ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಜಾತಿಗಣತಿ, ಮೀಸಲಾತಿ ವಿಷಯಗಳ ಬಗ್ಗೆ ಮಾತಾಡುತ್ತಿದ್ದಾರೆ. ಕಾಂತರಾಜು, ಜಯಪ್ರಕಾಶ್ ಹೆಗಡೆ ವರದಿ ಇಟ್ಟುಕೊಂಡು ದಿನವೂ ಗಂಧದ ಕಡ್ಡಿ ಹಚ್ಚಿ ದೀಪ ಬೆಳಗುತ್ತಿದ್ದಾರೆಯೇ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ಉದ್ಯೋಗ ಮೇಳದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜತೆ ಸಚಿವರು ಮಾತನಾಡಿದರು.
ಒಳ ಮೀಸಲಾತಿಯ ಬಗ್ಗೆ ಸರ್ಕಾರ ಆಯೋಗ ರಚನೆ ಮಾಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಈ ಸರ್ಕಾರದಿಂದ ಜನರ ಸಮಸ್ಯೆಗಳಿಗೆ ಯಾವುದೇ ರೀತಿಯ ಪರಿಹಾರ ದೊರೆಯುವುದಿಲ್ಲ. ಸಂಘ ಸಂಸ್ಥೆಗಳು ಒತ್ತಾಯ ಮಾಡುತ್ತಿವೆ. ಈ ಸರ್ಕಾರದಲ್ಲಿ, ಅದರಲ್ಲೂ ಸಿದ್ದರಾಮಯ್ಯ ಸರ್ಕಾರ ನಾಯಕತ್ವದಲ್ಲಿ ಜಾರಿಗೆ ಬರಲ್ಲ. ಮೀಸಲಾತಿ ಒಂದು ಭಾಗ.. ಇರಲಿ, ಕಾಂತರಾಜು ವರದಿ.. ಕಾಂತರಾಜು ವರದಿ ಎಂದು ಭಜನೆ ಮಾಡಿದ್ದರು ಇದೇ ಸಿದ್ದರಾಮಯ್ಯನವರು,
ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ವರದಿ ಸ್ವೀಕಾರ ಮಾಡಿಲ್ಲ ಎಂದು ಜಾಗಟೆ ಹೊಡೆದರು. ಇವರು ಅಧಿಕಾರಕ್ಕೆ ಬಂದು ಎಷ್ಟು ವರ್ಷ ಆಯಿತು. ಒಂದೂವರೆ ವರ್ಷವಾಯಿತು. ಒಂದೂವರೆ ವರ್ಷದಿಂದ ವರದಿಗಳನ್ನು ಇಟ್ಟುಕೊಂಡು ಗಂಧದ ಕಡ್ಡಿ ಹಚ್ಚಿ ದಿನ ದೀಪ ಬೆಳಗ್ತಾ ಇದ್ದಾರಾ? ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಯಾತಕ್ಕೆ ಇವರು ವರದಿಗಳನ್ನು ಬಿಡುಗಡೆ ಮಾಡೋಕೆ ಆಗಿಲ್ಲ? ಕಾಂತರಾಜು ವರದಿ, ಅದರ ಜತೆಗೆ ಜಯಪ್ರಕಾಶ್ ಹೆಗಡೆ ಅವರು ಕೊಟ್ಟ ವರದಿ.., ಎರಡನ್ನೂ ಸ್ವೀಕಾರ ಮಾಡಿ ಎಷ್ಟು ದಿನ ಆಯಿತು? ಅದನ್ನು ಇಟ್ಟುಕೊಂಡು ಏನು ಮಾಡುತ್ತಿದ್ದೀರಿ? ಎರಡು ವರದಿಗಳನ್ನು ಕೊಟ್ಟವರು ಬಹಳ ದೊಡ್ಡ ಮೇಧಾವಿಗಳು ಅಲ್ಲವೇ? ಇನ್ನೂ ಯಾಕೆ ಬಿಡುಗಡೆ ಮಾಡಿಲ್ಲ? ನನ್ನ ಮೇಲೆ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ, ಈಗ ಅವರೇ ಎರಡೂ ವರದಿಗಳನ್ನು ತೆಗೆದುಕೊಂಡು ಇಟ್ಟುಕೊಂಡಿದ್ದಾರೆ. ಇಗೋ ಕ್ಯಾಬಿನೆಟ್ ಗೆ ತರುತ್ತೇವೆ, ಅಗೋ ಕ್ಯಾಬಿನೆಟ್ ಗೆ ತರುತ್ತೇವೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇನ್ನು ಉಪ ಸಮಿತಿ, ಆಯೋಗ ಎಂದು ಚರ್ಚೆ ನಡೆಯುತ್ತಿದೆ. ಎಷ್ಟು ದಿನ ಸಬೂಬು ಹೇಳಿಕೊಂಡು ತಿರುಗುತ್ತಿರಿ? ಉಪ ಚುನಾವಣೆ ಈಗ ಘೋಷಣೆ ಆಗಿದೆ, ಲೋಕಸಭೆ ಚುನಾವಣೆಗೆ ಮೊದಲೇ ವರದಿ ಸ್ವೀಕಾರ ಮಾಡಿದ್ದೀರಿ ಅಲ್ಲವೇ? ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.