ಬೆಂಗಳೂರು: “ಜಾತಿ ಗಣತಿ ವಿಚಾರವಾಗಿ ಈಗಲೇ ಸಭೆ ಮಾಡಿ ಗೊಂದಲ ಸೃಷ್ಟಿಸುವುದು ಬೇಡ, ಸಭೆಯನ್ನು ಮುಂದೂಡಿ. ಈ ವಿಚಾರವಾಗಿ ಶ್ರೀಗಳ ಜೊತೆ ನಾನು ಮಾತನಾಡುತ್ತೇನೆ” ಎಂದು ಒಕ್ಕಲಿಗರ ಸಂಘದ ಪದಾಧಿಕಾರಿಗಳಿಗೆ ಸೂಚಿಸಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.
ಒಕ್ಕಲಿಗರ ಸಂಘದ ಪದಾಧಿಕಾರಿಗಳ ಜೊತೆ ಸಭೆ ಮಾಡಿದ್ದೀರಿ ಎಂದು ಕೇಳಿದಾಗ, “ನಾನು ಯಾವುದೇ ಸಭೆ ಮಾಡಿಲ್ಲ. ಅದರ ಅವಶ್ಯಕತೆ ನನಗಿಲ್ಲ. ಇಂದು ಜಾತಿ ಗಣತಿ ವಿಚಾರವಾಗಿ ಪ್ರತ್ಯೇಕವಾಗಿ ಸಭೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದರು. ಆ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದೇನೆ.
ಈ ಸಭೆಯನ್ನು ಮುಂದಕ್ಕೆ ಹಾಕಿ, ಯಾರಿಗೂ ಅನ್ಯಾಯವಾಗದಂತೆ ನಾವು ನೋಡಿಕೊಳ್ಳುತ್ತೇವೆ” ಎಂದು ಭರವಸೆ ನೀಡಿರುವುದಾಗಿ ತಿಳಿಸಿದರುಲ್.
ಮತ್ತೆ ಕಿತ್ತಾಡಿಕೊಂಡರೆ ಆಡಳಿತಾಧಿಕಾರಿ ನೇಮಕ ಎಚ್ಚರಿಕೆ
“ಒಕ್ಕಲಿಗರ ಸಂಘದ ಹೊಸ ಪದಾಧಿಕಾರಿಗಳ ತಂಡ ರಾಜಿ ಮಾಡಿಕೊಂಡು ನನ್ನನ್ನು ಭೇಟಿ ಮಾಡಲು ಬಂದಿದ್ದರು. ಮತ್ತೇ ಪದಾಧಿಕಾರಿಗಳ ಮಧ್ಯೆ ಕಿತ್ತಾಟ ನಡೆದರೆ ಆಡಳಿತಾಧಿಕಾರಿ ನೇಮಿಸುವುದಾಗಿ ಎಚ್ಚರಿಕೆ ನೀಡಿದ್ದೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ” ಎಂದರು.
ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಿ ಟಿ ರವಿ ನಿಂದಿಸಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೃಹ ಸಚಿವರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಗೃಹಮಂತ್ರಿಗಳೇ ಉತ್ತರ ನೀಡುತ್ತಾರೆ”ಎಂದು ತಿಳಿಸಿದರು.