ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ್ದ ಆರೋಪದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಮುಡಾದ ಮಾಜಿ ಆಯುಕ್ತ ಡಾ.ಡಿ..ಬಿ. ನಟೇಶ್‌ಗೆ ಮನೆಯ ಮೇಲಿನ ದಾಳಿ ಮತ್ತು ವಿಚಾರಣೆಗೆ ಹಾಜರಾಗಲು ಜಾರಿ ಮಾಡಿದ್ದ ಸಮನ್ಸ್ ರದ್ದುಪಡಿಸಿದ್ದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಇಡಿ ಮೇಲ್ಮನವಿ ಸಲ್ಲಿಸಿದೆ.
ಇಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ನ್ಯಾಯಪೀಠ
ಅರ್ಜಿಯ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿಚಾರಣೆಗೆ ಅಂಗೀಕರಿಸಿತು. ಅಲ್ಲದೆ ಮುಂದಿನ ವಿಚಾರಣೆಯನ್ನು ಏಪ್ರಿಲ್ ೮ಕ್ಕೆ ಮುಂದೂಡಿದೆ.
ಅಲ್ಲದೆ, ಮುಂದಿನ ವಿಚಾರಣೆಯವರೆಗೂ ವಿನಾ ಕಾರಣ ಕಿರುಕುಳ ನೀಡಲಾಗಿದೆ ಎಂದು ತಿಳಿಸಿ ಇಡಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂಬುದಾಗಿ ತಿಳಿಸಿದ್ದ ಏಕ ಸದಸ್ಯ ಪೀಠದ ಆದೇಶ ಮೇಲ್ಮನವಿಯ ವಿಚಾರಣಾ ವಿಷಯವಾಗಿದ್ದು,
ಈ ಸಂಬಂಧ ಆಕ್ಷೇಪಣೆ ಸಲ್ಲಿಸುವವರೆಗೂ ಕ್ರಮಕ್ಕೆ ಮುಂದಾಗಬಾರದು ಎಂದು ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ನಟೇಶ್ ಅವರಿಗೆ ತಿಳಿಸಿತು.
ಅಲ್ಲದೆ, ಏಕ ಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಬಹುದು ಎಂದು ಇಡಿ ಅಧಿಕಾರಿಗಳಿಗೆ ಪೀಠ ಮೌಖಿಕವಾಗಿ ತಿಳಿಸಿದೆ.
ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸೇಟರ್ ಜನರಲ್ ಎಸ್.ವಿ.ರಾಜು, ಏಕ ಸದಸ್ಯ ಪೀಠದ ಆದೇಶ ಜಾರಿ ನಿರ್ದೇಶನಾಲಯವನ್ನು ಪೂರ್ವಾಗ್ರಹ ಪೀಡಿತವಾಗಿದೆ ಎಂದು ಬಿಂಬಿಸುತ್ತದೆ,
ಅಕ್ರಮ ಹಣ ವರ್ಗಾವಣೆ ನಿಯಂತ್ರಣಾ ಕಾಯಿದೆ ಸೆಕ್ಷನ್ ೧೯ ಮತ್ತು ೧೭ಗಳ ಕುರಿತು ಏಕ ಸದಸ್ಯ ಪೀಠ ಗೊಂದಲದಿಂದ ಆದೇಶಿಸಿತ್ತು,
ಅನ್ನು ಜಾರಿ ಮಾಡುವುದಕ್ಕೆ ಸಾಧ್ಯವೇ ಇಲ್ಲದಂತಿದೆ ಎಂದು ಪೀಠಕ್ಕೆ ತಿಳಿಸಿದರು.
ಡಾ. ನಟೇಶ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ಏಕ ಸದಸ್ಯ ಪೀಠದ ಆದೇಶ ಕಾನೂನು ಬದ್ಧವಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಅಂತಿಮವಾಗಿ ಪೀಠ ವಿಚಾರಣೆಯನ್ನು ಮುಂದೂಡಿತು.
ಏಕಸದಸ್ಯ ಪೀಠದ ಆದೇಶವೇನಿತ್ತು ?
ಮುಡಾ ಹಗರಣಕ್ಕೆ ಸಂಬಂಧ ಅಕ್ರಮ ಮಾಜಿ ಆಯುಕ್ತ ಡಿ.ಬಿ.ನಟೇಶ್‌ಗೆ ಜಾರಿ ನಿರ್ದೇಶನಾಲಯ(ಇ.ಡಿ) ಜಾರಿ ಮಾಡಿದ್ದ ಸಮನ್ಸ್ ರದ್ದುಪಡಿಸಿದ್ದ ಏಕಸದಸ್ಯ ಪೀಠ, ಅಕ್ರಮ ಹಣ ವರ್ಗಾವಣೆ ತಡೆಗಟ್ಟುವುದು ಮತ್ತು ಅಕ್ರಮವಾಗಿ ಗಳಿಸಿರುವ ಆದಾಯವನ್ನು ಮುಟ್ಟುಗೋಲು ಹಾಕಿಕೊಳ್ಳುವ ಉದ್ದೇಶದಿಂದ ಜಾರಿ ನಿರ್ದೇಶನಾಲಯ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಅದು ತನ್ನ ಕರ್ತವ್ಯವನ್ನು ನ್ಯಾಯಯುತವಾಗಿ ನಿರ್ವಹಣೆ ಮಾಡಬೇಕಾಗಿದೆ ಎಂದು ತಿಳಿಸಿತ್ತು.
ಅಲ್ಲದೆ, ಸಂವಿಧಾನದ ೨೧ನೇ ವಿಧಿಯ ಅಡಿಯಲ್ಲಿ ವ್ಯಕ್ತಿಗೆ ಸ್ವಾತಂತ್ರ್ಯ ಮತ್ತು ಗೌಪ್ಯತೆಯ ಹಕ್ಕು ಲಭ್ಯವಿರಲಿದೆ. ಅಕ್ರಮವಾಗಿ ದಾಳಿ ನಡೆಸಿ ಶೋಧಕಾರ್ಯ ನಡೆಸುವುದ ವಿರುದ್ಧವಾಗಿದೆ. ಪ್ರಾರ್ಥಮಿಕವಾಗಿ ಯಾವುದೇ ಬಲವಾದ ಸಾಕ್ಷ್ಯಾಧಾರಗಳಿಲ್ಲದೆಯೂ ತನಿಖೆಯ ನೆಪದಲ್ಲಿ ಅರ್ಜಿದಾರರ ಸೇರಿದ ೧೪ ಸ್ಥಳಗಳಲ್ಲಿ ದಾಳಿ ನಡೆಸಿ ಶೋಧಕಾರ್ಯ ಮಾಡಿರುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದ್ದು, ಯಾವುದೇ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಖಾಸಗಿತನದ ಹಕ್ಕನ್ನು ತುಳಿಯಲಾಗುವುದಿಲ್ಲ. ನಾಗರಿಕ ಸ್ವಾತಂತ್ರ್ಯಗಳ ಮೊಟಕುಗೊಳಿಸುವ ಪ್ರಕ್ರಿಯೆ ಕಾನೂನಿನ ಸರಿಯಾದ ಪ್ರಕ್ರಿಯೆಗೆ ಒಳಪಟ್ಟಿರುತ್ತದೆ ಎಂದು ಸಮರ್ಥಿಸಲಾಗದು ಎಂದು ತಿಳಿಸಿತ್ತು.
ಜೊತೆಗೆ, ಅರ್ಜಿದಾರರು ಮುಡಾದಿಂದ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂಬುದಾಗಿ ಆರೋಪಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳನ್ನು ಜಾರಿ ನಿರ್ದೇಶನಾಲಯ ಹಾಜರುಪಡಿಸಿಲ್ಲ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ತಮ್ಮ ಆದಾಯವನ್ನು ಮರೆಮಾಚಿರುವುದು, ಬಳಕೆ ಮಾಡಿರುವ ಸಂಬಂಧವೂ ಆರೋಪಗಳಿಲ್ಲ. ಹೀಗಾಗಿ, ಅನುಮಾನದಿಂದ ಅರ್ಜಿದಾರರ ಮನೆಯ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಸಂಗ್ರಹಿಸಿದ್ದಲ್ಲದೇ, ಹೇಳಿಕೆ ದಾಖಲಿಸಿಕೊಂಡಿರುವುದು ಅನಗತ್ಯವಾದ ಕ್ರಮವಾಗಿದೆ.
ಅಲ್ಲದೆ, ಅರ್ಜಿದಾರ ನಟೇಶ್ ಅವರ ಮನೆಯಲ್ಲಿ ೨೦೨೪ರ ಅಕ್ಟೋಬರ್ ೨೮ ಮತ್ತು ೨೯ರಂದು ನಡೆಸಿರುವ ಶೋಧ ಕಾರ್ಯ ನಡೆಸಿರುವುದು ಮತ್ತು ಅಕ್ರಮ ಹಣವರ್ಗಾವಣೆ ಕಾಯಿದೆಯ ಸೆಕ್ಷನ್ ೧೭(೧)(ಎಫ್)ರ ಅಡಿಯಲ್ಲಿ ದಾಖಲಿಸಿಕೊಂಡಿರುವ ಹೇಳಿಕೆ ಕಾನೂನುಬಾಹಿರ ಎಂದು ಘೋಷಣೆ ಮಾಡಲಾಗುತ್ತಿದೆ. ಹಿಂಪಡೆಯಲು ಆದೇಶಿಸಲಾಗಿದೆ. ಅಲ್ಲದೆ, ಈ ಸಂಬಂಧ ಜಾರಿ ಮಾಡಿರುವ ಸಮನ್ಸ್ ಅನ್ನು ರದ್ದುಗೊಳಿಸಲಾಗುತ್ತಿದೆ.
ಜೊತೆಗೆ, ಅಕ್ರಮವಾಗಿ ಅರ್ಜಿದಾರರ ಮನೆಗೆ ದಾಳಿ ನಡೆಸಿ ಕಿರಿಕಿರಿಯುಂಟು ಮಾಡುವ ವಿಷಯವಾಗಿದೆಯೇ ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲು ಸ್ವತಂತ್ರರಾಗಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಇಡಿ ದ್ವಿಸದಸ್ಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.