ಬೆಂಗಳೂರು : ಇಲ್ಲಿನ ಗಂಗೇನಹಳ್ಳಿ 1.11 ಎಕರೆ ಜಮೀನು ಡಿನೋಟಿಫಿಕೇಶನ್ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಚಿವರಾದ ಕೃಷ್ಣಬೈರೇಗೌಡ,ದಿನೇಶ್ ಗುಂಡೂರಾವ್,ಸಂತೋಷ್ ಲಾಡ್ ಹಳೆಯ ದಾಖಲೆ ಬಿಡುಗಡೆ ಮಾಡಿ ಹರಿಹಾಯ್ದಿದ್ದಾರೆ.
ಈಚೆಗೆ ಇಬ್ಬರು ನಾಯಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು,ಎಷ್ಟು ಪಾಲು ಪಡೆದಿದ್ದಾರೆ ಎಂದು ನಾಡಿನ ಜನತೆಗೆ ತಿಳಿಸಲಿ ಎಂದು ಸಚಿವರು ಮಾಜಿ ಸಿಎಂಗಳಿಗೆ ಸವಾಲು ಹಾಕಿದರು.
ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ 1.11 ಎಕರೆಯನ್ನು ಪ್ರಾಧಿಕಾರದ ಅಧಿಸೂಚನೆಯಿಂದ ಕೈಬಿಡಬೇಕು ಎಂಬ ಬೇನಾಮಿ ಅರ್ಜಿಯನ್ನು ಪರಿಗಣಿಸಿ ಡಿನೋಟಿಫೈ ಮಾಡಲು ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.ಸಂಬಂಧಪಟ್ಟ ಅಧಿಕಾರಿಗಳೆಲ್ಲ ಡಿ ನೋಟಿಫಿಕೇಶನ್ ಮಾಡಲು ಬರಲ್ಲ ಎಂದು ಟಿಪ್ಪಣಿ ಬರೆದಿದ್ದರು. ಆದರೂ ಬಳಿಕ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ವಿವರಿಸಿದರು.
ಈ ಪ್ರಕರಣ 2015ರಲ್ಲಿ ಲೋಕಾಯುಕ್ತದಲ್ಲಿ ದಾಖಲಾಯಿತು,ಈವರೆಗೂ ತನಿಖೆ ಆಗಿಲ್ಲ.ಕೂಡಲೇ ತನಿಖೆ ಆಗಬೇಕು ಎಂಬುದು ನಮ್ಮ ಒತ್ತಾಯ ಎಂದರು.
ಈ ಜಮೀನನ್ನು ಎಚ್.ಡಿ. ಕುಮಾರಸ್ವಾಮಿಯವರ ಅತ್ತೆ ವಿಮಲ ಜಿಒಇಎ ಹೋಲ್ಡರ್ ಆಗಿದ್ದರು. ಅರ್ಜಿದಾರ ರಾಜಶೇಖರಯ್ಯ ಬದಲು 21 ಮಂದಿ ವಾರಸುದಾರರಿಂದ ಜಿಪಿಎ ಮಾಡಿಸಿಕೊಂಡಿದ್ದರು. ಉದ್ದೇಶವಾಗಿ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ಆರೋಪಿಸಿದರು.