CM SIDDARAMAIAH: ನಾನೂ ಪರೋಕ್ಷವಾಗಿ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದವನೇ – ಮುಖ್ಯಮಂತ್ರಿ ಸಿದ್ದರಾಮಯ್ಯ

ಕನ್ನಡ ಭಾಷಾ ಹೋರಾಟಗಳಲ್ಲಿ ಅತ್ಯಂತ ಪ್ರಮುಖ ಹೋರಾಟವಾದ ಗೋಕಾಕ್ ಚಳವಳಿಯ ವ್ಯಾಪಕತೆ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಪರಿಗಣಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತು. ಈ ಚಳವಳಿಯನ್ನು ಗೋಕಾಕ್ ಚಳವಳಿ ಎಂದು ಹೆಸರಿಸಿ ಸೀಮಿತವಾಗಿಸುವ ಬದಲು ಕನ್ನಡ ಭಾಷಾ ಚಳವಳಿ ಎಂದು ಮರುನಾಮಕರಣ ಮಾಡಬೇಕಾದ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಯಚೂರು ಜಿಲ್ಲಾಡಳಿತ ಸಹಯೋಗದಲ್ಲಿ ರಾಯಚೂರಿನಲ್ಲಿ ಆಯೋಜಿಸಲಾಗಿದ್ದ ವರ್ಣ ರಂಜಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋಕಾಕ್ ಚಳವಳಿಯಲ್ಲಿ ತಾವು ಸಹ ಪರೋಕ್ಷವಾಗಿ ಭಾಗವಹಿಸಿದ್ದು, ಎಂದೆಂದಿಗೂ ತಮ್ಮ ಮನಸ್ಸು ಕನ್ನಡಕ್ಕಾಗಿ ಮಿಡಿದಿದೆ ಎಂದರು. ಏಕೀಕರಣದ ನಂತರ ೧೯೭೩ ನವೆಂಬರ್ ೦೧ ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ರವರು ಅಂದಿನ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣ ಮಾಡಿ ೫೦ ವರ್ಷಗಳು ಸಂದಿದ್ದು, ಇಂತಹ ಅಧುನಿಕ ಕಾಲಘಟ್ಟದಲ್ಲಿ ಕನ್ನಡದ ಸ್ಥಿತಿಗತಿಗಳನ್ನು ಚರ್ಚಿಸಿ ಮುಂದೆ ಯಾವ ರೀತಿಯ ಭಾಷಾ ಪರವಾದ ನಿಲುವುಗಳನ್ನು ತಳೆಯಬಹುದೆನ್ನುವ ಕುರಿತು ಆಲೋಚಿಸಲು ರಾಜ್ಯ ಸರ್ಕಾರವು ಇಂತಹ ಮಹತ್ವದ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಚರ್ಚೆಗಳನ್ನು ನೀತಿ ನಿರೂಪಣೆಗೆ ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದರು.

ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ಇಂಗ್ಲಿಷ್ ಟೈಪ್ ರೈಟರ್‌ಗಳನ್ನು ಕಿತ್ತುಕೊಂಡಿದ್ದೆ:

೧೯೮೩ರಲ್ಲಿ ನಾನು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸೂಚನೆಯಂತೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸರ್ಕಾರಿ ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ಆಂಗ್ಲ ಭಾಷೆಗೆ ಒಗ್ಗಿಕೊಂಡಿತ್ತು. ಹಲವಾರು ಕಚೇರಿಗಳಿಗೆ ಭೇಟಿ ನೀಡಿ ಸಿಬ್ಬಂದಿ ಬಳಸುತ್ತಿದ್ದ ಇಂಗ್ಲಿಷ್ ಟೈಪ್ ರೈಟರ್‌ಗಳನ್ನು ಕಿತ್ತುಕೊಂಡು ಕನ್ನಡ ಟೈಪ್ ರೈಟರ್‌ಗಳನ್ನು ಒದಗಿಸುವ ಕೆಲಸವನ್ನು ಮಾಡಿದ್ದೆ ಎಂದು ನೆನಪಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕನ್ನಡದ ಸವಾಲುಗಳು ವ್ಯಾಪಕವಾಗಿವೆ. ಬಹಳ ಮುಖ್ಯವಾಗಿ ತಂತ್ರಜ್ಞಾನದಲ್ಲಿ ಕನ್ನಡದ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ. ಯಾವುದೇ ಮಾಧ್ಯಮದಲ್ಲಿಯೂ ಕನ್ನಡಕ್ಕೆ ಆಗ್ರ ಸ್ಥಾನವನ್ನು ಕಲ್ಪಿಸಬೇಕಾದ್ದು, ಸರ್ಕಾರದ ಕರ್ತವ್ಯವಾಗಿದ್ದು, ಇದಕ್ಕೆ ನನ್ನ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ನಾನು ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಸಹಿ ಮಾಡುವುದಿಲ್ಲ:

ಸರ್ಕಾರದ ಯಾವುದೇ ಕಡತಗಳ ಟಿಪ್ಪಣಿಗಳಲ್ಲಿ ನಾನು ಯಾವಾಗಲೂ ಕನ್ನಡವನ್ನೇ ಬಳಸುತ್ತೇನೆ. ಪತ್ರಗಳ ಮೇಲೆ, ಟಿಪ್ಪಣಿಗಳ ಮೇಲೆ ನಾನು ಎಂದಿಗೂ ಕನ್ನಡ ಭಾಷೆಯಲ್ಲಿಯೇ ಸಹಿ ಮಾಡುತ್ತೇನೆ. ಕೇಂದ್ರ ಸರ್ಕಾರದ ಪತ್ರ, ಪ್ರಸ್ತಾವನೆಗಳಲ್ಲಿ ಆಂಗ್ಲ ಭಾಷೆಯನ್ನು ಬಳಸುತ್ತೇನೆಯೇ ಹೊರತು ಬೇರಾವ ಸಂದರ್ಭದಲ್ಲಿಯೂ ನಾನು ಕನ್ನಡಕ್ಕೆ ಮಾತ್ರ ಆದ್ಯತೆಯನ್ನು ನೀಡುತ್ತೇನೆ. ಅಧಿಕಾರಿಗಳು ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಕನ್ನಡ ಬಳಕೆಗೆ ಮುಂದಾಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ನಾನು ಅನ್ಯ ಭಾಷೆಯ ವಿರೋಧಿಯಲ್ಲ:

ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರೇ ಆಗಿದ್ದು, ವ್ಯವಹಾರಿಕ ಭಾಷೆಯಲ್ಲಿ ಪ್ರತಿಯೊಬ್ಬರು ಕನ್ನಡ ಬಳಕೆಗೆ ಪ್ರಾಧಾನ್ಯತೆಯನ್ನು ನೀಡಬೇಕು. ಆಡಳಿತ ಭಾಷೆಯಾಗಿ ಕನ್ನಡ ಬಳಕೆಗೆ ಆಗ್ರಹಿಸಬೇಕು. ಏಕೀಕರಣದ ನಂತರ ವಿವಿಧ ಪ್ರಾಂತಗಳು ಕರ್ನಾಟಕದೊಂದಿಗೆ ವಿಲೀನವಾಗಿರುವ ಹಿನ್ನಲೆಯಲ್ಲಿ ಕನ್ನಡ ಭಾಷೆಯ ಉಳಿವಿಗೆ ಸಂಕೀರ್ಣವಾದ ಸವಾಲುಗಳಿದ್ದು, ಇದನ್ನು ಪರಿಣಾಮಕಾರಿಯಾಗಿ ಎದುರಿಸಲು ವಿಶೇಷ ಸಾಂಸ್ಥಿಕ ಪ್ರಯತ್ನದ ಅವಶ್ಯಕತೆ ಇರುತ್ತದೆ. ಇದಕ್ಕೆ ನಾಡಿನ ಜನರ ಸಹಕಾರ ಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ:

ವಿಧಾನಸೌಧದ ಆವರಣದಲ್ಲಿ ಇದೇ ನವೆಂಬರ್ ೦೧ ರಂದು ಕನ್ನಡ ದೇವಿ ಭುವನೇಶ್ವರಿಯ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಸರ್ಕಾರದ ಕನ್ನಡದ ಬದ್ಧತೆಯನ್ನು ಪ್ರದರ್ಶಿಸಲಾಗುವುದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಾತಿನಿಧಿಕ ಕಾರ್ಯವು ಕರ್ನಾಟಕದಲ್ಲಿ ಕನ್ನಡದ ಆಗ್ರ ಸ್ಥಾನವನ್ನು ಸ್ಥಿರಿಕರಿಸಲಿದ್ದು, ಈ ಕಾರ್ಯವು ನಾಡಿನ ಜನರ ಕನ್ನಡಾಭಿಮಾನದ ಸಂಕೇತವಾಗಿ ಉಳಿಯಲಿದೆ. ಅನ್ಯರಾಜ್ಯಗಳ ಜನರಂತೆ ನಮಗೆ ಭಾಷೆಯ ಕುರಿತಾದ ದುರಭಿಮಾನದ ಅವಶ್ಯಕತೆ ಇಲ್ಲ. ಆದರೆ ಭಾಷಾಭಿಮಾನವನ್ನು ನಾವು ಹೊಂದದಿದ್ದಲ್ಲಿ ತಪ್ಪಾಗುತ್ತದೆ ಎಂದರು. ಈ ಕುರಿತಂತೆ ತಾವು ಈಗಾಗಲೇ ಆಯವ್ಯಯ ಘೋಷಣೆ ಮಾಡಿದ್ದು, ಭುವನೇಶ್ವರಿ ಪ್ರತಿಮೆಯ ಸಿದ್ಧತೆ ಭರದಿಂದ ಸಾಗಿದೆ ಎಂದರು.

ಸಿದ್ದರಾಮಯ್ಯರನ್ನು ಕನ್ನಡರಾಮಯ್ಯ ಎನ್ನಬೇಕು – ಸಚಿವ ಶಿವರಾಜ ತಂಗಡಗಿ:

ಯೌವನದ ಸಂದರ್ಭದಿಂದಲೂ ಕನ್ನಡದ ಕುರಿತಂತೆ ಅಪಾರವಾದ ಅಭಿಮಾನವನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣಕ್ಕೆ ಬಂದಾಗಿನಿಂದಲೂ ಕನ್ನಡದ ಕುರಿತಂತೆ ವಿಶೇಷ ಕಾಳಜಿಯನ್ನು ತೋರಿದ್ದಾರೆ ಎಂದ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಶಿವರಾಜ ತಂಗಡಗಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಿನಿಂದ ಕನ್ನಡ ಸಂಸ್ಕೃತಿಯ ಕುರಿತು ವಿನೂತನ ಕಾರ್ಯಕ್ರಮಗಳಿಗೆ ಅವಕಾಶವನ್ನು ದೊರಕಿಸಿದ್ದು, ಅವರ ಭಾಷಾ ಇತಿಹಾಸ ಪ್ರಜ್ಞೆ ಅವರ ಈ ಬದ್ಧತೆಯ ಪ್ರತೀಕವಾಗಿದೆ ಎಂದರು. ಕರ್ನಾಟಕ ಸಂಭ್ರಮ-೫೦ ಶೀರ್ಷಿಕೆಯಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯಾದ್ಯಂತ ವಿಚಾರ ಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಾಡು ನುಡಿಯ ಹಿತದೃಷ್ಠಿಯಿಂದ ಈ ಕಾರ್ಯಕ್ರಮಗಳು ಮಹತ್ವದ್ದಾಗಿವೆ. ಈ ಕಾರ್ಯಕ್ರಮದ ಬೆನ್ನೆಲುಬಾಗಿ ಮಾನ್ಯ ಮುಖ್ಯಮಂತ್ರಿಗಳು ನಿಂತಿದ್ದು, ಮುಂದಿನ ದಿನಗಳಲ್ಲಿ ಇವುಗಳ ಫಲಶೃತಿಯನ್ನು ಸರ್ಕಾರವು ಸೂಕ್ತ ಭಾಷಾಪರ ತೀರ್ಮಾನಗಳೊಂದಿಗೆ ಬಳಸಿಕೊಳ್ಳಲಿದೆ ಎಂದರು.

ಸಮಾಜದಲ್ಲಿ ಧರ್ಮದ ವಿಷಬೀಜ ಬಿತ್ತುವ ಕೆಲಸಗಳು ನಡೆಯುತ್ತಿರುವುದು ದುರದೃಷ್ಟಕರವೆಂದ ಸಚಿವ ಶಿವರಾಜ ತಂಗಡಗಿ ಇಂತಹ ಭಾಷಾಭಿಮಾನದ ಕಾರ್ಯಕ್ರಮಗಳ ಮೂಲಕ ತಮ್ಮ ಸರ್ಕಾರವು ಸಹನಶೀಲ ಸಮಾಜವನ್ನು ನಿರ್ಮಿಸುವಲ್ಲಿ ತನ್ನದೇ ಕೊಡುಗೆಯನ್ನು ನೀಡಿದೆ ಎಂದರು.

ಏಕೀಕರಣದ ನಂತರ ನಡೆದ ಅತೀ ದೊಡ್ಡ ಭಾಷಾ ಚಳವಳಿಯಾದ ಗೋಕಾಕ್ ಚಳವಳಿ ನಮ್ಮೆಲ್ಲ ಭಾಷಾ ಹೋರಾಟಗಳಿಗೆ ಪ್ರೇರಣೆ – ಡಾ. ಪುರುಷೋತ್ತಮ ಬಿಳಿಮಲೆ.

ಗೋಕಾಕ್ ಚಳವಳಿಯ ಫಲಿತಾಂಶಗಳು ಏನೇ ಇರಲಿ ಅದು ಕರ್ನಾಟಕದ ಏಕೀಕರಣವಾದ ಮೇಲೆ ನಾಡಿನ ಜನರನ್ನು ಒಗ್ಗೂಡಿಸಿ ಚೈತನ್ಯ ಮೂಡಿಸಿದ ಏಕೈಕ ಬೃಹತ್ ಚಳವಳಿಯಾಗಿದೆ. ಬೀದರ್‌ನಿಂದ ಬೆಂಗಳೂರಿನವರೆಗೆ ವ್ಯಾಪಿಸಿದ ಗೋಕಾಕ್ ಚಳವಳಿಗೆ ಕರ್ನಾಟಕದ ಜನರು ಸ್ಪಂದಿಸಿದ ರೀತಿ ಇಂದಿಗೂ ಕಾಣದಂತಾಗಿದ್ದು, ಅದರ ವ್ಯಾಪಕತೆಯನ್ನು ನಾವು ಅರ್ಥೈಸಿಕೊಳ್ಳುವ ಮೂಲಕ ಇಂದಿನ ಭಾಷಾ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಳ್ಳಬಹುದಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಗೋಕಾಕ್ ಚಳವಳಿ ಹಿನ್ನೊಟ-ಮುನ್ನೋಟ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಪುರುಷೋತ್ತಮ ಬಿಳಿಮಲೆ ಕವಿ ಗೋಪಾಲಕೃಷ್ಣ ಅಡಿಗರ ಭೂತ ಕವನದ ಕಾಡುತ್ತಿವೆ ಭೂತ ಕಾಲದ ಭ್ರೂಣಗೂಢಗಳು; ಹುಗಿದ ಹಳಬಾವಿಯೊಳ ಕತ್ತಲ ಹಳಸುಗಾಳಿ ಸಾಲನ್ನು ನೆನೆದು ಹಿಂದಿನ ಕಲಿಯುವಿಕೆಗಳ ಮೂಲಕ ಕನ್ನಡ ಎಲ್ಲಿಗೆ ನಡೆಯಬೇಕು ಎನ್ನುವುದನ್ನು ಹೊಸ ತಲೆಮಾರಿನ ಚಿಂತಕರು, ರಾಜಕಾರಣಿಗಳು, ಪತ್ರಕರ್ತರು ಸೇರಿದಂತೆ ಜನಸಾಮಾನ್ಯರಲ್ಲೆರೂ ಯೋಚಿಸಬೇಕಿದೆ ಎಂದರು.

೧೧೬೭ ರಲ್ಲಿ ಸೇವುಣರು ಮತ್ತು ಹೊಯ್ಸಳರು ಪರಸ್ಪರ ಹೊಯ್ದಾಡಿಕೊಂಡ ಮೇಲೆ ಕನ್ನಡನಾಡು ಮೊದಲ ಬಾರಿಗೆ ತುಂಡಾಯಿತು. ೨೦ನೇ ಶತಮಾನದಲ್ಲಿ ಅದು ೨೭ ತುಂಡುಗಳಾಗಿ ಒಡೆಯಿತು. ಏಕೀಕರಣದ ಕಾರಣ ಕರ್ನಾಟಕವನ್ನು ಒಂದು ರಾಜ್ಯವನ್ನಾಗಿ ಒಗ್ಗೂಡಿಸಿದ್ದು, ಕನ್ನಡ ಭಾಷೆಯ ಉಳಿವಿನ ಸವಾಲು ನಮ್ಮ ರಾಜ್ಯದಲ್ಲಿ ಬೇರೆಲ್ಲ ರಾಜ್ಯಗಳಿಗಿಂತ ಹೆಚ್ಚಿದೆ ಎಂದ ಡಾ. ಬಿಳಿಮಲೆ ಕನ್ನಡದ ಬೆಳವಣಿಗೆಯ ಗತಿ ಕೇವಲ ಶೇ. ೩.೭೦ ರಷ್ಟಿದ್ದು, ಬೇರೆಲ್ಲ ಭಾಷೆಗಳಿಗಿಂತ ಕನ್ನಡದ ಬೆಳವಣಿಗೆ ದುಸ್ಥಿತಿಯಲ್ಲಿದೆ. ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೇ ಇದು ಆತಂಕಕಾರಿ ಎಂದರು.

ಮುಂದಿನ ಜನಗಣತಿ ದಕ್ಷಿಣ ಭಾರತದ ರಾಜ್ಯಗಳ ಒಕ್ಕೂಟ ವ್ಯವಸ್ಥೆಯ ಹಕ್ಕನ್ನು ಕಸಿಯಲಿದೆ:

ಇಷ್ಟರಲ್ಲಿಯೇ ದೇಶದ ಜನಗಣತಿ ಆರಂಭವಾಗಲಿದ್ದು, ಉತ್ತರ ಭಾರತ ಜನಸಂಖ್ಯೆ ಹೆಚ್ಚಿರುವ ಹಿನ್ನಲೆಯಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಾಗಲಿದ್ದು, ದಕ್ಷಿಣ ಭಾರತದ ರಾಜ್ಯಗಳ ಒಟ್ಟಾರೆ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿರುವುದು ಒಕ್ಕೂಟ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮವನ್ನು ಬೀರಲಿದೆ ಎಂದ ಡಾ. ಪುರುಷೋತ್ತಮ ಬಿಳಿಮಲೆ ಆಯಾಯ ರಾಜ್ಯಗಳಲ್ಲಿ ಭಾಷೆ ಗಟ್ಟಿಯಾದಾಗ ಮಾತ್ರ ಪ್ರಾದೇಶಿಕ ಭಾಷೆಗಳ ಹಕ್ಕನ್ನು ಸಾಧಿಸಲು ಸಾಧ್ಯ. ದಕ್ಷಿಣ ಭಾರತೀಯ ರಾಜ್ಯಗಳ ಸ್ಥಾನಮಾನಗಳಿಗೆ ಒಕ್ಕೂಟ ವ್ಯವಸ್ಥೆಯಲ್ಲಿ ಗೌರವ ದೊರೆಯಲು ಸಾಧ್ಯವೆಂದರು.

ಗೋಕಾಕ್ ಚಳವಳಿಯ ಹಿನ್ನೋಟ-ಮುನ್ನೋಟ ಎಂಬ ಅತ್ಯುತ್ತಮ ಪರಿಕಲ್ಪನೆಯ ವಿಚಾರ ಗೋಷ್ಠಿಗಳನ್ನು ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿದ್ದು, ಇತಿಹಾಸದ ಹಿನ್ನಲೆಯಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕಾರ್ಯಕ್ರಮದ ಫಲಶೃತಿಯನ್ನು ರಾಜ್ಯ ಸರ್ಕಾರಕ್ಕೆ ವರದಿಯ ಮೂಲಕ ಸಲ್ಲಿಸಿ ನೀತಿ ನಿರೂಪಣೆಗೆ ಒತ್ತಾಯಿಸಲಿದೆ ಎಂದರು.

ಸಮಾವೇಶದಲ್ಲಿ ಸಚಿವರಾದ ಶಿವರಾಜ ತಂಗಡಗಿ, ಹೆಚ್.ಸಿ. ಮಹದೇವಪ್ಪ, ಶರಣ ಪ್ರಕಾಶ ಪಾಟೀಲ್, ಬೋಸರಾಜು ಸೇರಿದಂತೆ ರಾಯಚೂರು ಜಿಲ್ಲೆಯ ಶಾಸಕರುಗಳು, ಮಾಜಿ ಶಾಸಕರುಗಳು, ಕನ್ನಡದ ಕಾರ್ಯಕರ್ತರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡ ಶಿವಶರಣಪ್ಪ ವಾಲಿ, ನಿಂಗಣ್ಣ ಕುಂಟಿ, ಸಾ.ರಾ. ಗೋವಿಂದು, ಕಲೀಂ ಬಾಷ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಹಾಗೂ ಕರ್ನಾಟಕ ಸಂಘ (ರಿ.) ರಾಯಚೂರು ಸಂಸ್ಥೆಗಳ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಗೋಕಾಕ್ ಚಳವಳಿಯ ಸಾಕ್ಷ್ಯ ಚಿತ್ರವನ್ನು ಸಿದ್ಧಪಡಿಸಿದ್ದ ಮನೋಹರ್ ರವರನ್ನು ಗೌರವಿಸಿ ಅಭಿನಂದಿಸಲಾಯಿತು.

More News

You cannot copy content of this page