ಬೆಂಗಳೂರು : ಸಿಎಂ ಸಿದ್ದರಾಮಯ್ಯ ಗೈರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಡಾ ವಿಚಾರ ವಾಗಿ ರಾಜ್ಯಪಾಲರು ನೀಡಿರುವ ನೋಟೀಸ್ ಹಿಂಪಡೆಯುವಂತೆ ಒತ್ತಾಯಸಲು ನಿರ್ಣಯ ಕೈಗೊಳ್ಳಲಾಗಿದೆ.
ಮುಡಾ ವಿಚಾರವಾಗಿ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ನೋಟೀಸ್ ನೀಡಿರುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೋಟೀಸ್ ಹಿಂಪಡೆಯುವಂತೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಜೊತೆಗೆ ಮುಡಾ ಸಂಬಂಧ ಕಾನೂನು ಹೋರಾಟ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಗೈರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಡಾ ವಿಚಾರವಾಗಿ ರಾಜ್ಯಪಾಲರು ಸಿಎಂಗೆ ನೀಡಿದ ನೋಟೀಸ್ ಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಸಚಿವ ಸಂಪುಟ ಸಭೆ ಬಳಿಕ ಸಚಿವರುಗಳ ಜೊತೆ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ಸಿಎಂಗೆ ಶೋಕಾಸ್ ನೋಟೀಸ್ ಜಾರಿ ಮಾಡಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಗೆ 136 ಸೀಟು ಕೊಟ್ಟು ಆಶೀರ್ವಾದ ಮಾಡಿದೆ. ಸಂವಿಧಾನಕ್ಕೆ ನಾವು ಗೌರವ ಕೊಡುತ್ತೇವೆ. ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿ ಟಿ.ಜೆ.ಅಬ್ರಾಹಂ ಎಂಬ ವ್ಯಕ್ತಿಯ ಮೂಲಕ ಸಿಎಂ ಮೇಲೆ ಅಭಿಯೋಜನೆಗೆ ಯತ್ನಿಸುತ್ತಿದೆ ಎಂದು ದೂರಿದರು.
ಟಿ.ಜೆ.ಅಬ್ರಹಂ ಜು.26ಕ್ಕೆ ರಾಜ್ಯಪಾಲರಿಗೆ ದೂರು ಕೊಡುತ್ತಾರೆ. ಅದೇ ದಿನ ರಾಜ್ಯಪಾಲರು ಬರೆದು ನಿಮ್ಮ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ನಿಮ್ಮ ಮೇಲಿನ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಗೋಚರಿಸುತ್ತಿದೆ. ನಿಮ್ಮ ಮೇಲೆ ಅಭಿಯೋಜನೆಗೆ ಏಕೆ ಅನುಮತಿ ನೀಡಬಾರದು ಏಳು ದಿನಗಳ ಒಳಗೆ ಉತ್ತರ ನೀಡುವಂತೆ ನೋಟೀಸ್ ನೀಡುತ್ತಾರೆ. ಟಿ.ಜೆ.ಅಬ್ರಾಹಂ ಸುಮಾರು 200ಕ್ಕೂ ಅಧಿಕ ದಾಖಲೆಗಳುಳ್ಳ ಪುಟಗಳ ಅರ್ಜಿ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ರಾಜ್ಯಪಾಲರು ಶೋಕಾಸ್ ನೋಟೀಸ್ ಜಾರಿ ಮಾಡಿದ್ದಾರೆ ಎಂದು ದೂರಿದರು.
ಜು.15ರಂದು ರಾಜ್ಯಪಾಲರು ಸಿಎಸ್ ಗೆ ಪತ್ರ ಬರೆದು ಕರ್ನಾಟಕ ರಾಜ್ಯ ರೈತ ಒಕ್ಕೂಟ ಅರ್ಜಿ ಸಲ್ಲಿಸಿ, ಮುಡಾದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ಈ ಸಂಬಂಧ ರೈತರ ದಾಖಲೆಗಳು ಮುಡಾದಿಂದ ಕಣ್ಮರೆಯಾಗಿದೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು. ಇದರ ಮೇರೆಗೆ ಸಿಎಸ್ 170ಕ್ಕೂ ಹೆಚ್ಚಿನ ಪುಟಗಳಲ್ಲಿ ಸವಿವರವಾಗಿ ರಾಜ್ಯಪಾಲರಿಗೆ ವಿವರಣೆ ನೀಡಿದ್ದಾರೆ. ಸಿಎಸ್ ವಿವರಣೆಯನ್ನು ಓದುವ ಮೊದಲೇ ಸಿಎಂಗೆ ಶೋಕಾಸ್ ನೋಟೀಸ್ ಕೊಟ್ಟಿದ್ದಾರೆ. ಏಕೆ ಇಷ್ಟು ತರಾತುರಿ ಮಾಡಿದ್ದಾರೆ. ಯಾರಾದರು ದೂರು ಕೊಟ್ಟರೆ ಏನಾದರು ಆರೋಪ ಸಾಬೀತಾಗಬೇಕು. ತನಿಖಾ ಸಂಸ್ಥೆ ಪ್ರಕರಣ ಸಂಬಂಧ ತನಿಖೆ ನಡೆಸಿ ಅನುಮತಿ ನೀಡುವಂತೆ ಕೋರಿರುತ್ತಾರೆ. ಈ ಬಗ್ಗೆ ಇನ್ನೂ ತನಿಖೆನೂ ಮಾಡಿಲ್ಲ. ಪ್ರಕರಣ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆ. ಅದಕ್ಕೂ ಮೊದಲು ತರಾತುರಿಯಲ್ಲಿ ಸಿಎಂಗೆ ನೋಟೀಸ್ ಕಳಹಿಸಿದ್ದಾರೆ. ಇದು ಪ್ರಜಾಪ್ರಭುತ್ವದ, ಸಂವಿಧಾನದ ಕಗ್ಗೊಲೆಯಾಗಿದೆ ಎಂದು ದೂರಿದರು.
ಶೋಕಾಸ್ ನೋಟೀಸ್ ನೀಡಿ ಇಂದಿಗೆ ಏಳನೇ ದಿನವಾಗಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಅನೇಕ ರಾಜ್ಯಗಳಲ್ಲಿ ರಾಜ್ಯಪಾಲರು ಯಾವ ರೀತಿ ನಡೆದುಕೊಂಡಿದ್ದಾರೆ. ಸಂವಿಧಾನ ಏನಿದೆ. ಸುಪ್ರೀಂ ಕೋರ್ಟ್ ನಲ್ಲಿ ಏನೆಲ್ಲಾ ತೀರ್ಪುಗಳು ಆಗಿವೆ ಎಂಬ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ ನಿವೇಶನ ಹಂಚಿಕೆ ಮಾಡಲಾಗಿದೆ. ಎಲ್ಲಾ ಪಕ್ಷದವರು ಸದಸ್ಯರಿರುವ ಮುಡಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದರಲ್ಲಿ ಯಾವ ಅಕ್ರಮವಾಗಿದೆ?. ಇದರಲ್ಲಿ ಸಿಎಂ ಪ್ರಭಾವ ಏನಿದೆ?. ಹೆಣ್ಣಮಗಳು ಅಣ್ಣ ನೀಡಿದ ಆಸ್ತಿಯನ್ನು ಮುಡಾದವರು ಸ್ವಾಧೀನ ಮಾಡಿದ್ದಾರೆ. ನಮಗೆ ಬದಲಿ ನಿವೇಶನ ಕೊಡಿ ಎಂದು ಮುಡಾಗೆ ಮನವಿ ಮಾಡಿದ್ದರು. ಇದರಲ್ಲಿ ಸಿಎಂ ಪಾತ್ರ ಎಲ್ಲಿದೆ ಎಂದು ಪ್ರಶ್ನಿಸಿದರು.

136 ಸ್ಥಾನ ಕೊಟ್ಟು ಆಶೀರ್ವಾದ ಮಾಡಲು ಹೊರಟ ಸರ್ಕಾರವನ್ನು ಬೀಳಿಸಲು ಹೋಗಿದ್ದಾರೆ. ಇದು ಅಸಾಧ್ಯ. ಸಿಎಂ ಏನಾದರು ಪ್ರಭಾವ ಬಳಸಿದ್ದಾರೆ ಎಂದರೆ ಹೌದು. ಇಲ್ಲಿ ಯಾವ ಪ್ರಭಾವವನ್ನೂ ಬಳಸಿಲ್ಲ. ಹೀಗಾಗಿ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರು ಜು.26ಕ್ಕೆ ಕೊಟ್ಟಿರುವ ಶೋಕಾಸ್ ನೋಟೀಸ್ ನ್ನು ಹಿಂಪಡೆಯಲು ಒತ್ತಾಯಿಸಿ ತೀರ್ಮಾನ ಮಾಡಲಾಗಿದೆ. ಈ ಸಂಬಂಧ 50-60 ಪುಟಗಳ ಕಾನೂನು ಅಂಶಗಳನ್ನೊಳಗೊಂಡ ಸಲಹೆಗಳನ್ನು ರಾಜ್ಯಪಾಲರಿಗೆ ಮಾಡಲು ತೀರ್ಮಾನಿಸಲಾಗಿದೆ. ಟಿ.ಜೆ.ಅಬ್ರಾಹಂ ಅರ್ಜಿಯನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಕಾನೂನಿನ ಚೌಕಟ್ಟಿನಲ್ಲೇ ನಾವು ಹೋಗಿದ್ದೇವೆ. ಈ ಸಂಬಂಧ ಕೋರ್ಟ್ ಗಳ ಹಲವು ತೀರ್ಪುಗಳಿವೆ. ಅದನ್ನೆಲ್ಲಾ ರಾಜ್ಯಪಾಲರು ಪರಿಗಣಿಸುತ್ತಾರೆ. ಅವರು ಖಂಡಿತವಾಗಿ ಟಿ.ಜೆ.ಅಬ್ರಾಹಂ ಅರ್ಜಿಯನ್ನು ತಿರಸ್ಕರಿಸಿ, ಶೋಕಾಸ್ ನೋಟೀಸ್ ವಾಪಾಸು ಪಡೆಯುತ್ತಾರೆ ಎಂಬ ವಿಶ್ವಾಸ ಇದೆ. ಅವರು ಕಾನೂನು ಪ್ರಕಾರ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭಿಯೋಜನೆಗೆ ಕೋರಿ ತನಿಖಾಧಿಕಾರಿ ಮಾತ್ರ ಮನವಿ ಮಾಡಬಹುದು:

ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ, ಸಿಎಂ ಮೇಲೆ ಅಭಿಯೋಜನೆ ಕೋರಿ ಅರ್ಜಿ ಬಂದಾಗ ರಾಜ್ಯಪಾಲರು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚೆಯಾಗಿದೆ. ಆರ್ಟಿಕಲ್ 163 ಸಂಪುಟ ಸಭೆ ತೀರ್ಮಾನ ಆಧಾರಿಸಿ ರಾಜ್ಯಪಾಲರು ನಡೆದುಕೊಳ್ಳಬೇಕು. ಶೋಕಾಸ್ ನೋಟೀಸ್ ಕೊಡಲು ರಾಜ್ಯಪಾಲರಿಗೆ ಅವಕಾಶ ಇಲ್ಲ. 17ಎ ಯಲ್ಲಿ ಪೂರ್ವಾನುಮತಿಯನ್ನು ತನಿಖಾಧಿಕಾರಿ ಮಾತ್ರ ಕೋರಬೇಕು. ಯಾವುದೇ ಆಧಾರ ಇಲ್ಲದ ದೂರಿನ ಮೇರೆಗೆ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಲು ಬರುವುದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ನಾಲ್ಕು ಪುಟುಗಳ ನಿರ್ಣಯ ತೆಗದುಕೊಳ್ಳಲಾಗಿದೆ. 50 ಪುಟದ ದಾಖಲೆಗಳನ್ನು ಹೊಂದಿರುವ ಸಮಗ್ರ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಯಾವುದೇ ಪ್ರಕರಣ ಸಂಬಂದರ ದೂರುದಾರ ಪೊಲೀಸರಿಗೆ ದೂರು ನೀಡಬೇಕು. ಅವರು ಈ ಬಗ್ಗೆ ತನಿಖೆ ಮಾಡಬೇಕೋ ಬೇಡವೋ ಎಂಬ ಬಗ್ಗೆ ತೀರ್ಮಾನಿಸುತ್ತಾರೆ. ದೂರದಾರರಿಗೆ ತನಿಖಾಧಿಕಾರಿಗಳ ಮೇಲೆ ವಿಶ್ವಾಸ ಇಲ್ಲದೇ ಹೋದ ಪಕ್ಷದಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಬಹುದು ಎಂದು ವಿವರಿಸಿದರು.
ಖಾಸಗಿ ವ್ಯಕ್ತಿ ನೇರವಾಗಿ ರಾಜ್ಯಪಾಲರಿಗೆ ದೂರು ನೀಡುವುದು ಕಾನೂನು ವಿರುದ್ಧ:

ಇದೇ ವೇಳೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಒಬ್ಬ ಖಾಸಗಿ ವ್ಯಕ್ತಿ ನೇರವಾಗಿ ರಾಜ್ಯಪಾಲರಿಗೆ ದೂರು ನೀಡಿರುವುದು ಕಾನೂನಿಗೆ ವಿರುದ್ಧವಾಗಿದೆ. ಹಿಂದಿನ ಸಿಎಂ ಯಡಿಯೂರಪ್ಪ ಮೇಲೆ ಪ್ರಕರಣ ದಾಖಲಿಸಲು ನಮಗೆ ರಾಜ್ಯಪಾಲರ ಅನುಮತಿ ಬೇಕು ಎಂದು ಮ್ಯಾಜಿಸ್ಟ್ರೇಟ್ ಕೋರಿದ್ದ ಹಿನ್ನೆಲೆ ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯುಷನ್ ಗೆ ಅನುಮತಿ ನೀಡಿದ್ದರು ಎಂದು ತಿಳಿಸಿದರು.
ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ ಮುಂತಾದವರ ಮೇಲೆ ಪ್ರಾಸಿಕ್ಯುಷನ್ ಗೆ ಅನುಮತಿ ಕೋರಿ ವರ್ಷಗಳ ಹಿಂದೆ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲಾಗಿದೆ. ರಾಜ್ಯಪಾಲರ ಮುಂದೆ ಹಲವು ವರ್ಷಗಳಿಂದ ಇತ್ಯರ್ಥಗೊಳ್ಳದಂತಹ ಬಿಜೆಪಿ ನಾಯಕರ ಅಭಿಯೋಜನಾ ಅರ್ಜಿಗಳು ಕಲಂ 17A, 19 ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ಅಡಿ ಬಾಕಿ ಇದ್ದರೂ ಕೂಡ ಅವುಗಳನ್ನು ಇತ್ಯರ್ಥಗೊಳಿಸಿಲ್ಲ. ಆದರೆ ಈ ಪ್ರಕರಣದಲ್ಲಿ ಕೆಲವೇ ಗಂಟೆಗಳಲ್ಲಿ ಮುಖ್ಯ ಮಂತ್ರಿಗಳ ಮೇಲೆ ವಿಚಾರ ಕೇಳಿ ನೋಟೀಸು ಜಾರಿಗೊಳಿಸಿದ್ದಾರೆ ಎಂದು ದೂರಿದರು.
ಕಾನೂನಾತ್ಮಕವಾಗಿ ಒಂದೊಂದಾಗಿ ಹೆಜ್ಜೆ ಇಡುತ್ತೇವೆ. ಮೊದಲ ಹೆಜ್ಜೆಯಾಗಿ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಒಂದು ವೇಳೆ ನ್ಯಾಯ ಸಿಗದೇ ಇದ್ದರೆ ಬಳಿಕ ಮುಂದಿನ ಕಾನೂನಾತ್ಮಕ ಹೆಜ್ಜೆ ಇಡುತ್ತೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.