ನಂಜುಂಡಪ್ಪ.ವಿ.
ಬೆಂಗಳೂರು; ದೇಶದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಗರ್ವಭಂಗ ಮಾಡಿದ ವರ್ಷ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರ ಸೊಕ್ಕಡಗಿಸಿದ ಬೆಳವಣಿಗೆಗೆ 2024 ಸಾಕ್ಷಿಯಾಯಿತು.
“ಅಬ್ ಕಿ ಬಾರ್ 400 ಪಾರ್” ಎಂಬ ಬಿಜೆಪಿ ಘೋಷಣೆಗಳು ತಲೆಕೆಳಗಾಯಿತು. ಅತಿಯಾದ ನಿರೀಕ್ಷೆ, ಆತ್ಮ ವಿಶ‍್ವಾಸದ ಉಸಿರುಬುಡ್ಡೆ ಸ್ಫೋಟಗೊಂಡಿತು. ಕಾಂಗ್ರೆಸ್ ಸಂಖ್ಯೆ 40ಕ್ಕಿಂತ ಕಡಿಮೆಯಾಗಲಿದೆ ಎಂಬ ಘೋಷಣೆ ಮೊಳಗಿಸಿದ್ದ ಬಿಜೆಪಿಗೆ ಫಲಿತಾಂಶ ಭ್ರಮನಿರಸ ಉಂಟುಮಾಡಿತು. ಲೋಕಸಭೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ 400 ರ ಗಡಿ ದಾಟಲಿದೆ ಎಂದು ಘೋಷಿಸಿದ್ದರು.
ರಾಮಮಂದಿರ ನಿರ್ಮಾಣ, ಅಭಿವೃದ್ಧಿ ಯೋಜನೆಗಳು ಬಿಜೆಪಿಗೆ ಪ್ರಚಂಡ ಜಯ ತಂದುಕೊಡಲಿಲ್ಲ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವನ್ನು ಮತದಾರ ಕೈಬಿಡಲಿಲ್ಲ. ಬಹುತೇಕ ಸಮ – ಸಮನಾದ ಜನಾದೇಶ ದೊರೆಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಸತತ ಮೂರನೇ ಬಾರಿಗೆ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಪ್ರಮುಖ ಮೈಲಿಗಲ್ಲಾಗಿ ದಾಖಲಾಯಿತು. ಕಾಂಗ್ರೆಸ್ ಪಕ್ಷ ಶತಕದ ಗಡಿ ತಲುಪಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಚಂದ್ರಬಾಬು ನೇತೃತ್ವದ ಟಿಡಿಪಿ ಮತ್ತು ಜೆಡಿಯು ವರಿಷ್ಠ ನಿತೀಶ್ ಕುಮಾರ್ ಕಿಂಗ್ ಮೇಕರ್ ಆಗಿ ಹೊರ ಹೊಮ್ಮಿದರು.
ಈ ಬಾರಿಯ ಲೋಕಸಭಾ ಚುನಾವಣೆ ಅತ್ಯಂತ ನಿರ್ಣಾಯಕದ ಜೊತೆಗೆ ಸ್ಮರಣೀಯವೂ ಆಗಿತ್ತು. ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿತು. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಈ ಚುನಾವಣೆ ಪಾಠ ಕಲಿಸಿತು. ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ ಚುನಾವಣೆ ಇದಾಗಿತ್ತು.
ಚುನಾವಣೆಗೆ ಆರು ತಿಂಗಳ ಮುನ್ನವೇ ರಾಜಕೀಯ ಚಟುವಟಿಕೆ ಬಿರುಸುಗೊಂಡಿತ್ತು. ಜನವರಿ 25 ರ ರಾಷ್ಟ್ರೀಯ ಮತದಾರರ ದಿನದಿಂದಲೇ ಲೋಕಸಭಾ ಚುನಾವಣೆ ಪ್ರಕ್ರಿಯೆ ವಿಧ್ಯುಕ್ತವಾಗಿ ಪ್ರಾರಂಭವಾಯಿತು. ಚುನಾವಣಾ ಬಾಂಡ್ ಯೋಜನೆ ಕುರಿತು ಸುಪ್ರೀಂಕೋರ್ಟ್ ಚಾರಿತ್ರಿಕ ತೀರ್ಪು ನೀಡಿದ್ದು, ಈ ವರ್ಷದ ಮತ್ತೊಂದು ವೈಶಿಷ್ಟ್ಯ. ಈ ತೀರ್ಪು ಪ್ರತಿಪಕ್ಷಗಳಿಗೆ ಆನೆ ಬಲ ತಂದುಕೊಟ್ಟಿತು. ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿ ನೀಡಿತು. ಈ ಯೋಜನೆಯು ಸಂವಿಧಾನ ಬಾಹಿರವಾಗಿದ್ದು, ಇದರಿಂದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ ಚುನಾವಣಾ ಬಾಂಡ್ ಯೋಜನೆ ರದ್ದು ಮಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿತು.
ರಾಜಕೀಯ ಪಕ್ಷಗಳಿಗೆ ನಿಧಿಯ ರೂಪದಲ್ಲಿ ನೀಡಲಾಗುವ ಚುನಾವಣಾ ಬಾಂಡ್‌ಗಳಬಗ್ಗೆ ಮಾಹಿತಿ ಬಹಿರಂಗ ಮಾಡದಿದ್ದರೆ ಅದು ಜನರ ಮಾಹಿತಿ ಹಕ್ಕನ್ನೇ ಕಸಿಯುತ್ತದೆ. ಎಲ್ಲ ರೀತಿಯ ಕೊಡುಗೆಗಳು ಸಾರ್ವಜನಿಕ ಒಳಿತಿಗಾಗಿ ನೀಡುವ ಉದ್ದೇಶ ಹೊಂದಿರುವುದಿಲ್ಲ ಎಂದು ನ್ಯಾಯಪೀಠ ಹೇಳಿತು. ವಿಪಕ್ಷಗಳಿಗೆ ಈ ತೀರ್ಪು ಅದಮ್ಯ ಶಕ್ತಿ ಜೊತೆಗೆ ಚುನಾವಣೆಗೆ ಸನ್ನದ್ಧಗೊಳ್ಳಲು ಈ ಉತ್ಸಾಹ ತುಂಬಿತು.
ಮಾರ್ಚ್ 16 ರಂದು ಬಹು ನಿರೀಕ್ಷಿತ ಲೋಕಸಭಾ ಚುನಾವಣಾ ವೇಳಾಪಟ್ಟಿ ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿತು. ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸುವ ಸಲುವಾಗಿ ಆಯೋಗ, 2,100 ಮಂದಿ ಚುನಾವಣಾ ವೀಕ್ಷಕರ ಸಶಕ್ತ ತಂಡಗಳನ್ನು ನಿಯೋಜಿಸಿತು. 1.80 ಕೋಟಿ ಹೊಸ ಮತದಾರರು ತಮ್ಮ ಅಮೂಲ್ಯ ಹಕ್ಕು ಚಲಾಯಿಸಿದರು. ಮತ್ತಷ್ಟು ಪರಿಸರ ಸ್ನೇಹಿಯಾಗಿ ಈ ಬಾರಿ ಚುನಾವಣೆ ನಡೆಯಿತು.
ಚುನಾವಣೆ ಎಂದರೆ ಆಯಾರಾಂ – ಗಯಾರಾಂ ಸಹಜ. ಚುನಾವಣೆಗೂ ಮುನ್ನ ಆರ್.ಎಸ್.ಎಸ್ ಹಿನ್ನೆಲೆಯ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜನವರಿ 25 ರಂದೇ ಬಿಜೆಪಿಗೆ ವಾಪಸ್ ಆದರು. ದೆಹಲಿ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರಿದ ನಂತರ ಮಾತನಾಡಿದ ಜಗದೀಶ್ ಶೆಟ್ಟರ್, ಕೆಲವೊಂದು ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ಸೇರಬೇಕಾಯಿತು ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಸುಮಲತ ಅಂಬರೀಶ್ ಹಾಗೂ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಬಿಜೆಪಿಗೆ ಸೇರಿದರು.
ಬಿಜೆಪಿಯಿಂದ ರಾಜ್ಯದ ಚುನಾವಣಾ ಉಸ್ತುವಾರಿಯಾಗಿ ರಾಧಾಮೋಹನ್ ದಾಸ್ ಅಗರ್‌ವಾಲ್ ಹಾಗೂ ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಅವರನ್ನು ನೇಮಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಏಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮತ್ತಿತರೆ ಮುಖಂಡರು
ಹಳೆ ಮೈಸೂರು ಭಾಗ, ಕರಾವಳಿ, ಮಲೆನಾಡು, ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ವ್ಯಾಪಕ ಪ್ರಚಾರ ನಡೆಸಿದರು.
ಜೂನ್ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾದಾಗ ರಾಜ್ಯ ಮತ್ತು ದೇಶದ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿತ್ತು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 17 ಮತ್ತು ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಜೆಡಿಎಸ್ ಜೆಡಿಎಸ್ ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ, ಹಾವೇರಿಯಿಂದ ಬಸವರಾಜ ಬೊಮ್ಮಾಯಿ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಿಜಯ ಸಾಧಿಸಿದರು. ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಮತದಾರ ಪ್ರಭು ಲೋಕಸಭೆಗೆ ಕಳುಹಿಸಿದ.
ಶಾಸಕ ರಾಜ ವೆಂಕಟಪ್ಪ ನಾಯಕ ನಿಧನದಿಂದ ತೆರವಾಗಿದ್ದ ಸುರಪುರ ವಿಧಾನಸಭಾ ಉಪ ಚುನಾವಣೆಯಯಲ್ಲಿ ಅವರ ಪುತ್ರ ಕಾಂಗ್ರೆಸ್ ನ ರಾಜ ವೇಣುಗೋಪಾಲ ನಾಯಕ ಗೆಲುವು ಸಾಧಿಸಿದರು. ಬಿಜೆಪಿಯ ರಾಜೂಗೌಡ ವಿರುದ್ಧ 18 ಸಾವಿರದ 320 ಮತಗಳಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು.
ಕೇಂದ್ರದಲ್ಲಿ ಎನ್.ಡಿ.ಎ ಮೈತ್ರಿಕೂಟ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿ ಮಹತ್ವದ ಸಾಧನೆ ಮಾಡಿತು. ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ನ ಅಜಯ್ ರಾಯ್ ಅವರಿಗಿಂತ 1.52 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದರು. ಉತ್ತರ ಪ್ರದೇಶದ ಫೈಜಾಬಾದ್ ಲೋಕಸಭಾ ಕ್ಷೇತ್ರದ ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಅವರು ಬಿಜೆಪಿಯ ಲಲ್ಲು ಸಿಂಗ್ ಅವರನ್ನು 54,500 ಮತಗಳಿಗೂ ಹೆಚ್ಚಿನ ಅಂತರದಿಂದ ಪರಾಭವಗೊಳಿಸಿದರು. ಹಿಂದುತ್ವದ ಶಕ್ತಿ ಕೇಂದ್ರದಲ್ಲಿ ಬಿಜೆಪಿಗೆ ಮತದಾರರು ಮರ್ಮಾಘಾತ ನೀಡಿದರು.
ರಾಜ್ಯದಲ್ಲಿ ಕಳೆದ ಮೂರು ದಶಕಗಳಲ್ಲಿ ನಡೆದ ಲೋಕಸಭಾ ಚುನಾವಣೆಗಳ ಪಕ್ಷವಾರು ಫಲಿತಾಂಶದತ್ತ ನೋಟ ಹರಿಸುವುದಾದರೆ 2019ಕ್ಕೂ ಮುನ್ನ ಯಾವುದೇ ರಾಜಕೀಯ ಪಕ್ಷ 25 ಅಥವಾ ಅದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಗಳಿಸಿದ್ದು, ಮೂರು ದಶಕಗಳ ಹಿಂದೆ. 1989ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 28 ಸ್ಥಾನಗಳ ಪೈಕಿ 27 ನ್ನು ಗೆದ್ದುಕೊಂಡಿತ್ತು. ಆದರೆ, ನಂತರ ನಡೆದ ಲೋಕಸಭಾ ಚುನಾವಣೆಗಳಲ್ಲಿ ಈ ದಾಖಲೆಯನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಯಿತು. 2019 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಕೇವಲ 1 ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿತ್ತು.
1991 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಭಾರತೀಯ ಜನತಾಪಕ್ಷ ಮೊದಲ ಬಾರಿಗೆ ಖಾತೆ ತೆರೆಯಿತು. ಮಂಗಳೂರಿನಿಂದ ವಿ.ಧನಂಜಯ ಕುಮಾರ್, ಬೆಂಗಳೂರು ದಕ್ಷಿಣದಿಂದ ಕೆ.ವೆಂಕಟಗಿರಿ ಗೌಡ ಮತ್ತು ತುಮಕೂರು ಲೋಕಸಭಾ ಕ್ಷೇತ್ರದಿಂದ ಎಸ್.ಮಲ್ಲಿಕಾರ್ಜುನಯ್ಯ ಬಿಜೆಪಿಯಿಂದ ಗದದ್ದಿದ್ದರು. 1995 ರಲ್ಲಿ 5, 1998ರಲ್ಲಿ ಮೊದಲಬಾರಿಗೆ 13 ಲೋಕಸಭಾ ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಬಿಜೆಪಿ ತನ್ನ ಫಲಿತಾಂಶವನ್ನು ಮತ್ತಷ್ಟು ಸುಧಾರಿಸಿಕೊಂಡಿತು. ಬಿಜೆಪಿಯೊಂದಿಗೆ ಸಂಯುಕ್ತ ಜನತಾದಳ ಸೇರ್ಪಡೆಯಾದ ನಂತರ ರಾಜ್ಯದಿಂದ, ಲೋಕಸಭೆಗೆ 2014ರಲ್ಲಿ 18 ಸದಸ್ಯರು ಚುನಾಯಿತರಾದರು. 2006 ಮತ್ತು 2014ರಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ, 16 ಮತ್ತು 17 ಸ್ಥಾನಗಳಲ್ಲಿ ಗೆದ್ದಿತ್ತು. 2004 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 8 ಮತ್ತು ಜೆಡಿಎಸ್ 2 ಸ್ಥಾನಗಳನ್ನು ಪಡೆದಿದ್ದವು. 2009ರಲ್ಲಿ ಕಾಂಗ್ರೆಸ್ 7 ಮತ್ತು ಜೆಡಿಎಸ್ 3 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದ್ದವು. 1998 ರಿಂದೀಚೆಗೆ ನಡೆದಿರುವ ಮಹಾಚುನಾವಣೆಗಳಲ್ಲಿ ಕಾಂಗ್ರೆಸ್ 9 ಸ್ಥಾನಗಳಿಗಿಂತ ಹೆಚ್ಚು ಗೆದ್ದಿಲ್ಲ. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಕೇವಲ ಒಂದೊಂದು ಸ್ಥಾನಗಳಿಗೆ ಮಾತ್ರ ತೃಪ್ತಿ ಪಡೆಯಬೇಕಾಯಿತು.
ಕೇಂದ್ರ ಸಂಪುಟದಲ್ಲಿ ರಾಜ್ಯದಿಂದ ಬಿಜೆಪಿಯ ಪ್ರಹ್ಲಾದ್ ಜೋಶಿ ಸಂಪುಟ ದರ್ಜೆ ಸಚಿವರಾಗಿ, ಶೋಭಾ ಕಂದ್ಲಾಜೆ, ವಿ. ಸೋಮಣ್ಣ ರಾಜ್ಯ ಸಚಿವ ಸ್ಥಾನ ದೊರೆತಿದ್ದು, ಲೋಕಸಭೆಯಲ್ಲಿ ಕೇವಲ ಎರಡು ಮಂದಿ ಸದಸ್ಯರನ್ನೊಳಗೊಂಡ ಜೆಡಿಎಸ್ ನ ಎಚ್.ಡಿ. ಕುಮಾರ ಸ್ವಾಮಿ ಅವರಿಗೂ ಸಹ ಸಂಪುಟ ದರ್ಜೆ ಸಚಿವ ಸ್ಥಾನ ದೊರೆತಿರುವುದು ವಿಶೇಷ.
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಬೇಕಿದ್ದ ಚುನಾವಣೆಯಲ್ಲಿ ಎಲ್ಲಾ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು.
ಕಾಂಗ್ರೆಸ್‌ನಿಂದ ಐವಾನ್ ಡಿಸೋಜಾ, ಕೆ.ವಿ.ಗೋವಿಂದರಾಜು, ಜಗದೇವ್ ಗುತ್ತೇದಾರರ್, ಬಲ್ಕಿಶ್‌ಬಾನು, ಎನ್.ಎಸ್.ಬೋಸರಾಜು, ಎ. ವಸಂತ ಕುಮಾರ್. ಡಾ.ಎಸ್. ಯತೀಂದ್ರ ಬಿಜೆಪಿಯಿಂದ ಸಿ.ಟಿ.ರವಿ, ಎನ್.ರವಿಕುಮಾರ್, ಮುಳೆ ಮಾರುತಿರಾವ್, ಜೆಡಿಎಸ್‌ನಿಂದ ಟಿ.ಎನ್.ಜವರಾಯಿಗೌಡ ಅವಿರೋಧವಾಗಿ ಆಯ್ಕೆಯಾಗಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಜಯ ಸಾಧಿಸಿದರು. ಜೂನ್ 7 ರಂದು ನಡೆದ ಮತ ಎಣಿಕೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ ಅವರಿಗಿಂತ 1,860 ಮತಗಳ ಅಂತರದಿಂದ ಗೆಲುವು ದಾಖಲಿಸಿದರು.
ಬಾಕ್ಸ್
ಲೋಕಸಭೆ ಚುನಾವಣೆ ನಂತರ 3 ವಿಧಾನಸಭೆ ಉಪ ಚುನಾವಣೆ ವಿಚಾರ ಕಾವು ತೀವ್ರಗೊಂಡಿತು. ಟಿಕೆಟ್ ಗಾಗಿ ತೀವ್ರ ಹಣಾಹಣಿಯೇ ನಡೆಯಿತು. ಚೆನ್ನಪಟ್ಟಣದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಮ್ಮ ಎಂ.ಎಲ್.ಸಿ ಸ್ಥಾನಕ್ಕೆ ಅಕ್ಟೋಬರ್ 21 ರಂದು ರಾಜೀನಾಮೆ ನೀಡಿದರು.
ಮರು ದಿನ ಅವರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಬಿಜೆಪಿ ಜೆಡಿಎಸ್ ಮೈತ್ರಿ ತಮ್ಮ ರಾಜಕೀಯ ಬೆಳವಣಿಗೆಗೆ ಪ್ರತಿಕೂಲ ಪರಿಣಾಮ ಬೀರಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಎಂದು ಸಿ.ಪಿ. ಯೋಗೇಶ್ವರ್ ಹೇಳಿದರು. ಕೆಲವೊಮ್ಮೆ ನಾವೇ ಕಟ್ಟಿದ ಮನೆಯಲ್ಲಿ ನಾವು ಇರಲು ಸಾಧ್ಯವಾಗುವುದಿಲ್ಲ. ರಾಜಕೀಯ ಜೀವನವನ್ನು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶುರು ಮಾಡಿದ್ದು, ಇದೀಗ ಮರಳಿ ಮನೆಗೆ ಬಂದಿದ್ದು, ಮುಂದಿನ ರಾಜಕೀಯ ಜೀವನ ಇಲ್ಲೇ ಕಳೆಯುವುದಾಗಿ ಹೇಳಿದರು.
ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ ಜೊತೆಗೆ ಇಳಿ ವಯಸ್ಸಿನಲ್ಲಿಯೂ ದೇವೇಗೌಡರು ಒಂದು ವಾರ ಕ್ಷೇತ್ರದಲ್ಲೇ ಬೀಡು ಬಿಟ್ಟು ತಮ್ಮ ಮೊಮ್ಮಗನ ಪರ ಪ್ರಚಾರ ನಡೆಸಿದರು.
ಅಕ್ಟೋಬರ್ 23 ರಂದು ಫಲಿತಾಂಶ ಬಂದಾಗ ಕಾಂಗ್ರೆಸ್ ಹ್ಯಾಟ್ರಿಕ್ ಸಾಧನೆ ಮಾಡಿತು. ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿತು. ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನ ಸಿ.ಪಿ. ಯೋಗೇಶ್ವರ್, ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ 25,413 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹಮ್ಮದ್ ಖಾನ್ ಪಠಾಣ್ 13 ಸಾವಿರದ 448 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ವಿರುದ್ಧ ಗೆದ್ದರು.
ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ. ಅನ್ನಪೂರ್ಣ 9 ಸಾವಿರದ 649 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಸೋಲಿಸಿದರು.