RATION CARD CANCELLATION: BPL ಪರಿಷ್ಕರಣೆಗೆ ಕೇಂದ್ರ ಮಾನದಂಡದ ನೆಪ ಬೇಡ: ರಾಜ್ಯ ಸರ್ಕಾರಕ್ಕೆ ಪ್ರಲ್ಹಾದ ಜೋಶಿ ಚಾಟಿ

ನವದೆಹಲಿ: ರಾಜ್ಯ ಸರ್ಕಾರ ಗ್ಯಾರೆಂಟಿಗಳಿಂದ ನುಣಿಚಿಕೊಳ್ಳಲು BPL ಕಾರ್ಡ ಪರಿಷ್ಕರಣೆಗೆ ಮುಂದಾಗಿ, ಈಗಿದಕ್ಕೆ ಕೇಂದ್ರ ಸರ್ಕಾರದ ಮಾನದಂಡದ ನೆಪ ಹೇಳುವುದು ತರವಲ್ಲ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಆಕ್ಷೇಪಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಗೃಹಲಕ್ಷ್ಮಿ, ಗ್ಯಾರಂಟಿಗಳ ಹೊರೆ ತಪ್ಪಿಸಿಕೊಳ್ಳಲು ಕೇಂದ್ರದತ್ತ ಬೆರಳು ತೋರಬೇಡಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದರು.

ಬಡವರ ಅನ್ನದ ವಿಷಯದಲ್ಲಿ ರಾಜಕಾರಣ ಬೇಡ: ಬಿಪಿಎಲ್ ಕಾರ್ಡಗಳಿಗೆ ಕೇಂದ್ರದಿಂದ ಮಾನದಂಡ ವಿಧಿಸಿ ಬಹಳ ದಿನಗಳೇ ಆಗಿವೆ. ಆದರೆ, ಇಷ್ಟು ದಿನ ಬಿಟ್ಟು ಈಗೇಕೆ? ಎಂದು ಪ್ರಶ್ನಿಸಿದ ಸಚಿವರು, ರಾಜ್ಯ ಸರ್ಕಾರ ಬಡವರ ಅನ್ನದ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದರು.

ರಾಜ್ಯ ಸರ್ಕಾರಕ್ಕೆ ಈಗ ಜ್ಞಾನೋದಯ ಆಗಿದೆಯೇ? ಕೇಂದ್ರ ಸರ್ಕಾರ ಬಹು ಹಿಂದೆಯೇ BPL ಮಾನದಂಡ ವಿಧಿಸಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಪ್ರಸ್ತುತ ಗ್ಯಾರಂಟಿ ಯೋಜನೆಗಳ ಹೊರೆ ಬಿದ್ದಿದೆ. ಗ್ಯಾರೆಂಟಿಗಳ ಬಿಸಿ ತಟ್ಟಿದ್ದರಿಂದ ಈಗ ಜ್ಞಾನೋದಯ ಆಗಿದೆ. ಹಾಗಾಗಿ ‘ಕೇಂದ್ರ ಮಾನದಂಡ’ ಎಂಬ ನೆಪ ಹೇಳುತ್ತಿದೆ ಎಂದು ಜೋಶಿ ಟೀಕಿಸಿದರು.

ಭಾರತೀಯ ನೀತಿ ಆಯೋಗದ ಪ್ರಕಾರ ದೇಶಾದ್ಯಂತ 25 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಯಿಂದ ಮೇಲೆ ಬಂದಿವೆ. ಅದರ ವರದಿ ಆಧಾರದ ಮೇಲೆ ಕೇಂದ್ರ ಸರ್ಕಾರ ಬಿಪಿಎಲ್ ಮಾನದಂಡ ವಿಧಿಸಿದೆ ನಿಜ. ಆದರೆ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ನುಣಿಚಿಕೊಳ್ಳಲಿ ಎಂದಲ್ಲ ಎಂದು ಹೇಳಿದರು.

ಬಡವರ ಪರ ಚಿಂತನೆ: ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ಯಾವತ್ತೂ ಬಡವರ ಪರ ಚಿಂತನೆ ಉಳ್ಳದ್ದಾಗಿದೆ. ಆದರೆ, ರಾಜ್ಯ ಸರ್ಕಾರ ಬಡವರ ಹಿತ ಮರೆತು ಕೇಂದ್ರದ ಮಾನದಂಡ ಎಂಬ ಸಬೂಬು ಹೇಳುತ್ತ ಅರ್ಹ ಬಿಪಿಎಲ್ ಕುಟುಂಬಗಳನ್ನೂ ವಂಚಿಸಲು ಹೊರಟಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಶೇ.80 ಬಿಪಿಎಲ್ ಕುಟುಂಬ: ಕರ್ನಾಟಕದಲ್ಲಿ ಶೇ.80ರಷ್ಟು ಬಿಪಿಎಲ್ ಕಾರ್ಡಗಳಿವೆ ಎಂದು ರಾಜ್ಯ ಆಹಾರ ಖಾತೆ ಸಚಿವ ಮುನಿಯಪ್ಪ ಹೇಳಿದ್ದಾರೆ. ಆದರೆ, ಸರ್ಕಾರ ಸರಿಯಾಗಿ ಸಮೀಕ್ಷೆ ನಡೆಸಲಿ ಎಂದು ಜೋಶಿ ಸಲಹೆ ನೀಡಿದರು.

ಬಲಾಢ್ಯರ ಕಾರ್ಡುಗಳು ಹಾಗೇ ಉಳಿಯುತ್ತಿವೆ: ರಾಜ್ಯದಲ್ಲಿ “ಸ್ಥಿತಿವಂತರು” ಎಂಬ ನೆಪದಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡ್ಗಳನ್ನು ಪರಿಷ್ಕರಿಸಲಾಗುತ್ತಿದೆ. ನಿಜವಾದ ಬಡವರನ್ನು ವಂಚಿಸಲಾಗುತ್ತಿದೆ. ಬಲಾಢ್ಯರ ಕಾರ್ಡಗಳನ್ನು ಹಾಗೇ ಉಳಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಈ ರೀತಿ ಆಗಬಾರದು ಎಂದು ಸಚಿವ ಜೋಶಿ ಆಕ್ಷೇಪಿಸಿದರು.

ಪಾರದರ್ಶಕ ಆಗಿರಲಿ ಪರಿಷ್ಕರಣೆ: ರಾಜ್ಯದಲ್ಲಿ ಬಿಪಿಎಲ್ ಕಾರ್ಡ ಪರಿಷ್ಕರಣೆ ಮಾಡಲಾಗುತ್ತಿದೆ ಎಂದಿದೆ ಕಾಂಗ್ರೆಸ್ ಸರ್ಕಾರ. ಆದರೆ, ಅರ್ಹರು ವಂಚಿತರಾಗಬಾರದು. ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ, ಡಾಟಾ, ಟೆಕ್ನಾಲಜಿ ಆಧಾರದ ಮೇಲೆ ಪಾರದರ್ಶಕವಾಗಿ ಪರಿಷ್ಕರಣೆ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.

More News

You cannot copy content of this page