HDK ON CHAMARAJPET INCIDENT: ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ; ಕೇಂದ್ರ ಸಚಿವ HDK ಆಗ್ರಹ

ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕುಯ್ದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು, ಇದು ಅತ್ಯಂತ ಹೇಯ, ವಿಕೃತಿ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು; ನಾನು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕೂಡಲೇ ಆ ದುಷ್ಟರನ್ನು ಪತ್ತೆ ಹಚ್ಚಿ ಕಠಿಣವಾಗಿ ಶಿಕ್ಷಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದರು.

ಹಸುಗಳ ಕೆಚ್ಚಲು ಕೊಯ್ದ ಘಟನೆ ಬಗ್ಗೆ ಬೆಳಗ್ಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ದೃಶ್ಯ ಸಮೇತ ವರದಿಗಳು ಬಂದಾಗ ನನಗೆ ತೀವ್ರ ಆಘಾತ ಉಂಟಾಯಿತು. ಇದು ರಾಕ್ಷಸೀ ಕೃತ್ಯ. ಕಾಂಗ್ರೆಸ್ ಆಡಳಿತ ಇವತ್ತು ಎಲ್ಲಿಗೆ ಬಂದಿದೆ? ಎಂಬುದಕ್ಕೆ ಇದುವೇ ಸಾಕ್ಷಿ. ಇಲ್ಲಿಯವರೆಗೆ ಮನುಷ್ಯರನ್ನು ಕೊಲ್ಲುವುದನ್ನು ನೋಡಿದ್ದೇವೆ. ಹಸುವನ್ನು ನಾವು ಕಾಮಧೇನು, ಮಹಾಲಕ್ಷ್ಮೀ ಎಂದು ಪೂಜಿಸುತ್ತಿದ್ದೇವೆ. ಅಂಥ ಕಾಮಧೇನುವಿನ ಕೆಚ್ಚಲು ಕೊಯ್ಯುವ ಹೇಯ ಕೃತ್ಯ ಮಾಡಿರುವ ಕೆಟ್ಟ ಮನಸ್ಥಿತಿಗೆ ಏನನ್ನಬೇಕು? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗೃಹ ಸಚಿವ ಪರಮೇಶ್ವರ್ ಅವರು ಈ ನಿಟ್ಟಿನಲ್ಲಿ ಕಠಿಣ ಕ್ರಮ ತಗೋಬೇಕು. ಅವರ ಬೆಣ್ಣೆ ಮಾತು ಇಲ್ಲಿ ನಡೆಯಲ್ಲ. ನಿಮ್ಮ ಡಿನ್ನರ್ ಮೀಟಿಂಗ್ ನಿಲ್ಸಿ, ಆಡಳಿತ ಸರಿ ಮಾಡೋದನ್ನು ನೋಡಿ. ಈ ಪ್ರಕರಣದ ಬಗೆ ಮುಲಾಜಿಲ್ಲದೆ ಕ್ರಮ ಜರುಗಿಸಿ. ಇವರ ಸರಕಾರದ ಅವಧಿಯಲ್ಲಿ ರಾಕ್ಷಸೀ ಕೃತ್ಯ ಮೆರೆಯುವ ಇಂಥ ಜನರನ್ನು ಹೆಚ್ಚೆಚ್ಚು ಸೃಷ್ಟಿ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

More News

You cannot copy content of this page