ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಅವರ ಪಾಪದ ಕೊಡ ತುಂಬಿದೆ. ಅವರು ರಾಜೀನಾಮೆ ಕೊಡುವ ಸಂದರ್ಭ ಸನ್ನಿಹಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ಶುಕ್ರವಾರ ಇಲ್ಲಿನ ಆರ್ಎಸ್ಎಸ್ ಕಚೇರಿ ಕೇಶವ ಕುಂಜಗೆ ಭೇಟಿ ಕೊಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಪ್ರಕರಣ ದಾಖಲಿಸಿಕೊಂಡಿದೆ. ಅದಕ್ಕೆ ಪೂರಕವಾಗಿ ಇಂದು ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ಇದು ನಿರೀಕ್ಷಿತ ಕೂಡ ಆಗಿತ್ತು ಎಂದರು.
ಸಿಎಂ ಕುಟುಂಬ ಅಕ್ರಮವಾಗಿ ಜಮೀನು ಖರೀದಿಸಿತ್ತು. 14 ನಿವೇಶನಗಳನ್ನು ಸಿಎಂ ಪತ್ನಿಗೆ ನೀಡಲಾಗಿತ್ತು. ಆ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ದಲ್ಲಾಳಿಗಳಿಗೆ ಕೊಟ್ಟಿದೆ. ಪಕ್ಷವು ಸಿಎಂ ಕುಟುಂಬದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿತ್ತು. ಸದನದಲ್ಲಿ ಚರ್ಚೆಗೂ ಅವಕಾಶ ಮಾಡಿಕೊಡಲಿಲ್ಲ. ಅಕ್ರಮ ಆಗಿಲ್ಲ ಅಂತ ಸಮರ್ಥನೆ ಮಾಡಿಕೊಂಡರು. ತಮಗೆ 62 ಕೋಟಿ ರೂ. ಪರಿಹಾರ ಕೊಡಬೇಕು ಎಂದಿದ್ದರು. ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಿದರು. ಈಗ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯವಾಗಿದೆ. 14 ನಿವೇಶನಗಳನ್ನು ಹಿಂದಿರುಗಿಸುವುದಾಗಿ ಪತ್ರ ಬರೆದಿದ್ದಾರೆ ಎಂದರು.
ಮುಡಾ ಹಗರಣ ಕುರಿತು ವಿಶೇಷ ನ್ಯಾಯಾಲಯ ತನಿಖೆಗೆ ಆದೇಶಿಸಿದೆ. ಸಿಬಿಐ ತನಿಖೆ ಆಗಬೇಕೆಂದು ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಇದರ ನಡುವೆ ಇಡಿ ದಾಳಿ ಮಾಡಿದೆ. ಎಲ್ಲವೂ ಕಾನೂನು ರೀತಿಯಲ್ಲಿ ಪ್ರಕ್ರಿಯೆಗಳು ನಡೆದಿವೆ ಎಂದರು.
ಕೆಸರೆ ಗ್ರಾಮದಲ್ಲಿ ಸಿಎಂ ಕೆಸರು ಮೆತ್ತಿಕೊಂಡಿದ್ದಾರೆ. ಕ್ಲೀನ್ ರಾಜಕಾರಣಿ ಅಂತ ತಮ್ಮ ಬೆನ್ನು ತಾವೇ ಚಪ್ಪರಿಸಿಕೊಂಡಿದ್ದರು. ಆದರೆ ಮುಡಾ ಪ್ರಕರಣದಲ್ಲಿ ಕೆಸರು ಎರಚಿಕೊಂಡಿರುವುದು ಬಹಿರಂಗಗೊಂಡಿದೆ.
ಇದರಲ್ಲಿ ಸಿಎಂ ಅವರೇ ಮೊದಲ ಆರೋಪಿ ಆಗಿದ್ದಾರೆ. ಅವರು ಭಂಡತನದಿಂದ ಹೊರಗೆ ಬಂದು ಗೌರವಯುತವಾಗಿ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.
ಇಡಿ ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ನೀವು ಯಾವ ಪುರುಷಾರ್ಥಕ್ಕಾಗಿ 14 ನಿವೇಶನ ವಾಪಸ್ಸು ಕೊಟ್ಟಿದ್ದೀರಿ..? ಇಡಿ ದಾಳಿ ನಡೆದ ಕೂಡಲೇ ಪಕ್ಷಪಾತ ನೆನಪಾಯಿತೇ? ಇಡೀ ಪ್ರಕರಣ ಮುಚ್ಚಿ ಹಾಕಲು ಖುದ್ದು ಸಿಎಂ ಆದೇಶಿಸಿದ್ದಾರೆ. ಈ ಹಗರಣ ಕೇವಲ 14 ನಿವೇಶನಗಳಿಗೆ ಸೀಮಿತವಲ್ಲ. 4ರಿಂದ 5 ಸಾವಿರ ಕೋಟಿ ರೂ. ಬೆಲೆಬಾಳುವ ನಿವೇಶನಗಳನ್ನು ದಲ್ಲಾಳಿಗಳಿಗೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳೇ ಇದೆಲ್ಲದಕ್ಕೂ ಹೊಣೆಗಾರರು. ಅವರ ಪಾಪದ ಕೊಡ ತುಂಬಿದೆ. ಅವರು ಯಾವತ್ತು ರಾಜೀನಾಮೆ ಕೊಡುತ್ತಾರೊ ಗೊತ್ತಿಲ್ಲ.
ಭಂಡತನದಿಂದ ಸಿಎಂ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ. ಆದರೆ, ಕಾನೂನು ಕುಣಿಕೆಯಿಂದ ಸಿಎಂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದರು.
ಒಂದೆರಡು ದಿನದಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮ:
ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಷಯವಾಗಿ ನಾಡಿದ್ದು ದೆಹಲಿಗೆ ಹೋಗುತ್ತಿದ್ದೇನೆ. ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ ಇನ್ನು ಎರಡ್ಮೂರು ದಿನಗಳಲ್ಲಿ ಅಂತಿಮಗೊಳ್ಳಲಿದೆ ಎಂದರು.
ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ವಿಚಾರವು ಹೈಕಮಾಂಡ್ ಬಿಟ್ಟದ್ದು. ಈಗಾಗಲೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮಾತನಾಡುವೆ. ಶಿಗ್ಗಾವಿ ಕ್ಷೇತ್ರದ ವಿಚಾರವಾಗಿ ಬಸವರಾಜ ಬೊಮ್ಮಾಯಿ ಮನಸಿನಲ್ಲಿ ಏನಿದೆ ಅನ್ನುವುದು ಮುಖ್ಯ. ಪಕ್ಷದ ಪ್ರಮುಖರ ಅಭಿಪ್ರಾಯ ತೆಗೆದುಕೊಂಡು ತೀರ್ಮಾನ ಮಾಡುವೆ ಎಂದರು.
ದುಷ್ಟ ಸರ್ಕಾರ:
ರಾಜ್ಯ ಸರ್ಕಾರ ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ಸು ಪಡೆದಿರುವುದರ ವಿರುದ್ಧ ಹೋರಾಟ ಮಾಡುತ್ತೇವೆ. ಅ. 25ರಂದು ಹೋರಾಟ ಮಾಡುವ ಉದ್ದೇಶವಿತ್ತು. ಆದರೆ ಅಂದು ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆ ದಿನವಾಗಿರುವುದರಿಂದ ಮುಂದೆ ನಡೆಸಲಾಗುವುದು. ಸರ್ಕಾರ ಇಂಥದ್ದೊಂದು ಗಂಭೀರ ಪ್ರಕರಣ ಕೈಬಿಟ್ಟಿರುವುದು ಸರಿಯಲ್ಲ. ಇದರಿಂದಾಗಿ ಜನರಲ್ಲಿ ಪೊಲೀಸ್ ವ್ಯವಸ್ಥೆ ಬಗ್ಗೆ ಅಪನಂಬಿಕೆ ಸೃಷ್ಟಿಯಾಗಿದೆ. ಎನ್ಐಎ ತನಿಖೆ ಮಾಡುತ್ತಿದ್ದರೂ ಪ್ರಕರಣ ವಾಪಸ್ಸು ಪಡೆಯುತ್ತಿರುವುದರ ಉದ್ದೇಶವೇನು? ಇದೊಂದು ದುಷ್ಟ ಸರ್ಕಾರ. ಪಕ್ಷವು ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ ಎಂದರು.
ಕೆ.ಎಸ್. ಈಶ್ವರಪ್ಪ ಅವರಿಂದ ರಾಯಣ್ಣ ಚಮ್ನಮ್ಮ ಬ್ರಿಗೇಡ್ (ಆರ್ಸಿಬಿ) ಸಂಘಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪರು ಬಿಜೆಪಿಯಲ್ಲಿ ಇಲ್ಲ. ಅವರು ಸ್ವತಂತ್ರರಿದ್ದಾರೆ. ಸಂಘಟನೆ ಮಾಡುವ ಉತ್ಸಾಹದಲ್ಲಿದ್ದಾರೆ. ನನ್ನದು ಯಾವುದಕ್ಕೂ ವಿರೋಧವಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದರು.