ಚನ್ನಪಟ್ಟಣ/ರಾಮನಗರ: ಸಿಪಿ ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ವ್ಯಾಪಾರ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ಆಗಿ ಹೋಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಕ್ಷೇತ್ರದ ಬೇವೂರು ಮಂಡ್ಯ ಗ್ರಾಮದಲ್ಲಿ ಪ್ರಚಾರ ಮಾಡಿದ ಅವರು; ಅವರು ನೆಪ ಮಾತ್ರಕ್ಕೆ ಲೋಕಸಭೆ ಚುನಾವಣೆಯಲ್ಲಿ ನಮ್ಮ ಜತೆ ಇದ್ದರು. ಮಾನಸಿಕವಾಗಿ ಕಾಂಗ್ರೆಸ್ ನಲ್ಲಿಯೇ ಇದ್ದರು. ನಮಗೆ ಹಾಗೂ ಬಿಜೆಪಿ ನಾಯಕರಿಗೆ ಟೋಪಿ ಹಾಕಿ ಹೋದರು ಎಂದು ಹರಿಹಾಯ್ದರು.
ಮೊದಲು ಜೆಡಿಎಸ್ ಬಿಜೆಪಿ ಯಾವುದೇ ಆಗಲಿ, ಯಾವುದೇ ಚಿಹ್ನೆ ಆಗಲಿ ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ ಎಂದಿದ್ದರು. ಹಾಗಂತ ಮಾಧ್ಯಮಗಳಿಗೆ ಕೂಡ ಹೇಳಿಕೆ ನೀಡಿದ್ದರು. ಆಮೇಲೆ ನಾವು ಜೆಡಿಎಸ್ ಟಿಕೆಟ್ ಮೇಲೆ ನಿಲ್ಲಿ ಎಂದು ಹೇಳಿದೆವು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ನಿಮ್ಮದೇ ಪಕ್ಷದಿಂದ ನಿಲ್ಲಿಸಿಕೊಳ್ಳಿ ಎಂದು ಹೇಳಿದರು. ಅವರ ಮಾತಿಗೆ ಬೆಲೆ ಕೊಟ್ಟು ನಾವು ಒಪ್ಪಿಕೊಂಡೆವು. ಕೂಡಲೇ ಯೋಗೇಶ್ವರ್ ಉಲ್ಟಾ ಹೊಡೆದರು ಎಂದು ಕೇಂದ್ರ ಸಚಿವರು ಹೇಳಿದರು
ಕೊನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಸೇರಿ ಹಲವಾರು ನಾಯಕರು, ಹೋಗಲಿ ಬಿಜೆಪಿ ಟಿಕೆಟ್ ನಿಂದಲೇ ನಿಲ್ಲಿಸಿ ಎಂದು ಕೋರಿದರು. ಡಾ.ಸಿ ಎನ್ ಮಂಜುನಾಥ್ ಅವರೂ ಮುಂದೆ ಬಂದು, ಬಿಜೆಪಿ ಟಿಕೆಟ್ ಮೇಲೆಯೇ ನಿಲ್ಲಿ ಎಂದು ಅವರಿಗೆ ಹೇಳಿದರು. ಅದಕ್ಕೂ ಚಕ್ಕರ್ ಹೊಡೆದ ಯೋಗೇಶ್ವರ್ ಮೊದಲೇ ವ್ಯಾಪಾರ ಮಾಡಿಕೊಂಡಿದ್ದ ಹಾಗೆ ಕಾಂಗ್ರೆಸ್ ಪಕ್ಷಕ್ಕೆ ಪೇರಿ ಕಿತ್ತರು ಎಂದು ಕುಮಾರಸ್ವಾಮಿ ಅವರು ಹೇಳಿದರು.