VIDHANA SOUDHA: 15ಕ್ಕೂ ಅಧಿಕ ವರ್ಷಗಳ ಬಳಿಕ ವಿಧಾನಸೌಧದಲ್ಲಿನ ಮುಖ್ಯಮಂತ್ರಿಗಳ ಕೊಠಡಿಗೆ ಹೊಸ ರೂಪ, ಎಕ್ಸ್ ಕ್ಲುಸಿವ್ ವಿಡಿಯೋ

ವಿಧಾನಸೌಧದಲ್ಲಿನ ಮುಖ್ಯಮಂತ್ರಿಗಳ ಕೊಠಡಿಗೆ ಹೊಸ ರೂಪ ನೀಡಲಾಗಿದೆ. ಸುಮಾರು 15ಕ್ಕೂ ಅಧಿಕ ವರ್ಷಗಳ ಬಳಿಕ ವಿಧಾನಸೌಧದಲ್ಲಿನ ಮೂರನೇ ಮಹಡಿಯಲ್ಲಿನ ಸಿಎಂ ಕೊಠಡಿಯನ್ನು ನವೀಕರಣ ಮಾಡಲಾಗಿದೆ.

ಕಳೆದ ಎರಡು ತಿಂಗಳಿಂದ ವಿಧಾನಸೌಧದಲ್ಲಿನ ಮೂರನೇ ಮಹಡಿಯಲ್ಲಿನ 323ನೇ ಸಂಖ್ಯೆಯ ಸಿಎಂ ಕೊಠಡಿಗೆ ಹೊಸ ರೂಪ ನೀಡುವ ಕಾಮಗಾರಿ ನಡೆಯುತ್ತಿದೆ. ಇದೀಗ ನವೀಕರಣ ಕಾಮಗಾರಿ ಬಹುತೇಕ ಪೂರ್ಣವಾಗಿದ್ದು, ಸಿಎಂ ಸಿದ್ದರಾಮಯ್ಯ ಸದ್ಯದಲ್ಲೇ ನವೀಕೃತ ಕೊಠಡಿಯಲ್ಲಿ ಪೂಜೆ ನೆರವೇರಿಸಿ ಪ್ರವೇಶಿಸಲಿದ್ದಾರೆ. ಸುಮಾರು 15ಕ್ಕೂ ಅಧಿಕ ವರ್ಷಗಳ ಬಳಿಕ ಸಿಎಂ ಕೊಠಡಿಗೆ ಹೊಸ ಟಚ್ ನೀಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಮೌಖಿಕ ಸೂಚನೆ ಮೇರೆಗೆ ಕೊಠಡಿಯನ್ನು ನವೀಕರಣ ಮಾಡಲಾಗುತ್ತಿದೆ.

ಲೋಕೋಪಯೋಗಿ ಇಲಾಖೆ ನವೀಕರಣ ಕಾರ್ಯವನ್ನು ಕಳೆದ ಎರಡು ತಿಂಗಳಿಂದ ಭರದಿಂದ ಕೈಗೊಳ್ಳುತ್ತಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಕೊಠಡಿಯ ನವೀಕರಣ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಮಾಧ್ಯಮಗಳಿಂದ ಮರೆಮಾಚಿ ಗೌಪ್ಯವಾಗಿ ಕೊಠಡಿಯೊಳಗೆ ನಿವೀಕರಣ ಕಾಮಗಾರಿ ಮಾಡಲಾಗುತ್ತಿದೆ. ಕೊಠಡಿಯ ಒಳಾಂಗಣವನ್ನು ಸಂಪೂರ್ಣವಾಗಿ ನವೀಕರಿಸಿ, ಹೊಸ ರೂಪ ನೀಡಲಾಗುತ್ತಿದೆ. ಕೊಠಡಿ ನವೀಕರಣದ ನಿಖರ ವೆಚ್ಚವನ್ನು ಅಧಿಕಾರಿಗಳು ಬಹಿರಂಗ ಪಡಿಸಿಲ್ಲ.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಕೊಠಡಿಯನ್ನು ನವೀಕರಿಸಲಾಗಿತ್ತು. ಬಳಿಕ ಕೊಠಡಿಗೆ ಯಾವುದೇ ರೀತಿಯ ನವೀಕರಣ ಮಾಡಿರಲಿಲ್ಲ. ಬಣ್ಣ ಬಳೊಯುವುದು, ಪೀಠೋಪಕರಣಕ್ಕೆ ಪಾಲಿಷ್ ಸೇರಿದಂತೆ ಸಣ್ಣಪುಟ್ಟ ದುರಸ್ತಿ ಕಾಮಗಾರಿ ಬಿಟ್ಟರೆ, ದೊಡ್ಡ ಪ್ರಮಾಣದಲ್ಲಿ ಕೊಠಡಿಯ ಒಳಾಂಗಣ ನವೀಕರಣ ಮಾಡಿರಲಿಲ್ಲ. ಇದೀಗ ಸಿಎಂ ಕೊಠಡಿಯ ಒಳಾಂಗಣಕ್ಕೆ ಸಂಪೂರ್ಣವಾಗಿ ಹೊಸ ವಿನ್ಯಾಸದ ಟಚ್ ನೀಡಲಾಗುತ್ತಿದೆ.

ಸಂಪೂರ್ಣ ಒಳಾಂಗಣ ನವೀಕರಣ, ಶೌಚಾಲಯ, ಕೊಠಡಿಯ ನೆಲ, ಗೋಡೆಗಳ ವಿನ್ಯಾಸ, ಸೀಲಿಂಗ್, ವಾಲ್ ಪೇಟಿಂಗ್, ವಿರಾಮ ಕೊಠಡಿ, ಸಂದರ್ಶಕರ ಕೊಠಡಿಗೆ ಐಶಾರಾಮಿ ಟಚ್ ನೀಡಲಾಗುತ್ತಿದೆ. ಕೊಠಡಿಯ ಇಂಟೀರಿಯರ್ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಹೊಸ ಪೀಠೋಪಕರಣ, ಹೈಟೆಕ್ ಸ್ಪರ್ಶದೊಂದಿಗೆ ಕೊಠಡಿಗೆ ಹೊಸ ರೂಪ ನೀಡಲಾಗಿದೆ.

ಹೊಸ ಸಂಪುಟ ಸಚಿವರು ಬಂದಾಗಲೆಲ್ಲ ಸಚಿವರುಗಳು ವಿಧಾನಸೌಧದಲ್ಲಿನ ತಮ್ಮ ಕೊಠಡಿಗಳನ್ನು ಸಾಮಾನ್ಯವಾಗಿ ನವೀಕರಣ ಮಾಡಿಸುತ್ತಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ವಿಧಾನಸೌಧದಲ್ಲಿನ ತಮ್ಮ ಕಾನ್ಫರೆನ್ಸ್ ಕೊಠಡಿಗೆ ಹೊಸ ರೂಪ ನೀಡಿದ್ದರು. ಆದರೆ, ಸಿಎಂ ಕೊಠಡಿಗೆ 15ಕ್ಕೂ ಅಧಿಕ ವರ್ಷದಿಂದ ಯಾವುದೇ ಹೊಸ ಟಚ್ ಕೊಟ್ಟಿರಲಿಲ್ಲ. ಆದರೆ, ಇದೀಗ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಮುಖ್ಯಮಂತ್ರಿ ಕೊಠಡಿಗೆ ಐಶಾರಾಮಿ ಟಚ್ ನೀಡಲಾಗುತ್ತಿದೆ.

ತೀವ್ರ ಆರ್ಥಿಕ ಹೊರೆ, ದುಪ್ಪಟ್ಟು ಬದ್ಧ ವೆಚ್ಚ, ಸೀಮಿತ ಸಂಪನ್ಮೂಲದ ಮಧ್ಯೆ ಕೋಟ್ಯಂತರ ವೆಚ್ಚದಲ್ಲಿ ಸಿಎಂ ಕೊಠಡಿಯ ನವೀಕರಣದ ಅಗತ್ಯತೆ ಬಗ್ಗೆಯೂ ಪ್ರಶ್ನೆಗಳು ಮೂಡಿವೆ‌‌. ಆರ್ಥಿಕ ಹೊರೆಯ ಮಧ್ಯೆ ಸಿಎಂ ಕೊಠಡಿಯ ಐಶಾರಾಮಿ ನವೀಕರಣದ ಮೂಲಕ ದುಂದುವೆಚ್ಚದ ಜರೂರತ್ತು ಏನಿತ್ತು‌ ಎಂಬ ಪ್ರಶ್ನೆಗಳು ಮೂಡಿವೆ.

More News

You cannot copy content of this page