ASSEMBLY SESSION: ಗ್ಯಾರಂಟಿ ಅನುಷ್ಠಾನಕ್ಕೆ ಕೈ ಕಾರ್ಯಕರ್ತರ ನೇಮಕ: ಭಿಕ್ಷೆ ಬೇಡಿ ವೇತನ ಕೊಡಿ ಎಂದ ಆರ್ ಅಶೋಕ್, ಸದನದಲ್ಲಿ ಕೋಲಾಹಲ

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆ ಮಾಡಿ, ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡಿರುವ ವಿಚಾರ ವಿಧಾನಸಭೆಯಲ್ಲಿ ಗದ್ದಲ ಕೋಲಾಹಲಕ್ಕೆ ಕಾರಣವಾಯ್ತು. ಮಂಗಳವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ತುರುವೇಕೆರೆ ಶಾಸಕ ಕೃಷ್ಣಪ್ಪ ಎಂಟಿ ಈ ಕುರಿತಾಗಿ ಪ್ರಶ್ನೆ ಕೇಳಿ, “ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್ ಕಾರ್ಯಕರ್ತರರನ್ನು ನೇಮಕ ಮಾಡಲಾಗಿದೆ. ಜನರ ತೆರಿಗೆ ಹಣದಲ್ಲಿ ವೇತನ ಕೊಡಲಾಗ್ತಿದೆ. 40,000 ವೇತನ ಕೊಡಲಾಗ್ತಿದೆ. ಇದಕ್ಕೆ ಅವಕಾಶ ಇದ್ಯಾ? ಈ ಹಿಂದಿನ ಸರ್ಕಾರಗಳು ಸಾಕಷ್ಟು ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಯಾರೂ ಪಕ್ಷದ ಕಾರ್ಯಕರ್ತರನ್ನು ನೇಮಕ ಮಾಡಿಲ್ಲ. ಇದು ಕಾನೂನು ಬಾಹಿರ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರ ವಾದಕ್ಕೆ ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು ಹಾಗೂ ಸರ್ಕಾರದ ನಡೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಕಾಂಗ್ರೆಸ್ ನವರಿಗೆ ಸಂಬಳ ಕೊಡಲು ಇದನ್ನು ರಚನೆ ಮಾಡಿದ್ದೀರಾ? ಬೇರೆ ಯಾವ ಯೋಜನೆಯ ಸಮಿತಿಯ ಸದಸ್ಯರಿಗೆ ವೇತನ ಇದ್ಯಾ? ಆಶಾ ಕಾರ್ಯಕರ್ತೆಯರಿಗೆ ವೇತನ ಇಲ್ಲ,‌ ಹೀಗಿರುವಾಗ ಇವರಿಗೆ ಏಕೆ”ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು.

ಆರ್ ಅಶೋಕ್ ಕೆಂಡಾಮಂಡಲ

ಇನ್ನು ಇದೇ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, “ಡಿಕೆ ಶಿವಕುಮಾರ್ ಡಿಸಿಎಂ ಆದ ಬಳಿಕ ಸರ್ಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ವ್ಯತ್ಯಾಸ ಇಲ್ಲ. ಇಲ್ಲಿನ ಹಣ ಅಲ್ಲಿಗೆ ಹಂಚಿಕೆ ಮಾಡಲಾಗ್ತಿದೆ. ಅಂಗನವಾಡಿಗೆ ವೇತನ ಕೊಡಲು ಹಣ ಇಲ್ಲ. ರಾಜ್ಯದ ಜನರ ತೆರಿಗೆ ಹಣವನ್ನು ಹೇಗೆ ಗ್ಯಾರಂಟಿ ಸಮಿತಿ ಸದಸ್ಯರಿಗೆ ಕೊಡುತ್ತಾರೆ? ರಸ್ತೆಯಲ್ಲಿ ಭಿಕ್ಷೆ ಬೇಡಿ ಕೊಡಲಿ. ನಮ್ಮ ಹಣ ಹೇಗೆ ಕೊಡಲಾಗ್ತಿದೆ? ಯಾವ ಆಧಾರದಲ್ಲಿ ಕಾಂಗ್ರೆಸ್ ಸದಸ್ಯರನ್ನು ನೇಮಕ ಮಾಡಲಾಗ್ತಿದೆ? ಯಾರ ಹಣ? ಲೂಟಿ ಮಾಡಲಾಗ್ತಿದೆ. ಸರ್ಕಾರದ ಬದಲಾಗಿ ಕಾಂಗ್ರೆಸ್ ಪಕ್ಷದ ಹಣ ಕೊಡಲಿ” ಎಂದು ತೀಕ್ಷ್ಣವಾಗಿ ಕಿಡಿಕಾರಿದರು .

ರಾಜ್ಯದಲ್ಲಿ ಅಧಿಕಾರಿಗಳು ಸೋಮಾರಿಗಳಾ? ಅವರು ಬದುಕಿರುವಾಗ ಗ್ಯಾರಂಟಿ ಅನುಷ್ಠಾನಕ್ಕೆ ಕಾಂಗ್ರೆಸ್ ಸದಸ್ಯರ ನೇಮಕ ಏಕೆ? ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು.

ಡಿಕೆಶಿ ಸಮರ್ಥನೆ

ವಿರೋಧ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್, “ನಮ್ಮ ಕಾರ್ಯಕರ್ತರಿಗೆ ಸರ್ಕಾರದ ಕಾರ್ಯಕ್ರಮಗಳನ್ನು ಜಾರಿಗೆ ತರುವ ಹಕ್ಕಿದೆ. ನಾವು ಉತ್ತರ ಕೊಡಲು ಸಿದ್ಧರಿದ್ದೇವೆ. ಚರ್ಚೆಗೆ ಬನ್ನಿ” ಎಂದು ಸವಾಲು ಹಾಕಿದರು.

ಸದನ ಮುಂದೂಡಿಕೆ

ಈ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ ಖಾದರ್ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.

More News

You cannot copy content of this page