ಬೆಂಗಳೂರು: ಪ್ರಮುಖ ನಗರಗಳ ನಡುವೆ ಬಸ್ ಸಂಚಾರ ಒದಗಿಸುವ ಜರ್ಮನಿ ಮೂಲದ ಫ್ಲಿಕ್ಸ್‌ಬಸ್ ಸಂಚಾರಕ್ಕೆ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಮಂಗಳವಾರ ಹಸಿರು ನಿಶಾನೆ ತೋರಿದರು. ಇದರೊಂದಿಗೆ, ಫ್ಲಿಕ್ಸ್ ಬಸ್ ಸೇವೆಯು ದಕ್ಷಿಣ ಭಾರತಕ್ಕೆ ಪದಾರ್ಪಣೆ ಮಾಡಿದೆ.
ಸಚಿವರು ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ಭಾರತವೂ ಸೇರಿದಂತೆ 43 ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಫ್ಲಿಕ್ಸ್‌ಬಸ್ ಸೇವೆಯು ದಕ್ಷಿಣ ಭಾರತದಲ್ಲಿ ಜನರ ಪ್ರಯಾಣದ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಖಾಸಗಿ ಬಸ್ ನಿರ್ವಾಹಕರ ಸಹಯೋಗದಲ್ಲಿ ಸಂಚಾರ ಜಾಲ ವಿಸ್ತರಿಸಿಕೊಳ್ಳುವ ಯೋಜನೆಯನ್ನು ಫ್ಲಿಕ್ಸ್‌ಬಸ್ ಹೊಂದಿದೆ. ಹೆಚ್ಚಿನ ಅನುಕೂಲ, ಸುರಕ್ಷತೆ ಹಾಗೂ ಹೊರೆ ಎನ್ನಿಸದ ದರಗಳ ಮೂಲಕ ಬಸ್ ಪ್ರಯಾಣಿಕರ ವಿಶ್ವಾಸ ಗಳಿಸುವ ಗುರಿ ಹೊಂದಿದೆ ಎಂದರು.
ಬಸ್ ಸಂಚಾರದಲ್ಲಿ ಭಾರತವು ಜಗತ್ತಿನ ಎರಡನೇ ದೊಡ್ಡ ಮಾರುಕಟ್ಟೆಯಾಗಿದೆ. ಪರಿಸರ ಸ್ನೇಹಿ ಇಂಧನಗಳ ಬಳಕೆಗೆ ಒತ್ತು ನೀಡಿ ದೇಶದಲ್ಲಿ ಸುಸ್ಥಿರ ಸಂಚಾರಕ್ಕೆ ಕೊಡುಗೆ ನೀಡಲು ಸಂಸ್ಥೆಯು ಆದ್ಯತೆ ನೀಡಬೇಕೆಂದು ಸಚಿವರು ಅಭಿಪ್ರಾಯಪಟ್ಟರು.
ಜರ್ಮನಿಯ ಡೆಪ್ಯುಟಿ ಕಾನ್ಸುಲ್ ಜನರಲ್ ಅನೆಟ್ ಬೆಸಿಯರ್, ಫ್ಲಿಕ್ಸ್ ಬಸ್ ಸಹ-ಸ್ಥಾಪ ಡೇನಿಯಲ್ ಕ್ರೌಸ್, ಫ್ಲಿಕ್ಸ್ ಬಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೂರ್ಯ ಖುರಾನ ಅವರು ಇದ್ದರು.