Jyestheshwara Temple Srinagar: ಇತಿಹಾಸ ಪ್ರಸಿದ್ಧ ಶ್ರೀನಗರದ ಶ್ರೀ ಜ್ಯೇಷ್ಟೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಹೆಚ್.ಡಿ. ದೇವೇಗೌಡರು

ಶ್ರೀನಗರ: ಎರಡು ದಿನಗಳಿಂದ ಕಾಶ್ಮೀರ ಪ್ರವಾಸದಲ್ಲಿರುವ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರು, ಶುಕ್ರವಾರ ಇಲ್ಲಿನ ಶ್ರೀ ಶಂಕರಾಚಾರ್ಯ ಬೆಟ್ಟದಲ್ಲಿರುವ ಶ್ರೀ ಜ್ಯೇಷ್ಟೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಶಿವನ ದೇವಸ್ಥಾನವೆಂದೇ ಕರೆಯಲ್ಪಡುವ ಈ ಪವಿತ್ರ ಶಂಕರಾಚಾರ್ಯ ದೇವಸ್ಥಾನದಲ್ಲಿ ದೇವರ ದರ್ಶನ‌ ಪಡೆದು ಪ್ರಾಥನೆ ಸಲ್ಲಿಸಿದ ಮಾಜಿ ಪ್ರಧಾನಿಗಳು; ಈ ಕ್ಷಣ ನನ್ನ ಬದುಕಿನ ಅನನ್ಯ ಕ್ಷಣ. ಶಿವ ದರ್ಶನದಿಂದ ಧನ್ಯನಾಗಿದ್ದೇನೆ ಎಂದು ಭಾವುಕರಾದರು.

ನನ್ನನ್ನು ಇಲ್ಲಿಗೆ ಆ ಶಿವನೇ ಕರೆಸಿಕೊಂಡಿದ್ದಾನೆ ಎಂದು ಮಾಜಿ ಪ್ರಧಾನಿಗಳು ಹೇಳಿದ ಅವರು; ಬಹಳ ಹೊತ್ತು ದೇವಾಲಯದಲ್ಲಿಯೇ ಇದ್ದರು.

ಮಳೆಯ ನಡುವೆಯೇ CRPF ಪೊಲೀಸರು ಹಾಗೂ ಕಾಶ್ಮೀರ ಪೊಲೀಸರ ಸಹಾಯದಿಂದ ಮೆಟ್ಟಿಲು ಹತ್ತಿದ ಮಾಜಿ ಪ್ರಧಾನಿಗಳು; ಶಿವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

“ಇಲ್ಲಿಗೆ ಭೇಟಿ ನೀಡಿ ಶಿವನ‌‌ ದರ್ಶನ ಪಡೆಯಬೇಕೆಂಬುದು ನನ್ನ ಜೀವಮಾನದ ಆಸೆಯಾಗಿತ್ತು. ಇವತ್ತು ನನ್ನ ಆಸೆ ನೆರವೇರಿದೆ. ನನ್ನನ್ನು ಇಲ್ಲಿಗೆ ಕರೆಸಿಕೊಂಡ ಆ ದೇವರಿಗೆ ಆಭಾರಿಯಾಗಿದ್ದೇನೆ” ಎಂದು ಅವರು ಹೇಳಿದರು.

ದೇಗುಲಕ್ಕೆ ತೆರಳಿದ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳಿಗೆ CRPF ಪೊಲೀಸರು ಹಾಗೂ ಕಾಶ್ಮೀರ ಪೊಲೀಸರು ಭದ್ರತೆ ಒದಗಿಸಿದ್ದರು.

ಗುರುವಾರ ಉರಿಯ ಜಲವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದ್ದ ಅವರು; ಅಲ್ಲಿಗೆ ತೆರಳಲು ಶ್ರೀನಗರದಿಂದ ಬಾರಮುಲ್ಲಾವರೆಗೂ ರೈಲಿನಲ್ಲಿ ಪ್ರಯಾಣ ಮಾಡಿದ್ದರು.

ಮಾಜಿ ಪ್ರಧಾನಿಗಳು ಇಲ್ಲಿನ ದಾಲ್ ಸರೋವರಕ್ಕೂ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ, ಮಳೆಯ ಕಾರಣ ಅಲ್ಲಿಗೆ ಭೇಟಿ ನೀಡಲಾಗಲಿಲ್ಲ. ಮುಂದಿನ ಮಾರ್ಚ್ ತಿಂಗಳಿನಲ್ಲಿ ಮತ್ತೆ ಇಲ್ಲಿಗೆ ಬರುವೆ ಎಂದು ತಿಳಿಸಿದರು ಮಾಜಿ ಪ್ರಧಾನಿಗಳು.

More News

You cannot copy content of this page