HD KUMARASWAMY: ದೇವೇಗೌಡರನ್ನು ಪ್ರಧಾನಿ, ಕುಮಾರಸ್ವಾಮಿಯನ್ನು ಸಿಎಂ ಮಾಡಿದಿವಿ ಎನ್ನುತ್ತಾರೆ; ಆದರೆ, ನಮ್ಮಿಬ್ಬರ ಸರಕಾರಗಳನ್ನು ತೆಗೆದವರು ಯಾರು?: ಹೆಚ್.ಡಿ. ಕುಮಾರಸ್ವಾಮಿ

ಹಾಸನ: ಪಾಪ ಕನಕಪುರದವರು.. ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟವರು ಹೇಳುತ್ತಿದ್ದಾರೆ! ಕುಮಾರಸ್ವಾಮಿ 39 ಸೀಟ್ ಗೆದ್ದರು, ಮುಖ್ಯಮಂತ್ರಿ ಮಾಡಿದಿವಿ. ದೇವೇಗೌಡರು 16 ಸೀಟ್ ಗೆದ್ದರು, ಪ್ರಧಾನಮಂತ್ರಿ ಮಾಡಿದಿವಿ ಎಂದು ಹೇಳಿದ್ದಾರೆ. ಆದರೆ; ನನ್ನ ಮತ್ತು ದೇವೇಗೌಡರ ಸರಕಾರಗಳನ್ನು ತೆಗೆದವರು ಯಾರು ಎನ್ನುವುದನ್ನು ಅವರು ಹೇಳಬೇಕಲ್ಲವೇ?

ಹೀಗೆಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ಕೊಟ್ಟರು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು.

ಹಾಸನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ಆವತ್ತು ನಾನಾಗಲಿ ಅಥವಾ ದೇವೇಗೌಡರಾಗಲಿ ಕಾಂಗ್ರೆಸ್ ನವರ ಮನೆ ಬಾಗಲಿಗೆ ಬಂದಿದ್ದವಾ? ದೇವೇಗೌಡರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದ್ದು ಕಮ್ಯುನಿಸ್ಟ್ ಪಕ್ಷಗಳು ಹಾಗೂ ಸಂಯುಕ್ತ ರಂಗದ ಅಂಗಪಕ್ಷಗಳು. ಒಬ್ಬ ಕನ್ನಡಿಗನನ್ನು ಪ್ರಧಾನಿ ಸ್ಥಾನದಿಂದ ತೆಗೆದವರು ಯಾರು? ನಾನು ಏನು ತಪ್ಪು ಮಾಡಿದ್ದೆ ಎಂದು ನನ್ನ ಸರಕಾರ ತೆಗೆದರು? ಇದರ ಬಗ್ಗೆಯೂ ಉಪ ಮುಖ್ಯಮಂತ್ರಿ ಹೇಳಬೇಕಲ್ಲವೇ ಎಂದು ಚಾಟಿ ಬೀಸಿದರು.

ದಲಿತರು ಅಂತ ಕರೆಯಬೇಡಿ ಎಂದು ಚರ್ಚೆ ನಡೆದಿದೆ ಈ ಸರಕಾರದಲ್ಲಿ. ಅಹಿಂದ ಎಂದು ಎಷ್ಟು ವರ್ಷದಿಂದ ಇಟ್ಟುಕೊಂಡಿದ್ದೀರಾ? ಅಹಿಂದ ಹೆಸರು ಇಟ್ಟುಕೊಂಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅವಮಾನ ಮಾಡುತ್ತಿದ್ದೀರಾ? ಅವರಿಗೆ ಮೀಸಲಿಟ್ಟಿದ್ದ ಹಣ ದುರುಪಯೋಗ ಮಾಡಿಕೊಂಡಿದ್ದೀರಿ. ದಾನ-ಧರ್ಮ ಮಾಡಿ ಬಂದವರಂತೆ ಇವರು ಮಾತನಾಡುತ್ತಿದ್ದಾರೆ. ಬಹಳ ನೀತಿವಂತರು ಇವರು ಎಂದು ಕೇಂದ್ರ ಸಚಿವರು ಟೀಕಾಪ್ರಹಾರ ನಡೆಸಿದರು.

ಕುಮಾರಸ್ವಾಮಿ ಇಲ್ಲಿ ಏಕೆ ಬರುತ್ತಾನೆ ಉಪ ಮುಖ್ಯಮಂತ್ರಿ ಕೇಳುತ್ತಾರೆ. ಮಿಲಿಟರಿ ಕರೆದುಕೊಂಡು ಬಂದಿದ್ದಾರೆಯೇ ಎನ್ನುತ್ತಾರೆ. ಇಲ್ಲಿಗೆ ಮಿಲಿಟರಿ ಬರುವ ಕಾಲವೂ ಬರುತ್ತದೆ. ಆವರು ಏಕೆ ಆ ರೀತಿಯ ಹೇಳಿಕೆ ಕೊಟ್ಟರು ಎಂದು ನಾನು ಯೋಚನೆ ಮಾಡಿದೆ. ದರೋಡೆ ಮಾಡುವುದನ್ನು ನಿಲ್ಲಿಸಲು ಮಿಲಿಟರಿ ಕರೆದುಕೊಂಡು ಬನ್ನಿ ಎಂಬರ್ಥದಲ್ಲಿ ಅವರು ಹೇಳಿಕೆ ಕೊಟ್ಟಿರಬಹುದು. ಮಿಲಿಟರಿ ಬರುವ ಕಾಲವೂ ಬರುತ್ತದೆ, ಆಗ ಕರೆದುಕೊಂಡು ಬರೋಣವಂತೆ ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ತಿರುಗೇಟು ಕೊಟ್ಟರು.

ಹಾಸನ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಮಳೆ ಅನಾಹುತ ಆಗಿದೆ. ಶಿರಾಡಿ ಘಾಟ್ ರಸ್ತೆಯಲ್ಲಿ ಅವೈಜ್ಞಾನಿಕವಾದ ಕಳಪೆ ಕಾಮಗಾರಿಯನ್ನು ಗಮನಿಸಿದ್ದೇನೆ. ಲೋಕಸಭೆ ಚುನಾವಣೆ ನಂತರ ಮೊದಲ ಬಾರಿಗೆ ಜಿಲ್ಲೆಗೆ ಬಂದಿದ್ದೇನೆ. ಕೇಂದ್ರದ ಸಾರಿಗೆ ಸಚಿವರ ಜತೆಗೂಡಿ ಹಾಸನಕ್ಕೆ ಬರಬೇಕು ಎಂಬ ಉದ್ದೇಶವನ್ನು ಕೂಡ ಹೊಂದಿದ್ದೇನೆ. ಈ ರಸ್ತೆಯನ್ನು ಸುರಂಗ ಮಾರ್ಗದ ಮೂಲಕ ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾಪ ಇತ್ತು. ಅರಣ್ಯ ಇಲಾಖೆಯ ತೊಡಕುಗಳು ಇವೆ, ಅದರ ಬಗ್ಗೆಯೂ ಸಾರಿಗೆ ಸಚಿವರ ಜತೆ ಚರ್ಚಿಸುತ್ತೇನೆ. ನಾಳೆಯಿಂದ ಸಂಸತ್ ಅಧಿವೇಶನ ಪ್ರಾರಂಭ ಆಗುತ್ತಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.

ಸಿಎಂ ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಕಳೆದ ಒಂದು ಕಾಲ ವರ್ಷದಿಂದ ಅವರು ಆಡಳಿತ ನಡೆಸುತ್ತಿದ್ದಾರೆ. 2010-2011 ಇಸವಿಯದ್ದು ಈಗ ಮಾತನಾಡುತ್ತಿದ್ದೀರಾ, ಅವತ್ತು ನಿಮ್ಮ ಗಮನಕ್ಕೆ ಬಂದಿರಲಿಲ್ಲವಾ? ನೀವು ಮಾಡಿರುವ ಅಕ್ರಮಗಳನ್ನು ಮುಚ್ಚಿಕೊಳ್ಳಲು ಈಗ ತನಿಖೆ ಮಾಡಿಸುತ್ತೇವೆ ಎಂದು ಹೇಳುತ್ತಿದ್ದೀರಾ? ಯಾವ ತನಿಖೆ ನಡೆಸಿ ಯಾರ ಮೇಲೆ ಕ್ರಮ ತೆಗೆದುಕೊಳ್ಳುತ್ತೀರಿ? ಸ್ವತಂತ್ರವಾದ ಸರಕಾರವನ್ನು ಜನರು ನನಗೆ ಕೊಡಲಿಲ್ಲ. ನನಗೆ ಕೆಲ ವರದಿಗಳನ್ನು ಕೊಡಲು ಬಿಡಲಿಲ್ಲ. ಮೈಸೂರಿನ ಮುಡಾದಲ್ಲಿ ಅಷ್ಟೆಲ್ಲಾ ತಪ್ಪು ಮಾಡಿ ನನ್ನ ಬಾಮೈದ ತಪ್ಪು ಮಾಡಿದ್ದಾನೆ ಎಂದು ಅವರ ಮೇಲೆ ಹೇಳುತ್ತಿದ್ದಾರೆ ಇವರು. ಆ ಭೂಮಿಯನ್ನು ನಿಮ್ಮ ಬಾಮೈದ ತೆಗೆದುಕೊಳ್ಳಲು ಅವಕಾಶ ಇತ್ತಾ? ಅದು ದಲಿತರಿಗೆ ಸೇರಿದ ಭೂಮಿ ಎಂದು ಕಿಡಿಕಾರಿದರು.

ಸತ್ತವನು ಸ್ವರ್ಗದಿಂದ ಬಂದು ಡಿನೋಟಿಫಿಕೇಷನ್ ಮಾಡಿ ಎಂದು ಅರ್ಜಿ ಹಾಕಿದನಾ?

ಸಿದ್ದರಾಮಯ್ಯ ಅವರೇ ಮುಡಾದಲ್ಲಿ ಯಾರದ್ದೋ ಜಮೀನು, 62 ಕೋಟಿ ಕೊಟ್ಟರೆ ಪುಕ್ಸಟ್ಟೆ ಬಿಟ್ಟುಕೊಡ್ತೀರಾ ನೀವು? 1992ರಲ್ಲಿ ಅಂತಿಮ ಅಧಿಸೂಚನೆ ಆಗಿದೆ. 1998ರಲ್ಲಿ ಅವರು ಬದುಕೇ ಇರಲಿಲ್ಲ. ಡಿನೋಟಿಫೀಕೇಷನ್ ಮಾಡಿ ಎಂದು ಅರ್ಜಿ ಕೊಟ್ಟವರು ಯಾರು? ನಿಂಗ ಎನ್ನುವ ವ್ಯಕ್ತಿ ತೀರಿಕೊಂಡಿದ್ದು ಯಾವಾಗ? ಸ್ವರ್ಗದಿಂದ ಬಂದು ಅರ್ಜಿ ಕೊಟ್ಟು ಡಿನೋಟಿಫಿಕೇಷನ್ ಮಾಡಿ ಎಂದು ಕೇಳಿದ್ರಾ ಅವರು? ಆ ಜಮೀನನ್ನು ನಿಮ್ಮ ಬಾಮೈದ ಖರೀದಿ ಮಾಡಿ ದಾನ ಕೊಟ್ಟ ಎನ್ನುವುದೆಲ್ಲಾ ಬರೀ ಡ್ರಾಮಾ. ಇದರಲ್ಲಿ ನಿಮ್ಮ ಕುಟುಂಬದ ನೇರ ಪಾತ್ರ ಇದೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು.

ಮುಡಾದಲ್ಲಿ ನನ್ನದೂ ನಿವೇಶನ ಇದೆ ಎಂದು ಚರ್ಚೆ ಆಗುತ್ತಿದೆ. ನೂರಾರು ಬಾರಿ ಹೇಳಿದ್ದೇನೆ, ನನ್ನ ಜೀವನ ತೆರೆದ ಪುಸ್ತಕ ಎಂದು. ನನಗೆ 1985ರಲ್ಲಿ 21,000 ಚದರ ಅಡಿ ಜಾಗವನ್ನು ಇಂಡಸ್ಟ್ರಿಯಲ್ ಲೇಔಟ್ ನಲ್ಲಿ ಹಂಚಿಕೆ ಮಾಡಿದ್ದಾರೆ. ನಲವತ್ತು ವರ್ಷದ ಹಿಂದೆ ಅದು ಹಂಚಿಕೆ ಆಗಿದೆ. ದಾಖಲೆ ತೆಗೆಯಿರಿ. ನನಗೆ ಹಂಚಿಕೆ ಆಗಿದ್ದಕ್ಕೆ ಹಣವನ್ನೂ ಕಟ್ಟಿದ್ದೇನೆ. ನನಗೆ ಹಂಚಿಕೆ ಆಗಿರುವ ಜಾಗದಲ್ಲಿ ಯಾವನೋ ಒಬ್ಬ ಕಟ್ಟಡ ಕಟ್ಟಿಕೊಂಡಿದ್ದಾನೆ. ಆತ ಕಟ್ಟಡ ಕಟ್ಟಿರುವುದರಿಂದ ಮತ್ತೆ ಅರ್ಜಿ ಹಾಕುವುದು ಬೇಡ ಅಂದುಕೊಂಡಿದ್ದೆ. ಆದರೆ, ನನ್ನ ಸ್ನೇಹಿತರು ನನ್ನ ಗಮನಕ್ಕೆ ಬಾರದೆ ಸಹಿ ಹಾಕಿಸಿಕೊಂಡು ಹೋಗಿದ್ದಾರೆ. ಇಲ್ಲಿಯವರೆಗೆ ನನಗೆ ಯಾವ ಮಾಹಿತಿಯೂ ಬಂದಿಲ್ಲ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

ಮುಖ್ಯಮಂತ್ರಿಗಳೇ ದಯಮಾಡಿ ಹೇಳ್ತಿನಿ, ದಾಖಲೆಗಳನ್ನು ತೆಗೆದು ನೋಡಿ. ಯಾವ್ಯಾವ ಮಂತ್ರಿಗಳು ಹೇಳಿಕೆ ಕೊಡುತ್ತಿದ್ದಾರೆ ಎಂದು ಜನರ ಮುಂದೆ ಇಟ್ಟುಬಿಡಿ. ವಿಷಯ ತಿಳಿದಕೊಂಡು, ದಾಖಲೆ ಹಿಡಿದುಕೊಂಡು ಮಾತಾಡಬೇಕು. ಮುಡಾದ್ದು ದಾಖಲೆ ಸಮೇತ ಮಾತನಾಡುತ್ತಿದ್ದೇವೆ ನಾವು. ನಿಮಗೆ ನಾಚಿಕೆ ಆಗಲ್ವಾ ಸಿದ್ದರಾಮಯ್ಯನವರೇ..? ನಿಮ್ಮ ಮುಖ ನೋಡಿದರೆ ಗೊತ್ತಾಗುತ್ತದೆ, ನಿಮ್ಮ ಮುಖದಲ್ಲಿ ಪಾಪಪ್ರಜ್ಞೆ ಎನ್ನುವುದು ಎದ್ದು ಕಾಣುತ್ತಿದೆ. ನಿಮಗೆ ಪಾಪಪ್ರಜ್ಞೆ ಕಾಡುತ್ತಿದೆ. ಮಾಧ್ಯಮಗಳ ಮುಂದೆ ಕುಳಿತಾಗ ಗೊತ್ತಾಗುತ್ತಿದೆ, ನಿಮ್ಮನ್ನು ಪಾಪಪ್ರಜ್ಞೆ ಕಾಡುತ್ತಿದೆ ಎಂದು. ವಿಧಾನಸಭೆಯಲ್ಲಿ ನೀವು ಕೊಟ್ಟ ಉತ್ತರ ಇದೆಯಲ್ಲಾ, ಅದನ್ನು ನೋಡಿದರೆ ಗೊತ್ತಾಗುತ್ತದೆ ನಿಮ್ಮ ಸ್ಥಿತಿ. ಹಿಂದೆ ನೀವು ಯಾವ ರೀತಿ ಉತ್ತರ ಕೊಡುತ್ತಿದ್ದಿರಿ, ಶುಕ್ರವಾರ ಯಾವ ರೀತಿ ಉತ್ತರ ಕೊಟ್ಟಿರಿ? ಎಲ್ಲವನ್ನು ಗಮನಿಸಿಸದ್ದೇನೆ. ಈ ಸರಕಾರದ ಪಾಪದ ಕೊಡ ತುಂಬಿ ಹೋಗಿದೆ ಎಂದು ಚುಚ್ಚಿದರು ಕುಮಾರಸ್ವಾಮಿ ಅವರು.

ರಾಮನಗರದಲ್ಲಿ ಬೆಂಗಳೂರು ಕಸ ಸುರಿಯಲು ಹುನ್ನಾರ

ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ನಡೆಯುತ್ತಿರುವ ಹುನ್ನಾರದ ಬಗ್ಗೆ ಟೀಕಿಸಿದ ಕೇಂದ್ರ ಸಚಿವರು; ರಾಮನಗರ ಹೆಸರು ಬದಲಾವಣೆ ಮಾಡಲು ಆಗುತ್ತಾ? ಅವರ ಹೆಸರು ಬದಲಾವಣೆ ಮಾಡಲು ಆಗದಿದ್ದ ಮೇಲೆ ರಾಮನಗರ ಹೆಸರು ಬದಲಾವಣೆ ಮಾಡಲು ಆಗುತ್ತದೆಯೇ? ಅದರ ಬಗ್ಗೆ ಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. 1989ರಲ್ಲಿ ಇವರು ಸಾತನೂರಿನಲ್ಲಿ ಶಾಸಕರಾಗಿರಲಿಲ್ಲವೇ? ಹೇಗಿತ್ತು ಸಾತನೂರು?
ಕನಕಪುರ ಹೇಗಿತ್ತು? ಯಾರಿಂದ ಅಭಿವೃದ್ಧಿ ಆಯಿತು ಎಂಬ ಮಾಹಿತಿ ಇಲ್ಲವೇ ಅವರಿಗೆ ಎಂದು ಡಿಸಿಎಂ ಡಿಕೆಶಿಗೆ ಟಾಂಗ್ ಕೊಟ್ಟರು ಕುಮಾರಸ್ವಾಮಿ.

ಇವರ ಬ್ರ್ಯಾಂಡ್ ಬೆಂಗಳೂರು ರೀತಿ ರಾಮನಗರವನ್ನೂ ಅಭಿವೃದ್ಧಿ ಮಾಡಬೇಕಾ? ರಾಮನಗರ ಜಿಲ್ಲೆ ಅಭಿವೃದ್ಧಿಯಾಗಿ ಹತ್ತು ವರ್ಷಗಳಾಯಿತು. ಇವರು ಬಂದು ಏನು ಅಭಿವೃದ್ಧಿ ಮಾಡುತ್ತಾರೆ? ಈಗ ಬೆಂಗಳೂರಿನ ಜಾಗವನ್ನು ಯಾವನಿಗೋ 45 ಸಾವಿರ ಕೋಟಿಗೆ ಮೂವತ್ತು ವರ್ಷ ಲೀಸ್ʼಗೆ ಕೊಡಲು ಹೊರಟಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಮಾಡೋದು ಕಸ ತುಂಬಿಸಲಿಕ್ಕಾ? ರಾಮನಗರ ತೆಗೆದು ಬೆಂಗಳೂರು ದಕ್ಷಿಣ ಹೆಸರಿಡುವುದು ಬೆಂಗಳೂರಿನ ಕಸ ತಂದು ತುಂಬಿಸಲಿಕ್ಕಾ? ಕಪ್ಪುಪಟ್ಟಿಯಲ್ಲಿ ಇದ್ದವರನ್ನು ಕರೆದುಕೊಂಡು ಬಂದು ಲೀಸ್ ಕೊಡಲು ಹೊರಟಿದ್ದೀರಾ? ಸುಮ್ಮನೆ ಬಾಯಿ ಚಪಲಕ್ಕೆ ಹೇಳುತ್ತಿಲ್ಲ ನಾನು, ಸರಕಾರದಲ್ಲಿ ಏನೇನು ನಡೆದಿದೆ ಎಲ್ಲಾ ಮಾಹಿತಿ ಸಂಗ್ರಹ ಮಾಡಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದರು.

ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ

ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ಯಾರೇ ಅಭ್ಯರ್ಥಿಯಾದರೂ ಅವರು
ಎನ್ಡಿಎ ಅಭ್ಯರ್ಥಿಯಾಗುತ್ತಾರೆ. ಎನ್ಡಿಎ ಅಭ್ಯರ್ಥಿ ನಿಲ್ಲುವುದಷ್ಟೇ ಅಲ್ಲ, ಗೆಲ್ಲಲೇಬೇಕು. ಗೆಲ್ಲುವುದಕ್ಕೆ ಏನೆಲ್ಲಾ ನಿರ್ಧಾರ ಮಾಡಬೇಕೋ ಅದನ್ನೆಲ್ಲಾ ಮಾಡುತ್ತೇವೆ. ಯಾರು ಅಭ್ಯರ್ಥಿ ಎಂದು ಇನ್ನೂ ಚರ್ಚೆ ಹಂತಕ್ಕೆ ಬಂದಿಲ್ಲ. ಕೇಂದ್ರದ ನಾಯಕರು, ರಾಜ್ಯದ ಬಿಜೆಪಿ ನಾಯಕರು ಎಲ್ಲಾ ಕುಳಿತು ಚರ್ಚೆ ಮಾಡುತ್ತೇವೆ. ಯೋಗೇಶ್ವರ್ ಅವರು ಗೆಲ್ಲಲು ಅವಕಾಶ ಇದ್ದರೆ ಅವರೇ ಚುನಾವಣೆಗೆ ನಿಲ್ಲುತ್ತಾರೆ. ಇಲ್ಲವೆಂದರೆ ಬೇರೆ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ಸ್ಥಳೀಯ ಕಾರ್ಯಕರ್ತನಿಗೆ ಟಿಕೆಟ್ ಕೊಡಬೇಕಾ? ಎನ್ನುವ ಬಗ್ಗೆ ತೀರ್ಮಾನ ಮಾಡುತ್ತೇವೆ. ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಹಾಸನದಲ್ಲಿ ಒಬ್ಬ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಹೇಳಿದ್ದೆ. ಗೆಲ್ಲಿಸಲಿಲ್ಲವೇ? ನಮ್ಮ ಪಕ್ಷಕ್ಕೆ ಆ ಶಕ್ತಿ ಇದೆ, ಚನ್ನಪಟ್ಟಣದಲ್ಲೂ ಅಷ್ಟೇ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ಕೆ.ಕುಮಾರಸ್ವಾಮಿ, ಶಾಸಕ ಸಿ.ಎನ್.‌ಬಾಲಕೃಷ್ಣ, ಸ್ವರೂಪ್‌ ಪ್ರಕಾಶ್‌, ಸಿಮೆಂಟ್‌ ಮಂಜುನಾಥ್‌, ಹೆಚ್.ಕೆ.ಸುರೇಶ್‌ ಮುಂತಾದವರು ಹಾಜರಿದ್ದರು.

More News

You cannot copy content of this page