R ASHOK ON INTERNAL RESERVATION: ಕೂಡಲೇ ಒಳಮೀಸಲಾತಿ ಜಾರಿಗೆ ತನ್ನಿ, ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ನೀಡಿ: ಆರ್‌.ಅಶೋಕ ಆಗ್ರಹ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಒಳಮೀಸಲಾತಿಯನ್ನು ಕೂಡಲೇ ಜಾರಿ ಮಾಡಿ ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಒಳಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಒಳಮೀಸಲಾತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಸೇರಿದಂತೆ ರಾಜ್ಯದ ಕಾಂಗ್ರೆಸ್‌ ನಾಯಕರಿಗೆ ಇದು ಜಾರಿಯಾಗಲು ಇಷ್ಟವಿಲ್ಲ. ಎಲ್ಲ ಅವಕಾಶವಿದ್ದರೂ ಮತ್ತೆ ಆಯೋಗ ರಚಿಸಿ, ಮೂರು ತಿಂಗಳವರೆಗೆ ಕಾಯಲು ನಿರ್ಧರಿಸಲಾಗಿದೆ. ಇನ್ನು ಜನಗಣತಿ ಆರಂಭವಾದರೆ ಆಗ ಮತ್ತೊಂದು ಸಬೂಬು ಹೇಳಬಹುದು. ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಹಿಂದಿನ ಬಿಜೆಪಿ ಸರ್ಕಾರ ಒಳಮೀಸಲಾತಿಯನ್ನು ಒಪ್ಪಿತ್ತು. ಎಷ್ಟು ಮೀಸಲು ನೀಡಬೇಕೆಂದು ತಿಳಿಸಲಾಗಿತ್ತು. ಇನ್ನು ಯಾವುದೇ ಹುನ್ನಾರ ಮಾಡದೆ ಸರ್ಕಾರ ಒಳಮೀಸಲು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಲ್ಯಾಂಡ್‌ ಜಿಹಾದ್‌

ರಾಜ್ಯದಲ್ಲಿ ಲವ್‌ ಜಿಹಾದ್‌ನಂತೆಯೇ, ವಕ್ಫ್‌ ಬೋರ್ಡ್‌ನಿಂದ ಲ್ಯಾಂಡ್‌ ಜಿಹಾದ್‌ ನಡೆಯುತ್ತಿದೆ. ಭೂಮಿಯನ್ನು ಹೇಗೆ ಕಬಳಿಸಬೇಕೆಂದು ಸಚಿವ ಜಮೀರ್‌ ಅಹ್ಮದ್‌ ಯೋಜನೆ ರೂಪಿಸಿದ್ದಾರೆ. ಇನ್ನೂ ಕೆಲವರು ಸಂಸತ್ತು ನಮ್ಮದು, ವಿಧಾನಸೌಧವೂ ನಮ್ಮದು ಎಂದಿದ್ದಾರೆ. ಮುಸ್ಲಿಂ ಮತಾಂಧರ ವಿರುದ್ಧ ಇದ್ದ ಕೇಸು ವಾಪಸ್‌ ಪಡೆಯುವುದು, ಭಯೋತ್ಪಾದನೆ, ಪಾಕಿಸ್ತಾನಕ್ಕೆ ಜೈಕಾರ ಮೊದಲಾದವುಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ದೂರಿದರು.

ವಕ್ಫ್‌ ಬೋರ್ಡ್‌ ರೈತರ ಜಮೀನುಗಳನ್ನು ಕಬಳಿಸುತ್ತಿದೆ. ಇದು ಭಾರತಕ್ಕೆ ಸೇರಿದ ಆಸ್ತಿ. ಕಂಡ ಜಮೀನುಗಳೆಲ್ಲ ತಮ್ಮದೇ ಎಂದು ಇವರು ಹೇಳುತ್ತಿದ್ದಾರೆ. ಕೆಲವು ಮತಾಂಧ ಅಧಿಕಾರಿಗಳು ಖಬರ್‌ಸ್ತಾನ, ವಕ್ಫ್‌ ಬೋರ್ಡ್‌ ಆಸ್ತಿ ಎಂದು ದಾಖಲೆ ಸೃಷ್ಟಿಸುತ್ತಿದ್ದಾರೆ. ಈ ಮೂಲಕ ರೈತರ ಅನ್ನ ಕೀಳುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಸರ್ಕಾರ ತುಷ್ಟೀಕರಣ ಮಾಡುತ್ತಿರುವುದರಿಂದಲೇ ಭಯೋತ್ಪಾದನೆ, ಮತಾಂಧತೆ ನಡೆಯುತ್ತಿದೆ. ಹಿಂದೂಗಳು ಗಣೇಶನ ಮೂರ್ತಿಯ ಮೆರವಣಿಗೆ ಕೂಡ ಮಾಡುವಂತಿಲ್ಲ. ಸಂಜೆಯಿಂದ ರಾತ್ರಿವರೆಗೆ ಪಟಾಕಿ ಸಿಡಿಸಲು ಅವಕಾಶವಿದೆ. ಆದರೆ ಹಸಿರು ಪಟಾಕಿ ಮಾತ್ರ ಸಿಡಿಸಬೇಕು, ಅದು ಕೂಡ ಎರಡು ಗಂಟೆ ಮಾತ್ರ ಎಂದು ಕಾಂಗ್ರೆಸ್‌ ಸರ್ಕಾರ ನಿಯಮ ವಿಧಿಸಿದೆ ಎಂದರು.

ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಪರಿಗಣಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರಿಗೆ ಟಿಪ್ಪು ದೆವ್ವ ಬಂದಿದ್ದು, ಆ ದೆವ್ವವನ್ನು ಬಿಡಿಸಬೇಕಾಗಿದೆ. ಇದರ ವಿರುದ್ಧ ಹೋರಾಟ ಮಾಡಬೇಕಿದೆ. ಇಲ್ಲವಾದರೆ ವಿಧಾನಸೌಧ, ಸಂಸತ್ತು, ಬಳಿಕ ದೇವಸ್ಥಾನಗಳನ್ನೂ ವಕ್ಫ್‌ ಆಸ್ತಿ ಎನ್ನುತ್ತಾರೆ ಎಂದರು.

ವಕ್ಫ್‌ ಆಸ್ತಿಗಳನ್ನು ದೊಡ್ಡ ದೊಡ್ಡ ನಾಯಕರು ನುಂಗಿದ್ದಾರೆ. ಈ ಕುರಿತ ವರದಿಯನ್ನು ಹಿಂದೆ ವಿಧಾನಪರಿಷತ್‌ನಲ್ಲಿ ಮಂಡಿಸಲಾಗಿತ್ತು. ಕಾಂಗ್ರೆಸ್‌ ಸರ್ಕಾರ ಈಗ ಆ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಿ ಎಂದರು.

ದ್ವೇಷ ರಾಜಕಾರಣ

ರಾಜ್ಯ ಸರ್ಕಾರಕ್ಕೆ ಹಣವಿಲ್ಲದೆ ಪ್ರತಿ ಕ್ಷೇತ್ರಕ್ಕೆ 10 ಕೋಟಿ ರೂ. ಅನುದಾನ ನೀಡಿದೆ. ಆದರೆ ಜಯನಗರ ಶಾಸಕರಿಗೆ ಆ ಅನುದಾನ ಕೂಡ ನೀಡಿಲ್ಲ. ಬಿಜೆಪಿ ಸರ್ಕಾರವಿದ್ದಾಗ ರಾಮಲಿಂಗಾರೆಡ್ಡಿ ಅವರ ಕ್ಷೇತ್ರಕ್ಕೆ 80 ಕೋಟಿ ರೂ. ನೀಡಲಾಗಿತ್ತು. ಜಯನಗರದ ಜನರು ಕೂಡ ತೆರಿಗೆ ಕಟ್ಟಿದ್ದಾರೆ. ಈ ದ್ವೇಷ ರಾಜಕಾರಣದ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಚುನಾವಣಾ ಪ್ರಚಾರಕ್ಕೆ ಹೇಗಾದರೂ ಬರುತ್ತಾರೆ. ಅವರ ಬಗ್ಗೆ ಕೀಳಾಗಿ ಮಾತಾಡಿದರೆ ಒಕ್ಕಲಿಗರು ತಿರುಗಿ ಬೀಳುತ್ತಾರೆ ಎಂದರು.

More News

You cannot copy content of this page