BJP PROTEST IN DELHI: ಸಿಎಂ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಬಿಜೆಪಿ ಸಂಸದರ ಪ್ರತಿಭಟನೆ

ಬೆಂಗಳೂರು : ಕರ್ನಾಟಕ ರಾಜ್ಯದ ಆಡಳಿತರೂಢ ಕಾಂಗ್ರೆಸ್ ಪಕ್ಷವು ವಾಲ್ಮೀಕಿ ನಿಗಮದ ಹಣವನ್ನು ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರ ಎಸಗಿರುವುದು ಹಾಗೂ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ (ಮುಡಾ) ಖಾಲಿ ನಿವೇಶನಗಳನ್ನು ಕಾನೂನಾತ್ಮಕವಾಗಿ ಹರಾಜು ಮಾಡದೆ ಭ್ರಷ್ಟಾಚಾರ ಮಾಡಿರುವುದನ್ನು ಖಂಡಿಸಿ ಇಂದು ಸಂಸತ್ ಭವನದ ಆವರಣದಲ್ಲಿ ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿದರು.

ಕರ್ನಾಟಕದಿಂದ ಆಯ್ಕೆಯಾದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಾಗೂ ಜಾತ್ಯತೀತ ಜನತಾದಳ ಪಾರ್ಟಿಗಳ (ಜೆಡಿಎಸ್) ಎರಡೂ ಸದನಗಳ ಸಂಸದರು ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಅಕ್ರಮಗಳನ್ನು ಪ್ರತಿಭಟಿಸುವ ಮೂಲಕ ಸರಕಾರದ ಕಾರ್ಯವೈಖರಿಯನ್ನು ಖಂಡಿಸಿದರು.ಅಲ್ಲದೆ, ಕರ್ನಾಟಕದ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

‘ಕರ್ನಾಟಕದ ದಲಿತರ ಹಣವನ್ನು ಕಾಂಗ್ರೆಸ್ ಪಕ್ಷ ಲೂಟಿ ಮಾಡುತ್ತಿದೆ.ರಾಹುಲ್ ಗಾಂಧಿ ಎಲ್ಲಿದ್ದಾರೆ ಎಲ್ಲಿದ್ದಾರೆ’ ಎಂಬರ್ಥವುಳ್ಳ ಹಿಂದಿ ಘೋಷಣೆ ಕೂಗಿದರು. ‘ಕರ್ನಾಟಕದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ರಾಹುಲ್ ಗಾಂಧಿ ಎಲ್ಲಿದ್ದಾರೆ ಎಲ್ಲಿದ್ದಾರೆ’ ಎಂದು ಕೇಳಿದರು. ‘ಹಠಾವೋ, ಹಠಾವೋ ಭ್ರಷ್ಟ ಮುಖ್ಯಮಂತ್ರಿ ಕೋ ಹಠಾವೋ’ ಎಂಬ ಘೋಷಣೆಯನ್ನೂ ಕೂಗಿದರು.
‘ರಿಟರ್ನ್ ದಿ ಲೂಟೆಡ್ ಮನಿ ಬಿಲಾಂಗಿಂಗ್ ಟು ಎಸ್‍ಟಿ ಕಮ್ಯುನಿಟಿ’, ಮುಡಾ ಹಗರಣದಲ್ಲಿ ಕೋಟಿ ಕೋಟಿ ನುಂಗಿದ ಸಿದ್ದರಾಮಯ್ಯನ ವರಿಗೆ ಧಿಕ್ಕಾರ- ಇವೇ ಮೊದಲಾದ ಪ್ಲಕಾರ್ಡ್ ಹಿಡಿದು ಸಂಸದರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಂಸದ ಜಗದೀಶ ಶೆಟ್ಟರ್ ಅವರು ಮಾಧ್ಯಮಗಳ ಜೊತೆ ಮಾತನಾಡಿ,ಮುಖ್ಯಮಂತ್ರಿಗಳು ಮೂಡಾ ಹಗರಣ ಕುರಿತು ಸದನದಲ್ಲಿ ಮಾತನಾಡಲು ಅವಕಾಶ ಕೊಟ್ಟಿಲ್ಲ.ಇದು ಹಗರಣ ಮುಚ್ಚಿ ಹಾಕುವ ಕೆಲಸ.ನಮ್ಮ ಶಾಸಕರು ಅಹೋರಾತ್ರಿ ಧರಣಿ ಮಾಡಿದ್ದಾರೆ.ನಾವೂ ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿ,ವಾಲ್ಮೀಕಿ ನಿಗಮದಲ್ಲಿ 187 ಕೋಟಿಯ ಹಗರಣ ನಡೆದಿದೆ. ನಕಲಿ ಖಾತೆಗಳಿಗೆ ಹಣ ಹೋಗಿದೆ. ಹಣಕಾಸು ಇಲಾಖೆ ನಿರ್ವಹಿಸುವ ಮುಖ್ಯಮಂತ್ರಿಗಳೇ ಇದಕ್ಕೆ ಜವಾಬ್ದಾರರು.ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಪಿ.ಸಿ.ಮೋಹನ್ ಅವರು ಮಾತನಾಡಿ, ವಾಲ್ಮೀಕಿ ನಿಗಮದ ಹಗರಣ- ಮೂಡಾ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.

More News

You cannot copy content of this page