Olympic Games Paris 2024: ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರಾಜ್ಯದ ಕ್ರೀಡಾಪಟುಗಳಿಗೆ ತಲಾ ಐದು ಲಕ್ಷ ರೂ ಮಂಜೂರು ಮಾಡಿದ ಸಿಎಂ

ಬೆಂಗಳೂರು: ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಒಂಬತ್ತು ಮಂದಿ ಕ್ರೀಡಾಪಟುಗಳಿಗೆ ತಲಾ ಐದು ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಜೂರು ಮಾಡಿದ್ದಾರೆ.

ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರುವ ಡಾ.ಕೆ.ಗೋವಿಂದರಾಜು ಅವರು ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹದಾಯವಾಗಿ ತಲಾ 5 ಲಕ್ಷ ರೂಪಾಯಿ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಹಣ ಮಂಜೂರು ಮಾಡಿದ್ದಾರೆ.

ಜುಲೈ 26 ರಿಂದ ಆಗಸ್ಟ್ 11ರ ವರೆಗೆ ಪ್ಯಾರೀಸ್ ನಲ್ಲಿ ಒಲಂಪಿಕ್ ಕ್ರೀಡಾಕೂಟ ನಡೆಯಲಿದೆ.

ಈ ಕ್ರೀಡಾಕೂಟದಲ್ಲಿ ರಾಜ್ಯದ ಪರವಾಗಿ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕುಮಾರಿ ಅಶ್ವಿನಿ ಪೊನ್ನಪ್ಪ, ಮಹಿಳಾ ಗಾಲ್ಫ್ ನಲ್ಲಿ ಕುಮಾರಿ ಅದಿತಿ ಅಶೋಕ್, ಮಹಿಳಾ ಫ್ರೀಸ್ಟೈಲ್ ಈಜು ಸ್ಫರ್ಧೆಯಲ್ಲಿ ಕುಮಾರಿ ಧಿನಿಧಿ ದೇಸಿಂಗೂ , ಮಿಕ್ಸೆಡ್ ರಿಲೇ ಓಟದಲ್ಲಿ ಎಂ.ಆರ್.ಪೂವಮ್ಮ, ಟೇಬಲ್ ಟೆನ್ನಿಸ್ ನಲ್ಲಿ ಕುಮಾರಿ ಅರ್ಚನಾ ಕಾಮತ್, ಪುರುಷರ ಈಜು ಸ್ಫರ್ಧೆಯಲ್ಲಿ ಶ್ರೀಹರಿ ನಟರಾಜ್, ಪುರುಷರ ಟೆನ್ನಿಸ್ ಡಬಲ್ಸ್ ನಲ್ಲಿ ರೋಹನ್ ಭೋಪಣ್ಣ, ಪುರುಷರ 71 ಕೆಜಿ ಬಾಕ್ಸಿಂಗ್ ನಲ್ಲಿ ನಿಶಾಂತ್ ದೇವ್, ಮಿಕ್ಸೆಡ್ ರಿಲೇ ಓಟದಲ್ಲಿ ಮಿಜೋ ಚಾಕೋ ಅವರುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ಒಂಬತ್ತು ಮಂದಿಗೆ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ನಿಂದ ಪ್ರತ್ಯೇಕ ನೆರವು ದೊರೆಯಲಿದೆ ಎಂದು ತಿಳಿಸಿರುವ ಡಾ.ಕೆ.ಗೋವಿಂದರಾಜು ಅವರು ಕ್ರೀಡಾಪಟುಗಳಿಗೆ ಸರ್ಕಾರದ ನೆರವು ದೊರಕಿಸಿಕೊಟ್ಟು ಪ್ರೋತ್ಸಾಹಿಸಿದ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

More News

You cannot copy content of this page