Pollution Free Automobile Sector: 2070ರ ವೇಳೆಗೆ ಅಟೋಮೊಬೈಲ್ ಕ್ಷೇತ್ರ ಮಾಲಿನ್ಯ ಮುಕ್ತ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ನವದೆಹಲಿ: ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಅಡಿಯಲ್ಲಿ 2070ರ ವೇಳೆಗೆ ಅಟೋಮೊಬೈಲ್ ಕ್ಷೇತ್ರವನ್ನು ಸಂಪೂರ್ಣ ವಾಯು ಮಾಲಿನ್ಯ ಮುಕ್ತಗೊಳಿಸಲಾಗುವುದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ನವದೆಹಲಿಯ ಭಾರತ್ ಮಂಟಪದಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ (BHEL) ಕಂಪನಿ ಹಮ್ಮಿಕೊಂಡಿದ್ದ BHEL ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸರ್ಕಾರವು ವಾಹನ ವಲಯದಲ್ಲಿ ಮಾಲಿನ್ಯದ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಅನೇಕ ಉಪಕ್ರಮಗಳನ್ನು ಕೈಗೆತ್ತಿಕೊಂಡಿದೆ. ಅದರಲ್ಲಿ ಉತ್ಪಾದನಾ ಸಂಪರ್ಕ ಉತ್ತೇಜನ (PLI) ಮತ್ತು ಯೋಜನೆಗಳು, ಫೇಮ್ (FAME) ಯೋಜನೆಗಳು ಪ್ರಮುಖವಾದವು. ಅಲ್ಲದೆ, ಗ್ರೀನ್ ಹೈಡ್ರೋಜನ್ ಮಿಷನ್‌ನಂತಹ ಕಾರ್ಯಕ್ರಮಗಳು ಭಾರತದ ಉತ್ಪಾದನಾ ಸಾಮರ್ಥ್ಯಗಳಿಗೆ ಗಣನೀಯ ವೇಗವನ್ನು ಒದಗಿಸಿವೆ ಎಂದು ಅವರು ಹೇಳಿದರು.

ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆಗಾಗಿ ನಡೆಯುತ್ತಿರುವ ಪ್ರಯತ್ನಗಳಲ್ಲಿ ಭಾರತವು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಅದು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಸಾಧ್ಯವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗುವ ಭಾರತ ಸ್ಪಷ್ಟ ಗುರಿಯನ್ನು ಹೊಂದಿದೆ. ಇದನ್ನು ಸಾಕಾರಗೊಳಿಸುವಲ್ಲಿ ಮತ್ತು ರಾಷ್ಟ್ರದ ಸುಸ್ಥಿರ ಕೈಗಾರಿಕಾ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ತಮ್ಮ ಪ್ರಯತ್ನಗಳನ್ನು ಮುಂದುವರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ ಕಂಪನಿಯ ಸಾಧನೆಯನ್ನು ಶ್ಲಾಘಿಸಿದ ಸಚಿವರು; ಕಂಪನಿಯು ಭಾರತೀಯ ಉತ್ಪಾದನಾ ವಲಯಕ್ಕೆ ಗಣನೀಯ ಕೊಡುಗೆ ನೀಡುತ್ತಿದೆ. 1964 ರಿಂದಲೂ ಕಂಪನಿಯು ದೇಶದ ಅಭಿವೃದ್ಧಿಗೆ ನಿರ್ಣಾಯಕ ಕೊಡುಗೆ ಕೊಟ್ಟಿದೆ ಎಂದು ಅವರು ಹೇಳಿದರು.

ಬೃಹತ್ ಕೈಗಾರಿಕೆ ಸಚಿವಾಲಯದ ಕಾರ್ಯದರ್ಶಿ ಕಮರನ್ ರಿಜ್ವಿ, ಜಂಟಿ ಕಾರ್ಯದರ್ಶಿ ವಿಜಯ ಮಿತ್ತಲ್, BHEL ಅಧ್ಯಕ್ಷ – ವ್ಯವಸ್ಥಾಪಕ ನಿರ್ದೇಶಕ ಕೆ.ಸದಾಶಿವ ಮೂರ್ತಿ, ನಿರ್ದೇಶಕ ಜಯಪ್ರಕಾಶ್ ಶ್ರೀವಾತ್ಸವ ಮುಂತಾದವರು ಉಪಸ್ಥಿತರಿದ್ದರು.

More News

You cannot copy content of this page