ಬೆಂಗಳೂರು : ಮುಡಾ ಕಡತ ಹೊತ್ತೊಯ್ದ ಆರೋಪ ಪ್ರಕರಣ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ. ಚಾಮುಂಡೇಶ್ವರಿ ದೇವಾಸ್ಥಾನಕ್ಕೆ ಬಂದು ಆಣೆ ಪ್ರಮಾಣ ಮಾಡಲು ಸವಾಲು ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಭೇಟಿಗೆ ಗೃಹ ಕಚೇರಿ ಕೃಷ್ಣಾ ಆಗಮಿಸಿದ ಸಚಿವ ಬೈರತಿ ಸುರೇಶ್ ಮುಡಾ ಕಡತ ಎತ್ತೊಯ್ದ ಆರೋಪ ಸಂಬಂಧ ಪ್ರತಿಕ್ರಿಯಿಸುತ್ತಾ, ನಾನು ಫೈಲ್ ತಂದಿದ್ರೆ ಶಿಕ್ಷೆಯಾಗಲಿ.ಚಾಮುಂಡೇಶ್ವರಿಗೋ ಮಂಜುನಾಥ ದೇವಸ್ಥಾನಕ್ಕೋ ಅವರು ಬರಲಿ. ನಾನೂ ದೇವಸ್ಥಾನಕ್ಕೆ ಬರುತ್ತೇನೆ. ಅಲ್ಲಿ ಪ್ರಮಾಣ ಮಾಡ್ತೇನೆ. ಚಾಮುಂಡೇಶ್ವರಿಗೆ ಬರುತ್ತೇನೆ. ನಾನೂ ಬರುತ್ತೇನೆ ಪ್ರಮಾಣ ಮಾಡೋಣ ಎಂದು ಸವಾಲು ಹಾಕಿದರು.
ಒಂದೇ ಒಂದು ಸಣ್ಣ ಪೇಪರ್ ನಾನು ತಂದಿದ್ರೆ ದೇವರು ಕೊಡಬಾರದ ಶಿಕ್ಷೆ ಕೊಡಲಿ. ಕುಮಾರಸ್ವಾಮಿ ಅವರು ಕಡತ ತಗೊಂಡು ಹೋಗಿರಬಹುದು. ಅವರ ಮನೆಯಲ್ಲಿ ಫೈಲ್ ಇರಬಹುದು. ಛಲವಾದಿ ನಾರಾಯಣಸ್ವಾಮಿ ಫೈಲ್ ಕದ್ದಿರಬಹುದು. ನಾನಂತೂ ಯಾವ ಕಡತವನ್ನೂ ತಗೊಂಡು ಬಂದಿಲ್ಲ. ಕಡತ ಏನಾದ್ರು ಇದ್ರೆ ಕುಮಾರಸ್ವಾಮಿ ಹಾಗೂ ಚಲವಾದಿ ನಾರಾಯಣಸ್ವಾಮಿ ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಲಿ. ಅವರಲ್ಲಿ ದಾಖಲೆ ಇದ್ದರೆ ಅವರು ಪ್ರಮಾಣ ಮಾಡಲಿ, ನಾನೂ ಪ್ರಮಾಣ ಮಾಡುತ್ತೇನೆ. ಸುಳ್ಳು ಹೇಳಿ ಹೇಳಿ ಹಾಳಾಗಿ ಹೋಗ್ತಾರೆ ಎಂದರು.
ಜಾರಿ ನಿರ್ದೇಶನಾಲಯ ದಾಳಿ ಅಲ್ಲ ಕಡತ ಪರಿಶೀಲನೆ :
ಮುಡಾ ಮೇಲೆ ಇ.ಡಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ರೇಡ್ ಅಲ್ಲ. ಅವರು ದಾಕಲಾತಿ ಕೇಳುತ್ತಿದ್ದಾರೆ. ಅದನ್ನು ರೇಡ್ ಅಂತ ಹೇಗೆ ಹೇಳುತ್ತೀರಿ?. ಮುಡಾ ಆಯುಕ್ತರು ಕಡತ ಕೊಡುತ್ತಾರೆ. ಎಷ್ಟು ಡಾಕ್ಯುಮೆಂಟ್ ಕೇಳ್ತಾರೋ ಅಷ್ಟೂ ಡಾಕ್ಯುಮೆಂಟ್ ಕೊಡ್ತೇವೆ ಎಂದು ತಿಳಿಸಿದರು.
ಮುಡಾ ಸಂಬಂಧ ಎಂಟು ಲಕ್ಷ ಕಡತಗಳು ಇವೆ. ಈ ಸಂಬಂಧ ಮುಡಾ ವಿಚಾರಣಾ ಆಯೋಗಕ್ಕೆ ಕಡತ ನೀಡಿದ್ದಾರೆ. ಇ.ಡಿಯವರಿಗೂ ಎಂಟು ಲಕ್ಷ ಕಡತಗಳನ್ನು ಕೊಡುತ್ತಾರೆ. ಅಧಿಕಾರಿಗಳು ಇದ್ದಾರೆ. ದಾಖಲಾತಿ ಇದ್ದರೆ ಕೊಡುತ್ತಾರೆ.ಇಸಿಐಆರ್ ಮಾಡಿದ ಮೇಲೆ ಇಡಿಗೆ ಅಧಿಕಾರ ಇದೆ ಅಂತಾ ಹೇಳುತ್ತಾರೆ. ಅವರಿಗೆ ಅಧಿಕಾರ ವ್ಯಾಪ್ತಿ ಏನಿದೆ ಅನ್ನೋದು ಅವರಿಗೆ ಗೊತ್ತಿದೆ ಎಂದರು.
ಇ.ಡಿ.ನಮಗೆ ದುಷ್ಮನ್ ಅಲ್ವಲ್ಲ : ತಮಗೆ ಇ.ಡಿ.ನೋಟೀಸ್ ಕೊಡುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಇ.ಡಿ ನೋಟೀಸ್ ಕೊಟ್ಟರೆ ಉತ್ತರ ಕೊಡಲೇ ಬೇಕು. ನಾನು ಭಾರತೀಯ ಪ್ರಜೆ. ಕಾನೂನು ಪ್ರಕಾರ ಏನು ಕೇಳುತ್ತಾರೆ ನಾನು ಉತ್ತರ ಕೊಡುತ್ತೇನೆ. ಇ.ಡಿ. ಅವರು ನನಗೆ ದುಷ್ಮನ್ ಅಲ್ವಲ್ಲ ಎಂದರು.