BJP LEADERS MEETING: ಪಾದಯಾತ್ರೆ ಗೊಂದಲದ ನಡುವೆ ಯತ್ನಾಳ್,ರಮೇಶ್, ಪ್ರತಾಪ ಸಿಂಹ ಸಭೆ

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಟು ಮೈಸೂರು ಬಿಜೆಪಿ ಪಾದಯಾತ್ರೆ ಬಗ್ಗೆ ನಡೆಯುತ್ತಿರುವ ಗೊಂದಲದ ಬೆಳವಣಿಗೆ ನಡುವೆ ಬಿಜೆಪಿ ಶಾಸಕರ ಒಂದು ತಂಡ ಪ್ರತ್ಯೇಕ ಮೀಟಿಂಗ್ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಪಾದಯಾತ್ರೆಗೆ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧವೂ ಯತ್ನಾಳ್ ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕಿದ್ದರು.

ಡಿಸಿಎಂ ಡಿಕೆ ಶಿವಕುಮಾರ್ ಸೂಚನೆಯಂತೆ ಪಾದಯಾತ್ರೆ ನಡೆಸಲಾಗ್ತಿದೆ ಎಂಬ ಗಂಭೀರ ಆರೋಪವನ್ನು ಯತ್ನಾಳ್ ಮಾಡಿದ್ದರು. ಈ ನಡುವೆ ಎಚ್ ಡಿ ಕುಮಾರಸ್ವಾಮಿ ಕೂಡಾ ಪಾದಯಾತ್ರೆಗೆ ಬೆಂಬಲ ಇಲ್ಲ ಎಂದು ಘೋಷಣೆ ಮಾಡಿದ್ದಾರೆ.

ಬಿಜೆಪಿಯ ಪಾದಯಾತ್ರೆ ಗೊಂದಲದ ಬೆನ್ನಲ್ಲೇ ಗುರುವಾರ ಸದಾಶಿವ ನಗರದಲ್ಲಿರುವ ಕುಮಾರ ಬಂಗಾರಪ್ಪ ನಿವಾಸದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಹಾಗೂ ಪ್ರತಾಪ ಸಿಂಹ ಸಭೆ ಸೇರಿದ್ದಾರೆ. ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈವರೆಗೆ ಬಿಜೆಪಿ ನಾಯಕತ್ವದ ವಿರುದ್ಧ ರಮೇಶ್ ಜಾರಕಿಹೊಳಿ ಮತ್ತು ಯತ್ನಾಳ್ ಒಂದು ತಂಡವಾಗಿ ಧ್ವನಿ ಎತ್ತುತ್ತಾ ಬಂದಿದ್ದರು. ಆದರೆ ಅವರ ತಂಡಕ್ಕೆ ಇದೀಗ ಮತ್ತಿಬ್ಬರ ಸೇರ್ಪಡೆ ಆಗಿದೆ. ಪ್ರತಾಪ ಸಿಂಹ ಮತ್ತು ಕುಮಾರ ಬಂಗಾರಪ್ಪ ತಂಡಕ್ಕೆ ಸೇರ್ಪಡೆ ಆದಂತಿದೆ. ಈ ಭಿನ್ನಮತೀಯರ ಸಭೆ ಮತ್ತು ಮಾತುಕತೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಭಿನ್ನಮತ ತೀವ್ರ?

ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆಗಳು ತೀವ್ರಗೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಒಂದು ತಂಡ ಅಸಮಾಧಾನ ವ್ಯಕ್ತಪಡಿಸುತ್ತಿದೆ.

ಅದರಲ್ಲೂ ಪಾದಯಾತ್ರೆಗೆ ಈ ತಂಡ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಪರ್ಯಾಯ ಪಾದಯಾತ್ರೆಯ ಎಚ್ಚರಿಕೆ ನೀಡಿದೆ. ಈ ಬೆಳವಣಿಗೆಯ ನಡುವೆ ಇದೀಗ ಬೆಂಗಳೂರಿನಲ್ಲಿ ನಾಲ್ವರು ಭಿನ್ನಮತೀಯರ ಸಭೆ ಕುತೂಹಲ ಕೆರಳಿಸಿದೆ.

ಇನ್ನು ಇದೇ ವಿಚಾರವಾಗಿ ಸಭೆಯ ಬಳಿಕ ಯತ್ನಾಳ್ ಮಾತನಾಡಿ, ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟದ ಬಗ್ಗೆ ಹಾಗೂ ಪಕ್ಷದಲ್ಲಿ ಇರುವ ಅಸಮಾಧಾನದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಪಕ್ಷ ಎಲ್ಲರನ್ನೂ, ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪ ಇದೆ. ಈ ವಿಚಾರವಾಗಿ ಎಲ್ಲಾ ಕಡೆಗಳಿಂದಲೂ ನಮಗೆ ಕರೆ ಬರುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯಲ್ಲ. ಉಪ ಮುಖ್ಯಮಂತ್ರಿ ಹುದ್ದೆ ಸಂವಿಧಾನಾತ್ಮಕ ಅಲ್ಲ ಹಾಗಿದ್ದರೂ ರಾಜ್ಯಪಾಲರ ನೋಟಿಸ್ ವಿರುದ್ಧ ನಿರ್ಣಯ ಮಾಡಲಾಗಿದೆ. ಇದು ಸಂವಿಧಾನಾತ್ಮಕ ಅಲ್ಲ ಎಂದರು.

ಈ ಎಲ್ಲಾ ಹಿನ್ನೆಲೆಯಲ್ಲಿ ಸಮಾನ ಮನಸ್ಕರು ಸೇರಿ ಬಿಜೆಪಿಯನ್ನು ಪಿತ್ರಾರ್ಜಿತ ಪಕ್ಷವಾಗಿರದೆ, ಎಲ್ಲರ ಪಕ್ಷವಾಗಿ ಮಾಡಲು ಹೋರಾಟ ಮಾಡಲಾಗುವುದು ಎಂದರು‌.

More News

You cannot copy content of this page