸಿದ್ದರಾಮಯ್ಯ,ಡಿಕೆಶಿ ತನಿಖಾ ತಂಡ ಎಂದ ಸುರೇಶ್ ಕುಮಾರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ,ಕಾನೂನು ಏನು ಎಂದು ನನಗೆ ಗೊತ್ತಿದೆ.ಎಸ್ ಐ ಟಿಯನ್ನು ಸಿದ್ದರಾಮಯ್ಯ, ಡಿಕೆಶಿ ತನಿಖಾ ಸಂಸ್ಥೆ ಎಂದು ಕರೆಸಿದ್ದು ಸರಿಯಲ್ಲ ಎಂದರು.

More News

You cannot copy content of this page