ಬೆಂಗಳೂರು: ಸಾಮಾನ್ಯ ಜನತೆ ಹಾಗೂ ಸಣ್ಣ ವ್ಯಾಪಾರಸ್ಥರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕಾನೂನು ತರಲು ಮುಂದಾಗಿದೆ. ಸಾಲ ವಸೂಲಾತಿಯ ವೇಳೆ ಬಲಾತ್ಕಾರ, ಕಿರುಕುಳ, ಹಾಗೂ ಅಮಾನವೀಯ ವರ್ತನೆಗೆ ಕಡಿವಾಣ ಹಾಕಲು “ಕರ್ನಾಟಕ ಮೈಕ್ರೋಫೈನಾನ್ಸ್ ಪ್ರಿವೆನ್ಷನ್ ಆಫ್ ಕೋಯೆರ್ಸಿವ್ ಆ್ಯಂಡ್ ಇನ್‌ಹ್ಯೂಮನ್ ಆ್ಯಕ್ಷನ್ 2025” ಮಸೂದೆ ತರಲು ನಿರ್ಧರಿಸಲಾಗಿದೆ.
ಈ ಕುರಿತು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಕಂದಾಯ ಮತ್ತು ಆರ್ಥಿಕ ಇಲಾಖೆಗಳ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಸಾವಿನ ದಾರಿ ಹಿಡಿಯುವ ಪರಿಸ್ಥಿತಿ – ತ್ವರಿತ ಕಾನೂನು ಅಗತ್ಯ
ಸಭೆಯ ಬಳಿಕ ಮಾತನಾಡಿದ ಗೃಹ ಸಚಿವ ಪರಮೇಶ್ವರ, “ಮೈಕ್ರೋಫೈನಾನ್ಸ್ ಸಂಸ್ಥೆಗಳ ಸಾಲ ವಸೂಲಾತಿಯ ಅಮಾನುಷ ಕ್ರಮದಿಂದ ಜನ ಊರು ಬಿಡುತ್ತಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ತಡೆಗಟ್ಟಲು ತ್ವರಿತ ಕಾನೂನು ಅಗತ್ಯ” ಎಂದು ಹೇಳಿದರು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರ ಮಾರ್ಗದರ್ಶನದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಸ್ವಯಂಪ್ರೇರಿತ ದೂರು ದಾಖಲಿಸೋ ಅಧಿಕಾರ ಪೊಲೀಸ್ ಇಲಾಖೆಗೆ
ಸಾಮಾನ್ಯ ಜನರ ಪಾಡು ಕಡಿಮೆ ಮಾಡಲು “ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳದ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ” ಎಂದು ಗೃಹ ಸಚಿವರು ಹೇಳಿದ್ದಾರೆ.
ಸಾಲ ವಸೂಲಾತಿಗೆ ನಿಯಮ, ಜನ ಜಾಗೃತಿಗೆ ಪ್ರಭಾವ
“ಸಾಲ ನೀಡುವುದು ಹಾಗೂ ವಾಪಸ ಪಡೆಯುವುದು ಸಹಜ. ಆದರೆ, ಸಾಲ ವಸೂಲಾತಿಯ ರೀತಿಯಲ್ಲಿಯೇ ಸಮಸ್ಯೆಯಿದೆ. ಸಾಮಾನ್ಯ ಜನರ ಮೇಲೆ ಬಲಾತ್ಕಾರ ಮತ್ತು ಅಹಿತಕರ ಒತ್ತಡ ಹೇರುವುದನ್ನು ಸರ್ಕಾರ ಸಹಿಸದು” ಎಂದು ಸಚಿವರು ಹೇಳಿದ್ದಾರೆ.
ಬಜೆಟ್ ಅಧಿವೇಶನದವರೆಗೂ ಕಾಯಲಾಗದು – ತಕ್ಷಣ ಕ್ರಮ
“ಈ ಮಸೂದೆ ತರುವುದಕ್ಕಾಗಿ ಬಜೆಟ್ ಅಧಿವೇಶನದವರೆಗೆ ಕಾಯುವ ಅಗತ್ಯವಿಲ್ಲ. ತಕ್ಷಣವೇ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಭೆಯ ನಿರ್ಧಾರಗಳನ್ನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಮಸೂದೆ ಕ್ಯಾಬಿನೆಟ್‌ಗೆ ತರಲಾಗುವುದು” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಈ ನಿರ್ಧಾರದಿಂದ ರಾಜ್ಯದ ಸಾವಿರಾರು ಕೈಗಾರಿಕೆ ಕಾರ್ಮಿಕರು, ಪುಟ್ಟ ವ್ಯಾಪಾರಸ್ಥರು, ಮತ್ತು ಸಾಲದ ಬಾಧೆಗೊಳಗಾದ ಜನತೆಗೆ ನಿರಾಳತೆ ಸಿಗುವ ನಿರೀಕ್ಷೆಯಿದೆ.