BJP vs CONGRESS FIGHT IN ASSEMBLY: ಸದನಕ್ಕೆ‌ ಸಿಎಂ ಗೈರಿಗೆ ವಿಪಕ್ಷ ಅಸಮಾಧಾನ,ಸದನದಲ್ಲಿ ಕೋಲಾಹಲ

ಬೆಂಗಳೂರು : ವಾಲ್ಮೀಕಿ ಹಾಗೂ ಮುಡಾ ಹಗರಣದ ಬಗ್ಗೆ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಚರ್ಚೆ ಆರಂಭಿಸುವ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಿಎಂ ಸಿದ್ದರಾಮಯ್ಯ ಗೈರು ವಿಚಾರ ಸದನದಲ್ಲಿ ಗದ್ದಲ ಕೋಲಾಹಲಕ್ಕೆ ಕಾರಣವಾಯ್ತು.

ಪ್ರಶ್ನೋತ್ತರದ ಬಳಿಕ ಆರ್ ಅಶೋಕ್ ಅವರು ನಿಯಮ 69 ರ ಅಡಿಯಲ್ಲಿ ಚರ್ಚೆಗೆ ಎದ್ದು ನಿಂತರು. ಈ ವೇಳೆ ಹಣಕಾಸು ಇಲಾಖೆಯ ಅಧಿಕಾರಿಗಳು ಯಾರೂ ಇಲ್ಲ.
ಮುಂದಿನ ಬೆಂಚು ಖಾಲಿ ಖಾಲಿ ಇದೆ.
ಯಾವ ಅಧಿಕಾರಿಗಳು ಕೂಡಾ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಬಿಜೆಪಿ ಸದಸ್ಯ ಅಶ್ವತ್ಥ ನಾರಾಯಣ ಸಾಥ್ ನೀಡಿ, ಸಿಎಂ ಅವರೇ ಇರಬೇಕಿತ್ತು, ವಿರೋಧ ಪಕ್ಷದ ನಾಯಕರು ಮಾತನಾಡ್ತಿದ್ದಾರೆ. ಯಾರೂ ಇಲ್ವಲ್ಲ ಕರಿಸಿ, ಸಿದ್ದರಾಮಯ್ಯ ಅವರ ವಿರುದ್ಧ ಅಪಾದನೆ ಇದೆ. ಆರ್ಥಿಕ ಇಲಾಖೆಯ ಮೇಲೆ ಅಪಾದನೆ ಇದೆ. ಈ ರೀತಿ ನಡೆದುಕೊಂಡರೆ ಹೇಗೆ, ಅವರಿಗೆ ಬರಲು ಹೇಳಿ ಎಂದು ಏರು ಧ್ವನಿಯಲ್ಲಿ ಆಗ್ರಹಿಸಿದರು.

ಸದನ ನಡಿಯುವಾಗ ಸಿಎಂಗೆ ಪುರುಸೊತ್ತು ಇಲ್ವಾ? ಸಿಎಂ ಅವರು ಸದನಕ್ಕೆ ಬರಲಿ. ಸರ್ಕಾರಕ್ಕೆ ಜವಾಬ್ದಾರಿ ಇಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಶ್ವತ್ಥ ನಾರಾಯಣಗೆ ಭ್ರಷ್ಟಾಚಾರದ ಪಿತಾಮಹ ಎಂದ ಡಿಕೆಶಿ

ಈ ವೇಳೆ ಎದ್ದು ನಿಂತ ಡಿಸಿಎಂ ಡಿಕೆ ಶಿವಕುಮಾರ್, ನೀವು ಲೂಟಿ ಮಾಡಿದ್ದಕ್ಕೆ ನಮ್ಮನ್ನು ಜನ ಇಲ್ಲಿ ಕಳಿಸಿರುವುದು. ಮಾಡಬಾರದು ಮಾಡಿದ್ದೀರಿ, ನೀವು ಲೂಟಿಗಳ ಪಿತಾಮಹ ಎಂದು ತಿರುಗೇಟು ನೀಡಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಅಶ್ವತ್ಥ ನಾರಾಯಣ, ಯಾರು ಲೂಟಿ ಮಾಡಿದ್ದು ಎಂದು ಹೇಳಲಿ. ನನ್ನ ಹೆಸರು ಹೇಳಿ ಅಪಾದನೆ ಮಾಡಿದ್ದಾರೆ. ಇದು ಹಿಟ್ ಆಂಡ್ ರನ್. ನಾನು ಮಾಡಬಾರದು ಏನು ಮಾಡಿದ್ದೇನೆ? ನಿಮ್ಮ ಹಾಗೆ ಓಡಿ ಹೋಗಿಲ್ಲ. ಇಲ್ಲೇ ಇದ್ದೇವೆ. ಅಪಾದನೆ ಮಾಡಿದ್ದಾರೆ, ಅದಕ್ಕೆ ಕ್ಷಮೆ ಕೇಳಬೇಕು. ಈ ರೀತಿಯಲ್ಲಿ ಸದನ ನಡೆಸೋದಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಲೂಟಿ ಕೋರರ ಪಿತಾಮಹ ನೀನು ಎಂದು ಅಶ್ವತ್ಥ ನಾರಾಯಣ ಉಲ್ಲೇಖಿಸಿ ಆರೋಪಿಸಿದ ಡಿಕೆಶಿ, ಸಿಎಂ ಮೇಲೆ ಹೇಗೆ ಅಪಾದನೆ ಮಾಡುತ್ತಾರೆ? ಎಂದು ಗರಂ ಆದರು. ಅಶ್ವತ್ಥ ನಾರಾಯಣ ಅವರಿಗೆ ಬಿಜೆಪಿ ಸದಸ್ಯರು ಸಾಥ್ ನೀಡಿದರು. ಈ ವೇಳೆ ಆಡಳಿತ ಹಾಗೂ ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ಕಾವೇರಿತು. ಪರಿಣಾಮ ಪೀಠದಲ್ಲಿದ್ದ ಉಪಸಭಾಧ್ಯಕ್ಷರು ಎದ್ದು ನಿಂತು ಸಮಾಧಾನಪಡಿಸಬೇಕಾಯು.

ಸದನ ಮುಂದೂಡಿಕೆ

ಆಡಳಿತ ವಿಪಕ್ಷಗಳ ನಡುವೆ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸದನವನ್ನು ಸ್ಪೀಕರ್ ಯು.ಟಿ ಖಾದರ್ ಹತ್ತು ನಿಮಿಷಗಳ ಕಾಲ ಮುಂದೂಡಿದರು.

More News

You cannot copy content of this page