ದೇಶದಲ್ಲಿ ಗಾಂಧೀವಾದ ಗೆಲ್ಲಬೇಕೇ ಹೊರೆತು ಸಾವರ್ಕರ್ ಅವರ ವಾದ ಅಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಗಾಂಧೀ ಜಯಂತಿಯ ಪ್ರಯುಕ್ತ ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ ಅವರು ಆಯೋಜಿಸಿದ್ದ ‘ಗಾಂಧೀಜಿಯ ಹಂತಕ’ ಪುಸ್ತಕ ಬಿಡುಗಡೆ, ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡುತ್ತಿದ್ದರು.
ಗೋಡ್ಸೆಗೆ ಉತ್ತರ ಗಾಂಧೀಜಿಯವರೇ.. ಗಾಂಧೀಜಿಯವರ ಹತ್ಯೆ ಮಾಡಿದ ಗೋಡ್ಸೆ, ಸಾವರ್ಕರ್ ವಾದದಿಂದ ಪ್ರಭಾವಿತರಾಗಿದ್ದರು. ದೇಶದಲ್ಲಿ ಇಂದು ಗಾಂಧೀವಾದ ಎದುರು ಸಾವರ್ಕರ್ ಅವರ ವಾದ ಗೆಲ್ಲುತ್ತಿದೆಯೇ ಎಂಬ ಅನುಮಾನ ನಮ್ಮನ್ನ ಕಾಡುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.
ಸಾವರ್ಕರ್ ಅವರಲ್ಲಿ ವೈಚಾರಿಕ ಚಿಂತನೆಗಳು, ರಾಷ್ಟ್ರೀಯವಾದ ಕಾಣಲು ಸಾಧ್ಯವಾದರೂ, ಪ್ರಜಾಪ್ರಭುತ್ವದ ಪರವಾದ ವ್ಯಕ್ತಿತ್ವ ಇರಲಿಲ್ಲ. ಆದರೆ ಗಾಂಧಿಜೀ ಅವರದ್ದು ಡೆಮಾಕ್ರೆಟಿಕ್ ವ್ಯಕ್ತಿತ್ವ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಬ್ರಾಹ್ಮಣ ಸಮಾಜದ ಸಾವರ್ಕರ್ ಅವರು ಮಾಂಸ ಸೇವಿಸುತ್ತಿದ್ದರು. ಮಾಂಸಹಾರ ಸೇವನೆಯನ್ನ ಅವರು ಬಹಿರಂಗವಾಗಿ ಸಮರ್ಥಿಸುತ್ತಿದ್ದರು. ಹಾಗೆ ನೋಡಿದರೆ ಸಾವರ್ಕರ್ ಒಂದು ರೀತಿಯಲ್ಲಿ ಮಾಡರ್ನಿಷ್ಟ್ ಆಗಿಯೂ ಕಾಣುತ್ತಾರೆ. ಆದರೆ ಮೂಲಭೂತ ವಾದಿಯಾಗಿದ್ದರು ಎಂಬುದರಲ್ಲಿ ಸಂಶಯವಿಲ್ಲ. ಮೂಲಭೂತವಾದ ನಮ್ಮ ಭಾರತ ದೇಶದ ಸಂಸ್ಕೃತಿಯಲ್ಲ. ಇದು ಯುರೋಪ್ ನಿಂದ ಬಂದಿರುವಂತದ್ದು. ಸಾವರ್ಕರ್ ಯೂರೋಪ್ ನಿಂದ ಸಾಕಷ್ಟು ಪ್ರಭಾವ ಹೊಂದಿದ್ದರು. ಆದರೆ ಗಾಂಧೀಜಿಯವರು ಸಸ್ಯಹಾರಿ. ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಗಾಂಧೀಜಿಯವರಿಗೆ ಅಪಾರವಾದ ನಂಬಿಕೆ ಇತ್ತು.
ಇಂದು ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂಪ್ರದಾಯಸ್ಥರಿದ್ದಾರೆ. ಸಂಪ್ರದಾಯಸ್ಥರೆಲ್ಲ ಮೂಲಭೂತವಾದಿಗಳಲ್ಲ ಎಂಬುದನ್ನ ನಾವು ಅರಿತುಕೊಳ್ಳಬೇಕು. ಮೂಲಭೂತವಾದದ ವಿರುದ್ಧದ ಹೋರಾಟದಲ್ಲಿ ಈ ಅಂಶವನ್ನ ಅರಿತು ನಾವು ಮುಂದೆ ಸಾಗಬೇಕಿದೆ. “ಗಾಂಧೀಜಿಯ ಹಂತಕ ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ” ಪುಸ್ತಕ ಗಾಂಧೀಜಿಯವರ ಬಗ್ಗೆ ಸಾಕಷ್ಟು ವಿಚಾರಗಳ ಬಗ್ಗೆ ಬೆಳಕು ಚಲ್ಲಿದೆ. ಯಾರ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸದೇ, ವಿವರಗಳನ್ನ ಮಾತ್ರ ನೀಡಿರುವುದು ಪುಸ್ತಕದ ವಿಶೇಷ. ನಮ್ಮ ಯುವಕರು ಇಂಥಹ ಪುಸ್ತಕಗಳನ್ನ ಹೆಚ್ಚು ಓದುವ ಮೂಲಕ ನಿಜಾಂಶಗಳನ್ನ ತಿಳಿದುಕೊಳ್ಳಬೇಕು ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.