PRAHLAD JOSHI ON KARNATAKA BUDGET: ರಾಜ್ಯದ ಸಾಲ ₹8 ಲಕ್ಷ ಕೋಟಿಗೆ ಏರಿಕೆ: ಅಲ್ಪಸಂಖ್ಯಾತರ ಓಲೈಕೆ ಬಜೆಟ್: ಜೋಶಿ

ಬೆಂಗಳೂರು: ರಾಜ್ಯದ ಸಾಲವನ್ನು ₹ 8 ಲಕ್ಷ ಕೋಟಿ ಸನಿಹಕ್ಕೆ ಕೊಂಡೊಯ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ಒಂದು ಅಲ್ಪಸಂಖ್ಯಾತರ ಓಲೈಕೆಯ ಬಜೆಟ್ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ಸಿಎಂ ಸಿದ್ದರಾಮಯ್ಯ ₹ 4.9 ಲಕ್ಷ ಕೋಟಿ ಬೃಹತ್ ಗಾತ್ರದ ಬಜೆಟ್ ಮಂಡಿಸಿದ್ದರೂ ಅದು ಸತ್ವಹೀನವಾಗಿದೆ. ಸರ್ವ ವರ್ಗ, ಸಮಭಾವ ಹಾಗೂ ಸರ್ವ ಪ್ರದೇಶಗಳ ಅಭಿವೃದ್ಧಿಯ ಹಿತಕಾಯಬೇಕಿತ್ತು. ಆದರೆ ಒಂದು ವರ್ಗವನ್ನು ಓಲೈಸುವಂತಿದೆ ಅಷ್ಟೇ ಎಂದು ಹೇಳಿದರು.

ಅಭಿವೃದ್ಧಿಯ ಸಮತೋಲನ ಬಜೆಟ್ ಮಂಡಿಸುವಲ್ಲಿ ಸಿಎಂ ವಿಫಲರಾಗಿದ್ದಾರೆ. ಉತ್ತಮ‌ ಆದಾಯದಲ್ಲಿದ್ದ ಕರ್ನಾಟಕವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ್ದಾರೆ. ₹ 24,974 ಕೋಟಿ ಇದ್ದ ಸಾಲವನ್ನು ₹ 26,474 ಕೋಟಿಗೆ ಹೆಚ್ಚಿಸಿದ್ದಾರೆ ಎಂದು ಆರೋಪಿಸಿದರು.

FRBM ಕಾಯ್ದೆ ಪ್ರಕಾರ ಶೇ.25ರ ಮಿತಿ ಉಲ್ಲಂಘನೆ ಸಾಧ್ಯತೆ: ರಾಜ್ಯ ಬಜೆಟ್ ₹ 19,262 ಕೋಟಿ ಆದಾಯದ ಕೊರತೆಯದ್ದಾಗಿದೆ. ₹ 7.64 ಲಕ್ಷ ಕೋಟಿ ಆರ್ಥಿಕ ಹೊರೆಯಿಂದ ಕೂಡಿದೆ. GSDP 24.91% ಆಗಿದ್ದು, FRBM ಕಾಯ್ದೆ ಪ್ರಕಾರ ಶೇ.25ರ ಮಿತಿಯನ್ನು ಶೀಘ್ರದಲ್ಲೇ ರಾಜ್ಯ ಉಲ್ಲಂಘಿಸಲಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

ಪ್ರತಿಯೊಂದಕ್ಕೂ ಕೇಂದ್ರದತ್ತ ಬೊಟ್ಟು:
2025-26ನೇ ಸಾಲಿನ ರಾಜ್ಯ ಬಜೆಟ್ ಅಲ್ಲಿ ರಾಜ್ಯವನ್ನು ಆರ್ಥಿಕ ಪ್ರಗತಿಪಥದತ್ತ ಕೊಂಡೊಯ್ಯುವ ಯಾವುದೇ ರಚನಾತ್ಮಕ ಪ್ರಸ್ತಾವನೆಗಳಿಲ್ಲ. ಸಿಎಂ ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದೆಡೆ ಬೊಟ್ಟು ಮಾಡುವುದನ್ನೇ ರೂಢಿಸಿಕೊಂಡಿದ್ದಾರೆ ಹೊರತು ರಾಜ್ಯದ ಸಮಗ್ರ ಅಭಿವೃದ್ಧಿಗೆ ಯಾವುದೇ ಆರ್ಥಿಕ ಮೂಲತತ್ವಗಳ ಸ್ಪರ್ಶ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಚಿವ ಜೋಶಿ ಆಕ್ಷೇಪಿಸಿದರು.

ರಾಜ್ಯ ಜಿಡಿಪಿಯ ಶೇ.23 ಸಾಲ:
ರಾಜ್ಯದ ಒಟ್ಟು ಸಾಲ ₹ 8 ಲಕ್ಷ ಕೋಟಿಗೆ ಸಮೀಪಿಸಿದ್ದು, ಇದು ರಾಜ್ಯ ಜಿಡಿಪಿಯ ಶೇ.23ರಷ್ಟಾಗಿರುವುದು ಕಳವಳಕಾರಿಯಾಗಿದೆ.
ರೆವೆನ್ಯು ವೆಚ್ಚ ₹ 3,11,400 ಲಕ್ಷ ಕೋಟಿ, ಬಂಡವಾಳ ವೆಚ್ಚ ₹ 76,400 ಕೋಟಿ ಇದ್ದು ವಿತ್ತೀಯ ಕೊರತೆ ನಿಗದಿಪಡಿಸುವಲ್ಲಿ ಯಾವುದೇ ತಾತ್ವಿಕ ವ್ಯವಸ್ಥೆ ಪಾಲಿಸಿಲ್ಲ ಎಂದರು.

ಮೂಲಸೌಲಭ್ಯಕ್ಕಿಲ್ಲ ಬೆಂಬಲ: ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಗಮನಾರ್ಹ ಆದ್ಯತೆ ನೀಡಿಲ್ಲ. ಇದು ರಾಜ್ಯದ ಆರ್ಥಿಕ ಪ್ರಗತಿಗೆ ಕೊಟ್ಟ ದೊಡ್ಡ ಪೆಟ್ಟಾಗಿದೆ. ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಕೇವಲ ಶೇ.14ರಷ್ಟು ಅನುದಾನ ನೀಡಲಾಗಿದೆ. ಶಿಕ್ಷಣಕ್ಕೆ ಶೇ.10, ಆರೋಗ್ಯಕ್ಕೆ ಶೇ.5ರಷ್ಟು ಅನುದಾನ ನೀಡಿದ್ದು, ಜನಸಾಮಾನ್ಯರ ತೃಪ್ತಿಕರ ಜೀವನಕ್ಕೆ ತಕ್ಕ ಬಜೆಟ್ ಇದಾಗಿಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಜರಿದರು.

ರಾಜ್ಯದಲ್ಲಿನ ಮೂಲಸೌಲಭ್ಯಗಳೇ ಹೂಡಿಕೆಗೆ ಆಕರ್ಷಣೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು 16ನೇ ಬಾರಿ ಮಂಡಿಸಿದ ಬಜೆಟ್ ಅಲ್ಲಿ ಇಂಥ ವಲಯಕ್ಕೆ ನಿರಾಶದಾಯಕವಾಗಿದೆ ಎಂದು ಜೋಶಿ ಹೇಳಿದರು.

More News

You cannot copy content of this page