LOKAYUKTA RAID: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಒಟ್ಟು 8 ಜನ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆದಿದೆ. ಬೆಂಗಳೂರು, ಕೋಲಾರ, ದಾವಣಗೆರೆ, ತುಮಕೂರು, ವಿಜಯಪುರ, ಬಾಗಲಕೋಟೆ ಹಾಗೂ ಕಲಬುರಗಿಯಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದು, ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿದೆ.
ಬೆಂಗಳೂರಿನಲ್ಲಿ ಡಿಪಿಎಆರ್ ಮುಖ್ಯ ಎಂಜಿನಿಯರ್ ಟಿ.ಡಿ. ನಂಜುಂಡಪ್ಪ, ಬಿಬಿಎಂಪಿಯ ಗುಣಮಟ್ಟ ನಿಯಂತ್ರಣ ಮತ್ತು ಗುಣಮಟ್ಟ ಭರವಸೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹೆಚ್.ಬಿ. ಕಲ್ಲೇಶಪ್ಪ ಅವರ ಮನೆಗಳ ಮೇಲೆ ದಾಳಿ ನಡೆದಿದೆ.

ಕೋಲಾರದಲ್ಲಿ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ. ನಾಗರಾಜ್, ಕಲಬುರಗಿಯಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಘಟಕದ ಅಧಿಕಾರಿ ಜಗನ್ನಾಥ್ ಅವರ ಮನೆಗಳ ಮೇಲೂ ದಾಳಿ ನಡೆದಿದೆ

ದಾವಣಗೆರೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಜಿಲ್ಲಾ ಸಂಖ್ಯಾಶಾಸ್ತ್ರೀಯ ಅಧಿಕಾರಿ ಜಿ.ಎಸ್. ನಾಗರಾಜು, ತುಮಕೂರಿನಲ್ಲಿ ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಜಗದೀಶ್ ಅವರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ತುಮಕೂರು ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿರಾ ತಾಲೂಕಿನ ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಜಗದೀಶ್ ಅವರ ಮನೆ ಮೇಲೆ ಈ ದಾಳಿ ನಡೆದಿದೆ. ಡಾ. ಜಗದೀಶ್ ಅವರು ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಈ ದಾಳಿ ನಡೆದಿದೆ. ತುಮಕೂರಿನ ಬಟವಾಡಿ ಬಳಿಯಿರುವ ಮನೆ, ಮಂಜುನಾಥ ನಗರದಲ್ಲಿರುವ ಕಾಂಪ್ಲೆಕ್ಸ್, ಶಿರಾ ತಾಲೂಕಿನ ಯಲ್ಪೆನಹಳ್ಳಿಯಲ್ಲಿರುವ ಮನೆ ಮತ್ತು ಶಿರಾ ತಾಲೂಕಿನ ಬರಗೂರಿನಲ್ಲಿರುವ ಆಸ್ತಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟಾರೆಯಾಗಿ ಬರಗೂರಿನಲ್ಲಿ 3 ಕಡೆ, ತುಮಕೂರಿನಲ್ಲಿ 3 ಕಡೆ ಸೇರಿ ಒಟ್ಟು 6 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಡಾ. ಜಗದೀಶ್ ಅವರ ಪತ್ನಿ ರೂಪ, ತಾಯಿ ಮತ್ತು ಸಹೋದರ ಕಾಂತರಾಜ್ ಹೆಸರಿನಲ್ಲಿರುವ ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ

ವಿಜಯಪುರದಲ್ಲಿ ಕರ್ನಾಟಕ ಗೃಹ ಮಂಡಳಿ ಎಫ್‌ಡಿಎ ಶಿವಾನಂದ ಕೆಂಬಾವಿ ಅವರ ಮನೆ ಮತ್ತು ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ವಿಜಯಪುರ ನಗರದ ಸುಕೂನ್ ಕಾಲೋನಿಯಲ್ಲಿರುವ ನಿವಾಸ ಮತ್ತು ವಿಜಯಪುರ ಜಿಲ್ಲೆ ತಿಡಗುಂದಿ ಗ್ರಾಮದ ಬಳಿಯಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಲೋಕಾಯುಕ್ತ ಎಸ್ಪಿ ಡಿ. ಮಲ್ಲೇಶ್ ನೇತೃತ್ವದಲ್ಲಿ ಡಿವೈಎಸ್ಪಿ ಸುರೇಶ್ ರೆಡ್ಡಿ, ಸಿಪಿಐ ಆನಂದ ಟಕ್ಕಣ್ಣನವರ್ ಸೇರಿದಂತೆ ಅಧಿಕಾರಿಗಳ ತಂಡ ಈ ದಾಳಿಯನ್ನು ನಡೆಸಿದೆ.

ಕಲಬುರಗಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪಿಡಬ್ಲ್ಯೂಡಿ ಇಲಾಖೆಯ ಸೆಕ್ರೆಟರಿ ಇನ್ ಚೀಫ್ ಜಗನ್ನಾಥ್ ಹಲಿಂಗೆ ಅವರ ಮನೆ ಮೇಲೆ ಈ ದಾಳಿ ನಡೆದಿದೆ. ಕಲಬುರಗಿ ನಗರದ ಓಕಳಿ ಕ್ಯಾಂಪ್ ಬಡಾವಣೆಯಲ್ಲಿರುವ ಮನೆ, ಬೆಂಗಳೂರಿನ ಕಚೇರಿ, ಧನ್ನೂರ್ (ಕೆ) ಗ್ರಾಮದಲ್ಲಿರುವ ಮನೆ ಸೇರಿದಂತೆ ಒಟ್ಟು 3 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಅಧಿಕಾರಿಗಳ 8 ತಂಡಗಳು ಈ ದಾಳೆಯಲ್ಲಿ ಪಾಲ್ಗೊಂಡಿದ್ದವು. ಎಸ್ಪಿ ಬಿಕೆ ಉಮೇಶ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಈ ದಾಳಿ ನಡೆದಿದೆ

More News

You cannot copy content of this page