DCM DK SHIVAKUMAR: ಬಾಲಗಂಗಾಧರನಾಥ ಸ್ವಾಮೀಜಿ ಅವರ ವಿರುದ್ಧ ಪ್ರಕರಣ ದಾಖಲಿಸಿದಾಗ ಅಶೋಕ ಎಲ್ಲಿ ಹೋಗಿದ್ದ: ಡಿ ಕೆ ಶಿವಕುಮಾರ್ ಕೆಂಡ

ಬೆಂಗಳೂರು: “ಚಂದ್ರಶೇಖರನಾಥ ಸ್ವಾಮೀಜಿ ಅವರು ಮುಸ್ಲಿಮರಿಗೆ ಮತದಾನದ ಹಕ್ಕು ರದ್ದು ಮಾಡಬೇಕು ಎಂದು ಮಾತನಾಡಿದ್ದು ತಪ್ಪು. ಈ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೇಲೆ ಜನತಾ ದಳದವರು ಪ್ರಕರಣ ದಾಖಲಿಸಿದಾಗ ಅಶೋಕ ಎಲ್ಲಿಗೆ ಹೋಗಿದ್ದ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹರಿಹಾಯ್ದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಡಿ ಕೆ ಶಿವಕುಮಾರ್ ಅವರು ಶನಿವಾರ ಉತ್ತರಿಸಿದರು.

ಚಂದ್ರಶೇಖರನಾಥ ಸ್ವಾಮೀಜಿ ಅವರ ವಿರುದ್ಧ ಎಫ್ ಐಆರ್ ದಾಖಲಾಗಿರುವ ಬಗ್ಗೆ ಕೇಳಿದಾಗ, “ಸ್ವಾಮೀಜಿಯವರು ತಮ್ಮ ಹೇಳಿಕೆ ವಿಚಾರವಾಗಿ ಕ್ಷಮಾಪಣೆ ಕೇಳಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ. ಜಾತಿ, ಧರ್ಮಗಳ ವಿಚಾರಗಳಲ್ಲಿ ಪ್ರವೇಶ ಮಾಡಬಾರದು. ಮತದಾನ ಪ್ರತಿಯೊಬ್ಬ ಪ್ರಜೆಯ ಸಾಂವಿಧಾನಿಕ ಹಕ್ಕು. ಇದರಲ್ಲಿ ಯಾವ ದಾಕ್ಷಿಣ್ಯವೂ ಇಲ್ಲ” ಎಂದರು.

“ಈ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೇಲೆ ಮಾಜಿ ಸಚಿವ ಚನ್ನಿಗಪ್ಪ ಅವರಿಂದ ಪ್ರಕರಣ ದಾಖಲಿಸಿ, ಸ್ವಾಮೀಜಿಗಳು ಜಾಮೀನು ಪಡೆಯುವ ಸ್ಥಿತಿ ಬಂದಾಗ, ಅವರು ಹತ್ತಾರು ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದಾಗ ಈ ಅಶೋಕ ಎಲ್ಲಿಗೆ ಹೋಗಿದ್ದ? ಬೇರೆಯವರು ಎಲ್ಲಿ ಹೋಗಿದ್ದರು? ಕಾನೂನು ಎಲ್ಲರಿಗೂ ಒಂದೇ ಅಲ್ಲವೇ” ಎಂದರು.

ಬಾಲಗಂಗಾಧರನಾಥ ಸ್ವಾಮೀಜಿ ಅವರು ತಪ್ಪು ಮಾಡಿರಲಿಲ್ಲ

“ಅಂದು ಬಾಲಗಂಗಾಧರನಾಥ ಸ್ವಾಮೀಜಿ ಅವರು ತಪ್ಪು ಮಾಡಿರಲಿಲ್ಲ. ಆದರೆ, ಅಂದಿನ ಜನತಾದಳ ಸರ್ಕಾರ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದು ದಾಖಲೆಗಳಲ್ಲಿದೆ, ಇದನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳಿದರು.

ಅಶೋಕ್ ಬೆಂಕಿ ಹಚ್ಚುತ್ತಿದ್ದಾರೆ

“ಆರ್. ಅಶೋಕ್ ಅವರು ಈ ವಿಚಾರದಲ್ಲಿ ಬೆಂಕಿ ಹಚ್ಚಿ, ಬೀಡಿ ಸೇದಲು ತೊಡಗಿದ್ದಾರೆ. ಚಂದ್ರಶೇಖರನಾಥ ಸ್ವಾಮೀಜಿ ಅವರನ್ನು ಮುಟ್ಟಿದರೆ ಒಕ್ಕಲಿಗ ಸಮಾಜ ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ” ಎಂದು ಕಿಡಿಯಾದರು.

ನಾನು ಒಕ್ಕಲಿಗ ಸಮುದಾಯ ಬಳಸಿಕೊಂಡಿಲ್ಲ

ಡಿ.ಕೆ. ಶಿವಕುಮಾರ್ ಅವರು ಅವರಿಗೆ ಬೇಕಾದಾಗ ಒಕ್ಕಲಿಗ ಸಮುದಾಯ ಬಳಸಿಕೊಳ್ಳುತ್ತಾರೆ ಎನ್ನುವ ಆರ್. ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಎಂದಿಗೂ ಸಮುದಾಯವನ್ನು ಬಳಸಿಕೊಂಡಿಲ್ಲ. ನಾನು ಒಕ್ಕಲಿಗನಾಗಿ ಹುಟ್ಟಿದ್ದೇನೆ. ನಾವು ಎಲ್ಲಾ ಜಾತಿ, ಧರ್ಮಗಳಿಗೆ ಗೌರವ ಕೊಡಬೇಕು. ಸಾಂವಿಧಾನಿಕ ದೇಶದಲ್ಲಿ ಒಂದು ಧರ್ಮ, ಜಾತಿಯ ಹಕ್ಕಿನ ಬಗ್ಗೆ ಮಾತನಾಡುವುದು ಸೂಕ್ತವಲ್ಲ” ಎಂದರು.

“ಆನ್ ಬಾಕ್ಸ್ ಬೆಂಗಳೂರು ಅವರು ಉತ್ತಮ ರೀತಿಯಲ್ಲಿ ನಮ್ಮ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಸುಮಾರು 400 ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕಲೆ ಇತಿಹಾಸ, ಸಂಸ್ಕೃತಿಗೆ ಪ್ರೋತ್ಸಾಹ ಕೊಟ್ಟಷ್ಟು ಅವು ಉಳಿಯುತ್ತವೆ. ನಾನು ಸಹ ನನ್ನ ಕ್ಷೇತ್ರ ಕನಕಪುರದಲ್ಲಿ ‘ಕನಕೋತ್ಸವ’ವನ್ನು ನಡೆಸಿ ಕಲೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸ ಮಾಡುತ್ತಿದ್ದೇನೆ. ಎಲ್ಲಾ ಕಲಾ ಸಂಸ್ಥೆಗಳು ‘ನಮ್ಮ ಜಾತ್ರೆ’ ಹಬ್ಬಕ್ಕೆ ಮುಂದಿನ ದಿನಗಳಲ್ಲಿ ಪ್ರೋತ್ಸಾಹ ಕೊಟ್ಟು ನಮ್ಮ ಕಲೆ ಮತ್ತು ಸಂಸ್ಕೃತಿ ಉಳಿಸಲು ಕೈಜೋಡಿಸಬೇಕು ಎಂದು ಮನವಿ ಮಾಡುತ್ತೇನೆ” ಎಂದರು.

More News

You cannot copy content of this page