Bankapur Wolf Sanctuary: ಬಂಕಾಪುರಧಾಮದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಮತ್ತೊಂದು ತೋಳ

ಬೆಂಗಳೂರು: ಕೊಪ್ಪಳ ಜಿಲ್ಲೆ ಬಂಕಾಪೂರ ತೋಳಧಾಮದಲ್ಲಿ ಮತ್ತೊಂದು ತೋಳ ಐದು ಮರಿಗಳಿಗೆ ಜನ್ಮ ನೀಡಿದ್ದು, ಸಂರಕ್ಷಿತ ತೋಳ ಧಾಮದಲ್ಲಿ ಅಳಿವಿನಂಚಿನಲ್ಲಿರುವ ಬೂದು ತೋಳ (ಇಂಡಿಯನ್ ಗ್ರೇ ಉಲ್ಫ್)ದ ಸಂತತಿಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮಾಧ್ಯಮ ಹೇಳಿಕೆಯಲ್ಲಿ ಅವರು, ಗಂಗಾವತಿ ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿರುವ ಸುಮಾರು 332 ಹೆಕ್ಟರ್ ಬಂಕಾಪೂರ ತೋಳ ಧಾಮದ ಸಂರಕ್ಷಣೆಗೆ ಅರಣ್ಯ ಇಲಾಖೆ ಕಾಳಜಿ ವಹಿಸಿದ್ದು, ಇದು ವನ್ಯಜೀವಿಗಳಿಗೆ ಸುರಕ್ಷಿತ ತಾಣವಾಗಿದೆ. ತೋಳಗಳ ಸಂತತಿಯಲ್ಲಿ ಹೆಚ್ಚಳಕ್ಕೂ ಇದೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಇದೇ ಕುರುಚಲು ಕಾಡಿನಲ್ಲಿ ತೋಳವೊಂದು 8 ಮರಿಗಳಿಗೆ ಜನ್ಮ ನೀಡಿತ್ತು, ಈಗ ಮತ್ತೊಂದು ತೋಳ ಐದು ಮರಿಗೆ ಜನ್ಮಕೊಟ್ಟಿದೆ. ನೈಸರ್ಗಿಕ ಗುಹೆಗಳು, ಬೆಟ್ಟ ಗುಡ್ಡಗಳನ್ನೂ ಹೊಂದಿರುವ ಈ ಧಾಮದಲ್ಲಿ, ತೋಳ, ಚಿರತೆ, ನವಿಲು, ಕತ್ತೆಕಿರುಬ, ನರಿ, ಮೊಲ, ಮುಳ್ಳುಹಂದಿಯೇ ಮೊದಲಾದ ಹಲವು ವನ್ಯಜೀವಿಗಳಿವೆ. ಕಳ್ಳಬೇಟೆ ತಡೆಗೂ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಸ್ತುತ ಈ ಕಾಡಿನಲ್ಲಿ ಬೂದು ತೋಳಗಳ ಸಂಖ್ಯೆ 40-45ಕ್ಕೆ ಹೆಚ್ಚಳವಾಗಿದೆ. ನವಜಾತ ತೋಳದ ಮರಿಗಳಿಗೆ ಜನರಿಂದಲಾಗಲೀ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದ್ದು, ಗುಹೆಗಳ ಬಳಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ

More News

You cannot copy content of this page