ವಿಧಾನಸಭೆ : ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ತಪ್ಪಿಸಬಹುದಾಗಿದ್ದ ವೆಚ್ಚಗಳನ್ನು ಹಾಗೀ ಆಡಳಿತಾತ್ಮಕ ಲೋಪಗಳನ್ನು ಮಾಡಿದ್ದರಿಂದ,ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿರುವುದನ್ನು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಗುರುತಿಸಿದೆ.
೨೦೨೨ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಈ ವರದಿಯನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಸಂಸದೀಯ ಸಚಿವ ಎಚ್.ಕೆ.ಪಾಟೀಲ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದರು.
ನಾಲ್ಕು ಶಾಸನಬದ್ಧ ನಿಗಮಗಳನ್ನು ಒಳಗೊಂಡAತೆ ೬೮ ಸಾರ್ವಜನಿಕ ವಲಯದ ಉದ್ಯಮಗಳು ಇದ್ದು, ಈ ಪೈಕಿ ೧೧ ಕಂಪನಿಗಳು ಲೆಕ್ಕಪರಿಶೋಧನೆಯ ವೇಳೆ ಸ್ಥಗಿತಗೊಂಡಿದ್ದವು.
ಈ ಪೈಕಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಮಗಕ್ಕೆ ೧೨.೭೮ ಕೋಟಿ ನಷ್ಟವಾಗಿರುವುದು ಕಂಡು ಬಂದಿದೆ.ನಿಗಮದ ಸ್ವಂತ ಕಟ್ಟಡ ನಿರ್ಮಾಣದಲ್ಲಿ ವಿಪರೀತ ವಿಳಂಬವಾದ ಪರಿಣಾಮವಾಗಿ ಇಷ್ಟು ಮೊತ್ತ ಬಾಡಿಗೆ ನೀಡುವಲ್ಲಿ ಸಂದಾಯವಾಗಿದೆ. ಇದು ತಪ್ಪಿಸಬಹುದಾಗಿದ್ದ (ಅನಗತ್ಯ) ವೆಚ್ಚವಾಗಿದೆ ಎಂದು ಸಿಎಜಿ ವಿವರಿಸಿದೆ.

ಶ್ರೀಗಂಧ ಉತ್ಪನ್ನಗಳನ್ನು ತಯಾರಿಸುವ ರಾಜ್ಯದ ಪ್ರತಿಷ್ಠಿತ `ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್’ (ಕೆಎಸ್‌ಡಿಎಲ್) ಸಂಸ್ಥೆಯು ಅನಗತ್ಯವಾಗಿ ಲಾವಂಚ ಬೇರಿನ ತೈಲ ಖರೀದಿಸಿರುವುದು ವರದಿಯಲ್ಲಿ ಬೆಳಕಿಗೆ ಬಂದಿದೆ.
ಸುಗಂಧ ಉತ್ಪನ್ನಗಳಲ್ಲಿ ಲಾವಂಚ ಬೇರಿನ ತೈಲ ಉಪಯೋಗವನ್ನು ನಿಲ್ಲಿಸಬೇಕು ಎನ್ನುವ ನಿರ್ಣಯಕ್ಕೆ ಕೆಎಸ್‌ಡಿಎಲ್ ನಿರ್ದೇಶಕ ಮಂಡಳಿ ೨೦೨೦ರಲ್ಲೇ ಬಂದಿತ್ತು. ಆದಾಗ್ಯೂ ೨೦೨೧ರ ಫೆಬ್ರುವರಿಯಲ್ಲಿ ೧,೮೯೩ ಕಿಲೋಗ್ರಾಂಗಳನ್ನು ಲಾವಂಚದ ಬೇರಿನ ತೈಲವನ್ನು ಖರೀದಿಸಲಾಯಿತು.ಇದರಿಂದ ೪.೮೭ ಕೋಟಿ ನಷ್ಟವನ್ನು ಬೊಕ್ಕಸ ಅನುಭವಿಸಿತು’ ಎಂದು ಸಿಎಜಿ ವರದಿ ಗುರುತಿಸಿದೆ.
ಇನ್ನೊಂದು ಪ್ರಮುಖ ಉದ್ಯಮ ರಂಗವಾಗಿರುವ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯು ೨.೬೪ ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ ಎಂದು ಹೇಳಿದೆ.
ಇಲಾಖೆಗಳ ಪೈಕಿ ಮುಜರಾಯಿ ಅಡಿಯ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಅಸಮರ್ಪಕ ಮೇಲ್ವಿಚಾರಣೆಯನ್ನು ಗುರುತಿಸಲಾಗಿದೆ. ಸಂಸ್ಥೆಯ ಆಸ್ತಿಗಳ ಒತ್ತುವರಿ ತೆರವಿಗೆ ಸಂಘಟಿತ ಯತ್ನ ಆಗಿಲ್ಲ. ಅಲ್ಲದೇ ಸಿ ವರ್ಗದ ದೇಗುಲಗಳು (ಆಸ್ತಿಗಳು) ಕಳೆದ ಐದು ವರ್ಷಗಳಿಂದ ವಾರ್ಷಿಕ ಬಜೆಟ್ ಸಿದ್ಧಪಡಿಸಿಲ್ಲ ಎಂದು ಮಹಾಲೆಕ್ಕಪರಿಶೋಧಕರು ಗಮನಿಸಿದ್ದಾರೆ.
ಅರಣ್ಯ ಇಲಾಖೆಯಲ್ಲಿ ಅಪರಾಧ ಪ್ರಕರಣಗಳ ವಿಲೇವಾರಿ ತುಂಬ ಕಡಿಮೆಯಾಗಿದೆ. ಅರಣ್ಯ ಅತಿಕ್ರಮಣಕಾರರನ್ನು ತೆರವುಗೊಳಿಸುವ ಯಾವುದೇ ಯತ್ನಗಳು ಆಗಿಲ್ಲ. ೨೨,೧೭೩.೧೫ ಎಕರೆ ಅರಣ್ಯ ಭೂಮಿಯ ಅತಿಕ್ರಮಣ ಹೇಗಿತ್ತೋ ಹಾಗೇ ಉಳಿದಿದೆ. ೩,೩೮೨ ಅತಿಕ್ರಮಣ ಪ್ರಕರಣಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ವಶ ಪಡಿಸಿಕೊಂಡಿರುವ ೩೪.೦೭ ಕೋಟಿ ರೂಪಾಯಿ ಮೌಲ್ಯದ ಅರಣ್ಯ ಉತ್ಪನ್ನಗಳನ್ನು ಸಕಾಲಕ್ಕೆ ಸಕ್ಷಮ ಸರ್ಕಾರಿ ವ್ಯವಸ್ಥೆಗೆ ನೀಡದ ಕಾರಣಕ್ಕೆ ಬೊಕ್ಕಸಕ್ಕೆ ನಷ್ಟವಾಗಿರುವುದು ವರದಿಯಿಂದ ಗೊತ್ತಾಗಿದೆ.
— — — — — — —

ಬೆಂಗಳೂರು ನೀರಿಗೆ ಅನಗತ್ಯ ಬೆಲೆಯ ಪೈಪ್ !
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನೀರು ಸರಬರಾಜು ಕಾಮಗಾರಿ ವೇಳೆ ಸರಿಯಾದ ಬೆಲೆ ನಮೂದಿಸದೇ ಇರುವುದರಿಂದ ೨.೬೩ ಕೋಟಿ ಹೆಚ್ಚುವರಿ ವೆಚ್ಚವಾಗಿದೆ.
`ಉಕ್ಕಿನ ಪೈಪ್‌ಗಳ ಬೆಲೆ ಹೊಂದಾಣಿಕೆಯನ್ನು ನಿಯಂತ್ರಿಸಲು ಸೂಕ್ತವಲ್ಲದ ಬೆಲೆ ಸೂಚ್ಯಂಕವನ್ನು ಅಳವಡಿಸಿಕೊಳ್ಳಲಾಯಿತು. ಇದರಿಂದ ಹೆಚ್ಚುವರಿ ವೆಚ್ಚವಾಯಿತು. ಇದನ್ನು ತಪ್ಪಿಸಬಹುದಿತ್ತು’ ಎಂದು ಸಿಎಜಿ ವರದಿ ವಿವರಿಸಿದೆ.
ಕೊಪ್ಪಳದಲ್ಲಿ ನಕಲಿ ಬಿಲ್
ಕೊಪ್ಪಳದ ಲೋಕೋಪಯೋಗಿ ಇಲಾಖೆಯಲ್ಲಿ ನಕಲಿ ಕಾಮಗಾರಿ ಬಿಲ್ ಮೂಲಕ ೧.೭೮ ಕೋಟಿ ಸರ್ಕಾರಿ ಹಣವನ್ನು ಲೂಟಿ ಮಾಡಲಾಗಿದೆ.
ವಾರ್ಷಿಕ ರಸ್ತೆ ನಿರ್ವಹಣೆ ಕಾಮಗಾರಿಗೆ ಸಂಬಧಿಸಿದಂತೆ ನಕಲಿ ಬಿಲ್ ಮೂಲಕ ಸರ್ಕಾರದ ದುರ್ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಮಹಾಲೆಕ್ಕಪರಿಶೋಧಕರು ಗುರುತಿಸಿದ್ದಾರೆ.