CONGRESS JANANDOLANA SAMAVESHA: ಮೈಸೂರಿನಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಸಚಿವರುಗಳ ಹಾಗೂ ಪಕ್ಷದ ಮುಖಂಡರ ಮಾತು

ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೇವಾಲ

ಮಹಾತ್ಮ ಗಾಂಧಿ ಅವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಘೋಷಣೆ ಮಾಡಿದರು. ಕರ್ನಾಕಟದ ಪವಿತ್ರವಾದ ನೆಲದಲ್ಲಿ ವಿಶೇಷವಾದ ಹೋರಾಟಕ್ಕೆ ನಾವು ಮುನ್ನಡಿ ಬರೆದಿದ್ದೇವೆ. ದಲಿತರ, ಆದಿವಾಸಿಗಳ, ಬಡವರ ಪರವಾಗಿ ಕೆಲಸ ಮಾಡುವ ಸಿದ್ದರಾಮಯ್ಯ ಅವರ ವಿರುದ್ದ ಮಾಡಿರುವ ಸುಳ್ಳು ಆರೋಪಗಳ ವಿರುದ್ದ ಉತ್ತರ ನೀಡುವ ಕೆಲಸವಾಗಬೇಕಿದೆ.

ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ಘೋಷಣೆ ಮಾಡಿ ಇದುವರೆಗೂ ನೀಡಿಲ್ಲ. 15 ನೇ ಹಣಕಾಸು ಸಮಿತಿಯಲ್ಲಿಯೂ ಕರ್ನಾಟಕಕ್ಕೆ ಮೋಸ ಮಾಡಲಾಗಿದೆ. ಮೇಕೆದಾಟು, ಮಹದಾಯಿ ಯೋಜನೆಗೆ ಅನುಮತಿ ನೀಡುತ್ತಿಲ್ಲ. ಬೆಂಗಳೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ಕೈ ಜೋಡಿಸುತ್ತಿಲ್ಲ.

ಇವರು ದುರ್ಯೋದನ, ಶಕುನಿಗಳ ರೀತಿ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರ ವಿರುದ್ಧ, ಕಾಂಗ್ರೆಸ್ ವಿರುದ್ಧ ಪಾದಯಾತ್ರೆಯಲ್ಲ ಗ್ಯಾರಂಟಿ ಯೋಜನೆಗಳ ವಿರುದ್ಧ, ಮಹಿಳೆಯರ ವಿರುದ್ಧ.

ಇಂಧನ ಸಚಿವ ಕೆ.ಜೆ.ಜಾರ್ಜ್

ಗ್ಯಾರಂಟಿ ಯೋಜನೆಗಳನ್ನು ಜೆಡಿಎಸ್, ಬಿಜೆಪಿಯವರು ಕೇವಲ ಚುನಾವಣಾ ಗಿಮಿಕ್ ಎಂದು ಜರಿದರು. ಆದರೆ ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್ ಅವರು ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದೆವು. ರಾಜ್ಯದ ಹೆಣ್ಣುಮಕ್ಕಳು ಇದರ ಹೆಚ್ಚು ಲಾಭವನ್ನು ಪಡೆಯುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ಇರುವತನಕ ಐದೂ ಗ್ಯಾರಂಟಿಗಳು ಇದ್ದೇ ಇರುತ್ತವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಾವು ನಿಲ್ಲಿಸುವುದಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳನ್ನೇ ಬೇರೆ ರಾಜ್ಯಗಳು ನಕಲು ಮಾಡುತ್ತಿವೆ.

ಪಾಪದ ವಿಮೋಚನೆಗಾಗಿ ಪಾಪಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆ ಮಾಡಿದ ತಕ್ಷಣ ಅವರ ಪಾಪಗಳೆಲ್ಲಾ ಹೋಗುತ್ತವೆ ಎಂದು ಎಂದುಕೊಂಡರು. ಅವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದರೆ ಸಾಲುವುದಿಲ್ಲ. ಇಡೀ ರಾಜ್ಯ, ದೇಶವನ್ನು ಐದು ಬಾರಿ ಪ್ರದಕ್ಷಿಣೆ ಹಾಕಿದರೆ ಜನರು ಅವರ ಪಾಪಗಳನ್ನು ಕ್ಷಮಿಸಬಹುದು.

2013 ರಿಂದ ಸಿದ್ದರಾಮಯ್ಯ ಅವರ ಸಚಿವಸಂಪುಟದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಷ್ಟು ದಿನಗಳ ಕಾಲ ಅವರನ್ನು ನೋಡಿದ್ಧೇನೆ. ಅವರು ಯಾವುದೇ ಕಾರಣಕ್ಕೂ ಭ್ರಷ್ಟರಾಗಲು ಸಾಧ್ಯವೇ ಇಲ್ಲ. ಅವರಷ್ಟು ಜನಪರವಾಗಿ ಯೋಚನೆ ಮಾಡುವ ವ್ಯಕ್ತಿಯನ್ನು ನಾನು ನೋಡಿಲ್ಲ. ಯಾವುದೇ ಕಾರಣಕ್ಕೂ ಕಾನೂನು ಬಿಟ್ಟು ಕೆಲಸ ಮಾಡುವವರಲ್ಲ. ಆಡಳಿತದಲ್ಲಿ ಕಪ್ಪುಚುಕ್ಕೆಯಿಲ್ಲದ ವ್ಯಕ್ತಿ.

ಸಿದ್ದರಾಮಯ್ಯ ಅವರ ಪತ್ನಿಗೆ ಅಣ್ಣನಿಂದ ಉಡುಗೊರೆ ಬಂದರೆ ಇದರಲ್ಲಿ ಮೋಸವೇನಿದೆ. ಇದು ಹಗರಣ ಹೇಗಾಗುತ್ತದೆ. ಬಿಜೆಪಿ ಸರ್ಕಾರ ಇದ್ದಾಗಲೇ ಸೈಟು ಹಂಚಿಕೆ ಮಾಡಿ. ಈಗ ಅವರೇ ಅವರ ವಿರುದ್ದ ಪಾದಯಾತ್ರೆ ಮಾಡುತ್ತಿದ್ದಾರೆ.

ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ

ಮುಡಾ ಪ್ರಕರಣದಲ್ಲಿ ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಜೆಡಿಎಸ್, ಬಿಜೆಪಿ ಮಾಡಲಾಗುತ್ತಿವೆ. ಕಳೆದ ಒಂದು ತಿಂಗಳಿನಿಂದ ಅನಗತ್ಯ ಚರ್ಚೆಯನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಅವರ ಆರೋಪಗಳಿಗೆ ನಾವು ಈ ಬೃಹತ್ ವೇದಿಕೆಯಲ್ಲಿ ಉತ್ತರ ನೀಡುತ್ತಿದ್ದೇವೆ.

ಕಳೆದ 20 ವರ್ಷಗಳ ಹಳೆಯ ಪ್ರಕರಣವನ್ನು ಮುಂದಿಟ್ಟುಕೊಂಡು ಅನವಶ್ಯಕವಾಗಿ ಸಮಯವನ್ನು ಹಾಳು ಬಿಜೆಪಿ, ಜೆಡಿಎಸ್ ಮಾಡುತ್ತಿವೆ. ವಿರೋಧ ಪಕ್ಷದಲ್ಲಿ ಇದ್ದ ಮಾತ್ರಕ್ಕೆ ನೀವು ಮಾಡಿದ್ದೆಲ್ಲಾ ಸರಿ ಎನ್ನುವ ಧೋರಣೆ ಖಂಡಿತಾ ತಪ್ಪು. ಬಿಜೆಪಿ ತನ್ನ ಅಧಿಕಾರವಧಿಯಲ್ಲಿ 21 ಕ್ಕೂ ಹೆಚ್ಚು ಹಗರಣಗಳನ್ನು ನಡೆಸಿದೆ.

ಬಡವರ ಪರವಾದ ಸರ್ಕಾರಕ್ಕೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ಇದು ಖಂಡನೀಯ. ಕೊರೋನಾ ಸಮಯದಲ್ಲಿ ಬಿಜೆಪಿ ಹಗರಣವನ್ನು ಅವರದೇ ಪಕ್ಷದ ಶಾಸಕ ಹೊರಗೆ ಹಾಕಿದ್ದಾರೆ. 20 ರೂಪಾಯಿ ಮಾಸ್ಕ್ ಅನ್ನು 200 ರೂಪಾಯಿಗಳಿಗೆ ಮಾರಲಾಗಿದೆ. 200 ಕೋಟಿ ಬಿಲ್ ಇದ್ದ ಕಡೆ 400 ಕೋಟಿ ಪಾವತಿ ಮಾಡಲಾಗಿದೆ. ನಿಮ್ಮ ಹುಳುಕುಗಳನ್ನೇ ನೂರಾರು ಇಟ್ಟುಕೊಂಡು ಜನಪರವಾದ ಸರ್ಕಾರದ ವಿರುದ್ದ ಹೀಗೆ ಅನಗತ್ಯ ಆರೋಪ ಮಾಡುವುದು ಸರಿಯಲ್ಲ.

ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್.ಸಿ.ಮಹದೇವಪ್ಪ

ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಎಂದು ನಮ್ಮ ದೇಶದ ಜನರು ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಐತಿಹಾಸಿಕ ಆಂದೋಲನ ನಡೆಯಿತು. ಈ ಜನಾಂದೋಲನ ಸಭೆಗೂ ಕ್ವಿಟ್ ಇಂಡಿಯಾ ಚಳುವಳಿಗೂ ಅವಿನಾಭಾವ ಸಂಬಂಧವಿದೆ. ಕೋಮುವಾದ ಮತ್ತು ಮತೀಯವಾದವನ್ನು ಜೆಡಿಎಸ್, ಬಿಜೆಪಿ ಹರಡುತ್ತಿದ್ದು ಇದನ್ನು ವಿರೋಧಿಸಬೇಕಾಗಿದೆ. ನಮ್ಮ ಮೇಲೆ ಅನವಶ್ಯಕವಾಗಿ ಮಾಡಿರುವ ಆರೋಪಗಳಿಗೆ ಉತ್ತರ ಕೊಡಲು ನಾವು ಸಭೆ ನಡೆಸುತ್ತಿಲ್ಲ. ಅವರ ಕುತಂತ್ರಗಳನ್ನು ಜನರಿಗೆ ತಿಳಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ.

1932 ರ ದುಂಡು ಮೇಜಿನ ಸಭೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬ್ರಿಟೀಷರಿಗೆ ಹೀಗೆ ಹೇಳಿದ್ದರು. ನೀವು ದೇಶ ಬಿಟ್ಟು ಹೋಗುವಾಗ ಪ್ರಜಾತಂತ್ರ ವ್ಯವಸ್ಥೆಯನ್ನು ಸ್ಥಾಪಿಸಿ ಹೋಗಬೇಕು. ಕೋಮುವಾದವನ್ನು ಪ್ರತಿಪಾದನೆ ಮಾಡಿ ಜನರ ಮೂಲಭೂತ ಹಕ್ಕುಗಳನ್ನು ಮರೆಮಾಚಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದ್ದಾರೆ.

ನನ್ನ ರಾಜಕೀಯ ಜೀವನದಲ್ಲಿ ಇಂತಹ ಅನೈತಿಕ ಪಾದಯಾತ್ರೆಯನ್ನು ನೋಡಿರಲಿಲ್ಲ. ಗುರಿ, ಉದ್ದೇಶ ಏನೂ ಇಲ್ಲದ ಸಣ್ಣ ಘಟನೆಯನ್ನು ಹಿಡಿದುಕೊಂಡು ಕುಣಿದು, ಕುಪ್ಪಳಿಸುತ್ತಾ ಕೆಂಗೇರಿಯಿಂದ ಮೈಸೂರಿಗೆ ಬರುತ್ತಿದ್ದಾರೆ. ಅವರ ಪಾದಯಾತ್ರೆಯಲ್ಲಿ ರಾಜ್ಯದ ಹಿತವಿಲ್ಲ, ಸಾಮಾಜಿಕ ನ್ಯಾಯವಿಲ್ಲ. ರಾಜ್ಯದ ಸಮಸ್ಯೆಗಳನ್ನು ಕೇಂದ್ರಕ್ಕೆ ತಿಳಿಸುವ ಇರಾದೆಯಿಲ್ಲ. ಮಂಡಲ್ ಆಯೋಗದ ವಿರುದ್ದ ಓಬಿಸಿಗಳ ಮೀಸಲಾತಿಯ ವಿರುದ್ದ ಇದೇ ಬಿಜೆಪಿ ಹೋರಾಟ ಮಾಡಿತ್ತು. 1965 ರಲ್ಲಿ ನಡೆದ ಕಾಗೋಡು ಸತ್ಯಾಗ್ರಹದಿಂದ ಜಾರಿಗೆ ಬಂದ ಉಳುವವನೇ ಭೂಮಿಯ ಒಡೆಯ ಯೋಜನೆಪರವಾಗಿ ಬಿಜೆಪಿ ಚಳವಳಿ ಮಾಡಲೇಯಿಲ್ಲ. ಕೇಂದ್ರ ಬಜೆಟ್ ಅಲ್ಲಿ ದಲಿತರಿಗೆ ಕೇವಲ 50 ಸಾವಿರ ಕೋಟಿ ಇಟ್ಟಿದ್ದೀರಲ್ಲಾ ಇದರ ಪರವಾಗಿ ಹೋರಾಟ ಮಾಡಲೇಯಿಲ್ಲ.

ಆದರೆ ಅಧಿಕಾರಿಗಳ ತಪ್ಪಿನಿಂದ ಆಗಿರುವ ವಾಲ್ಮೀಕಿ ನಿಗಮ ಹಗರಣವನ್ನು ಎಸ್ ಐಟಿಗೆ ನೀಡಲಾಗಿದೆ. ಇದರ ಬಗ್ಗೆ ಚರ್ಚೆ ಮಾಡಲು ವಿಪಕ್ಷಗಳು ತಯಾರಿಲ್ಲ. ಭೋವಿ ನಿಗಮ, ಗಂಗಾಕಲ್ಯಾಣ, ಪ್ರವಾಸೋದ್ಯಮ ಸೇರಿದಂತೆ ಅನೇಕ ಯೋಜನೆಗಳಲ್ಲಿ ಹಗರಣ ನಡೆಸಿ ನಮ್ಮನ್ನು ಪ್ರಶ್ನೆ ಮಾಡುತ್ತಿದ್ದೀರಲ್ಲಾ ನಿಮಗೆ ನೈತಿಕತೆ ಇದೆಯೇ?

ರಾಜ್ಯಪಾಲರು ಪಕ್ಷಪಾತಿಯಾಗಿ ಕೆಲಸ ಮಾಡುತ್ತಿದ್ದಾರೆ. ಲೋಕಾಯುಕ್ತ ವರದಿ ಬರುವ ತನಕ ಕಾಯದೇ ಯಾರ ಮಾತು ಕೇಳಿ ಕೆಲಸ ಮಾಡುತ್ತಿದ್ದೀರಿ. ಸಂವಿದಾನ ರಕ್ಷಕರಾದ ನೀವು ಹೀಗೆ ಮಾಡುತ್ತಿರುವುದು ಎಷ್ಟು ಸರಿ? ಬಿಜೆಪಿ ಸರ್ಕಾರ ಇದ್ದಾಗ ಮುಡಾ ಸೈಟು ಹಂಚಿಕೆ ಮಾಡಿದೆ. ಈಗ ಅವರೇ ಅದನ್ನು ಹಗರಣ ಎಂದು ಗಲಾಟೆ ಮಾಡುತ್ತಿದ್ದಾರೆ.

ದೆಹಲಿಯಲ್ಲಿ ಕುಳಿತುಕೊಂಡು ಜನರ ಸರ್ಕಾರದ ವಿರುದ್ದ ಬಿಜೆಪಿ, ಜೆಡಿಎಸ್ ಹುನ್ನಾರ ಮಾಡಿ ಇಲ್ಲಿಗೆ ಬಂದಿವೆ. ಗೊಬೆಲ್ಸ್ ನೀತಿಯನ್ನು ಜನರ ಮೇಲೆ ಹೇರಿಕೆ ಮಾಡುತ್ತಿವೆ. ಹೋರಾಟ ಮಾಡಲು ನೈತಿಕತೆ ಉಳಿಸಿಕೊಳ್ಳದೇ ಇರವವರು ಪಾದಯಾತ್ರೆ ನಾಟಕ ಮಾಡುತ್ತಿದ್ದಾರೆ. ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸದ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸದ ನೀವು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ.

ಪ್ರತಿಪಕ್ಷಗಳಿಗೆ ಯಾವುದೇ ಹಗರಣಗಳು, ಗ್ಯಾರಂಟಿಗಳು ಮುಖ್ಯವಲ್ಲ. ಜನಪರ ಕಾಳಜಿ ಹೊಂದಿರುವ ಸಿದ್ದರಾಮಯ್ಯ ಅವರ ಮುಖಕ್ಕೆ ಮಸಿ ಬಳಿಯುವುದು ಅವರ ಉದ್ದೇಶ. ಶಾಸಕರಲ್ಲಿ ಗಾಬರಿ ಹುಟ್ಟಿಸಿ ಹಿಂಬಾಗಿಲ ಮೂಲಕ ಬಂದು ಸರ್ಕಾರವನ್ನು ಬೀಳಿಸುವುದು ಅವರ ದುರುದ್ದೇಶ.

ಗೃಹಸಚಿವ ಡಾ.ಜಿ.ಪರಮೇಶ್ವರ್

ಈ ದೇಶಕ್ಕೆ ಸ್ವಾತಂತ್ರ ತಂದುಕೊಡಲು ಸಾವಿರಾರು ಮಂದಿ ಸೇರಿದಂತೆ ಮಹಾತ್ಮ ಗಾಂಧಿ ಅವರು ಜೀವನ ತ್ಯಾಗ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶ್ರಮಪಟ್ಟಿದ್ದಾರೆ.

ಆದರೆ ಇಂದು ಜೆಡಿಎಸ್ ಬಿಜೆಪಿಯವರು ಸರ್ಕಾರ ಬೀಳಿಸುತ್ತೇವೆ ಎಂದು ಹೊರಟಿದ್ದಾರೆ. ಪಾದಯಾತ್ರೆ ಮಾಡಬೇಡಿ ಎಂದು ಹೇಳಿಲ್ಲ. ಆದರೆ ಅವರ ಪಾದಯಾತ್ರೆಗೆ ಕಿಂಚಿತ್ತೂ ಉದ್ದೇಶವಿಲ್ಲ. ಕಾಂಗ್ರೆಸ್ ಪಕ್ಷ ಜನರಿಂದ ಜನರಿಗಾಗಿ ಪಾದಯಾತ್ರೆ ಮಾಡಿದೆ. ಆದರೆ ನೀವು ಯಾವುದೇ ಒಂದೇ ಒಂದು ದಾಖಲೆಯಿಲ್ಲದ ಅಕ್ರಮ ಇಟ್ಟುಕೊಂಡು ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲಾಗುತ್ತಿದೆ.

ಬಿಜೆಪಿ ಮೇಲೆ ಸಾಕಷ್ಟು ಆರೋಪಗಳಿವೆ. ಸುಮಾರು 21 ಕ್ಕೂ ಹೆಚ್ಚು ಹಗರಣಗಳು ಬಿಜೆಪಿ ಮೇಲಿವೆ ಇದಕ್ಕೆ ಉತ್ತರ ನೀಡಿ. ಈ ಹಿಂದ ಮೈಸೂರಿನ ಬಿಜೆಪಿ ಅಧ್ಯಕ್ಷ ದೇವೇಗೌಡರ ಕುಟುಂಬ 36ಸೈಟುಗಳನ್ನು ಹಂಚಿಕೊಂಡಿದೆ ಎಂದು ಪ್ರಕಟಣೆ ಹೊರಡಿಸಿದ್ದೀರಿ. ಇದರ ಬಗ್ಗೆ ಮೊದಲು ಉತ್ತರ ನೀಡಿ. ಕುಮಾರಸ್ವಾಮಿ ಅವರೇ ಬೇರೆಯವರಿಗೆ ಪ್ರಶ್ನೆ ಮಾಡುವ ನೈತಿಕತೆ ಇದೆಯಾ ಎಂದು ಬಿಜೆಪಿ ಪ್ರಶ್ನಿಸಿತ್ತು. ಈಗ ಜೊತೆಯಲ್ಲೇ ಹೆಜ್ಜೆ ಹಾಕುತ್ತಿರುವ ಅವರಿಗೆ ಪ್ರಶ್ನೆ ಮಾಡಿ.

ಕರ್ನಾಟಕಕ್ಕೆ ಬರಬೇಕಾದ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. 32 ಸಾವಿರ ನಷ್ವಾಗಿದೆ ಎಂದು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದಾಗ 12 ಸಾವಿರ ಕೋಟಿಯಷ್ಟು ಹಣ ನೀಡಲಿಲ್ಲ. ಭಾರತದ ಇತಿಹಾಸದಲ್ಲಿ ರಾಜ್ಯವೊಂದು ಹಣ ಬಿಡುಗಡೆ ಮಾಡಿ ಎಂದು ಕೋರ್ಟಿಗೆ ಹೋದ ಉದಾಹರಣೆಯಿಲ್ಲ. ಕೋರ್ಟ್ ಹೇಳಿದ ನಂತರ ನೀವು ಹಣ ಕೊಟ್ಟಿದ್ದೀರೆ ಹೊರತು ನೀವಾಗಿ ಕೊಟ್ಟಿಲ್ಲ. ಭದ್ರಾ ಯೋಜನೆಗೆ ಹಣವಿಲ್ಲ. ಜಿಎಸ್ ಟಿ ಪರಿಹಾರವಿಲ್ಲ. ಕರ್ನಾಟಕಕ್ಕೆ ಮೋಸ ಮಾಡುತ್ತಿರುವುದು ದೇಶಕ್ಕೆ ತಿಳಿದಿದೆ.

ವಾಲ್ಮೀಕಿ ಹಗರಣದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ನೋಡಲಾಯಿತು. ಆದರೆ ಇದು ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ ಅವರು ಹಗರಣವಾಗಿದೆ ಎಂದು ತಿಳಿದ ತಕ್ಷಣ ಸಚಿವರಿಂದ ರಾಜಿನಾಮೆ ಪಡೆದು ಎಸ್ ಐಟಿ ರಚನೆ ಮಾಡಿದ್ದಾರೆ.

ಭೋವಿ ನಿಗಮದಲ್ಲಿ ಹಗರಣವಾಗಿದೆ ಎಂದು ಬಿಜೆಪಿಯವರೇ ಆರೋಪ ಮಾಡಿದ್ದರು. ಇದರ ಬಗ್ಗೆ ತನಿಖೆ ಮಾಡಿದಾಗ ಸುಮಾರು 30 ಬ್ಯಾಂಕ್ ಗಳಿಗೆ ಹಣ ಅಕ್ರಮ ವರ್ಗಾವಣೆಯಾಗಿದೆ. ದೇವರಾಜ ಅರಸು ಟ್ರಕ್ ಟರ್ಮಿನಲ್ ಅಲ್ಲಿ ಬಿಜೆಪಿಯ ವೀರಯ್ಯ ಅವರು ಚೆಕ್ ಅಲ್ಲಿ ಲಂಚ ಹೊಡೆದಿದ್ದಾರೆ.

ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರರಹಿತವಾಗಿ, ಜನಪರವಾಗಿ ಕೆಲಸ ಮಾಡಲಿದೆ. ನಾವು ಕೊಟ್ಟ ಮಾತುಗಳನ್ನು ಈಡೇರಿಸಲಿದ್ದೇವೆ.

More News

You cannot copy content of this page