ಮಹಿಳೆಯರ ರಕ್ಷಣೆಗೆ ಹೆಚ್ಚು ಒತ್ತು: ಗೃಹ ಸಚಿವ ಪರಮೇಶ್ವರ

ಬೆಂಗಳೂರು:- ಸುದ್ದಗುಂಟೆಪಾಳ್ಯ‌ ಘಟನೆಗೆ ಸಂಬಂಧಿಸಿದಂತೆ ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಎಂದಿಗೂ ಮಹಿಳೆಯರ ರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದೇನೆ ಎಂದು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸ್ಪಷ್ಟನೆ ನೀಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿರ್ಭಯಾ ಯೋಜನೆ ಸೇರಿದಂತೆ ಮಹಿಳಾ ಸುರಕ್ಷತೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದೇನೆ. ದೇಶದಲ್ಲಿ ಬೇರೆ ರಾಜ್ಯಗಳಿಗಿಂತ ನಿರ್ಭಯಾ ಯೋಜನೆಯ ಅನುದಾನವನ್ನು ಹೆಚ್ಚು ಬಳಸಿಕೊಂಡು, ಅನುಷ್ಟಾನ ಮಾಡಿದ್ದೇವೆ. ನಾನು ಪ್ರತಿ ಬಾರಿ ಗೃಹ ಸಚಿವನಾದಾಗ ಬೆಂಗಳೂರು ನಗರ ಸೇರಿದಂತೆ ರಾಜ್ಯದಾದ್ಯಂತ ಮಹಿಳಾ ಸುರಕ್ಷತೆಗೆ ಏನೆಲ್ಲ ಕ್ರಮ ಕೈಗೊಂಡಿದ್ದೇನೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಅವರು ಹೇಳಿದರು

ಒಂದು ಹೇಳಿಕೆಯನ್ನು ತಿರುಚಿ, ನನ್ನ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ನಾನು ಮಹಿಳೆಯರ ರಕ್ಷಣೆಗೆ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇನೆ. ಮಹಿಳೆಯರ ರಕ್ಷಣೆ ಆಗಬೇಕು ಎನ್ನುವ ನಂಬಿಕೆಯಲ್ಲಿದ್ದೇನೆ. ಯಾರಿಗೆ ತೊಂದರೆ ಆದರೂ ಸಹ ನಮ್ಮ ಇಲಾಖೆಯಲ್ಲಿ ನೇರವಾಗಿ ಅನೇಕರನ್ನು ಹೊಣೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರ ರಾಜಕೀಯ ಹೊರತುಪಡಿಸಿ, ಒಂದು ವೇಳೆ ನಾಡಿನ ತಾಯಂದಿರ ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನನ್ನ ಹೇಳಿಕೆಯನ್ನು ಬೇರೆಬೇರೆ ರೂಪಕ್ಕೆ ತೆಗೆದುಕೊಂಡು ಹೋಗಬೇಕಿಲ್ಲ‌ ಎಂದು ಹೇಳಿದರು.

ಪ್ರತಿನಿತ್ಯ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಕಾನೂನು ಸುವ್ಯವಸ್ಥೆ ಎಡಿಜಿಪಿಯವರು ಇಲಾಖೆಯ ದೈನಂದಿನ ಮಾಹಿತಿಯನ್ನು ನೀಡಲು ಬಂದಾಗ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಸೂಚಿಸುತ್ತೇನೆ. ಜಿಲ್ಲಾ‌ ಪೊಲೀಸ್ ಪ್ರಗತಿ ಪರಿಶೀಲನೆ ಕೈಗೊಂಡಾಗಲೂ ಇದೇ ವಿಚಾರವನ್ನು ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದರು.

ಬಿಜೆಪಿಯವರ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಏನೆಲ್ಲ ಆಗಿತ್ತು ಎಂಬುದನ್ನು ಅಂಕಿ ಅಂಶ ಸಮೇತ ಸದನದಲ್ಲಿ ಉತ್ತರಿಸಿದ್ದೇನೆ. ಬಿಜೆಪಿಯವರು ತಮ್ಮ ಅಧಿಕಾರಾವಧಿಯಲ್ಲಿ ಏನೂ ಆಗಿರಲಿಲ್ಲ. ಎಲ್ಲವೂ ಚೆನ್ನಾಗಿತ್ತು ಅಂತ ಹೇಳುವುದಕ್ಕೆ ಜನ ನಗಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು.

ಬೆಲೆ ಏರಿಕೆ ಮಾಡಿದ್ದಾರೆ ಎಂದು ಬಿಜೆಪಿಯವರು ನಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವು ಬೆಲೆ ಜಾಸ್ತಿ ಮಾಡುತ್ತದೆ ಎಂಬುದು ಬಿಜೆಪಿಯವರಿಗೆ ಅರಿವಿಲ್ಲ. ಕೇಂದ್ರ ಸರ್ಕಾರದ ನೀತಿಗಳು ಹೇಗಿವೆ ಎಂಬುದು ಜನ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದರು.

ಕೇಂದ್ರ ಸರ್ಕಾರ ಅಡುಗೆ ಸಿಲಿಂಡರ್ ಬೆಲೆ 50 ರೂ. ಪೆಟ್ರೋಲ್, ಡೀಸೆಲ್ ಬೆಲೆ 2 ರೂ. ಹೆಚ್ಚಳ ಮಾಡಿದೆ. ಇದಕ್ಕೆ ಮೊದಲು ಬಿಜೆಪಿಯವರು ಉತ್ತರಿಸಬೇಕು. ನಂತರ ಪ್ರತಿಕ್ರಿಯಿಸೋಣ. ರಾಜ್ಯದಲ್ಲಿ ಜನತೆ ಗಮನಿಸುತ್ತಾರೆ ಎಂದು ನಿನ್ನೆಯೇ ಹೇಳಿದ್ದೆ. ಬಿಜೆಪಿಯವರು ಜನಾಕ್ರೋಶ ಅಂತ ಹೇಳಿದ್ದರು. ಬಿಜೆಪಿ ಆಕ್ರೋಶ ಎಂದು ನಾನು ಹೇಳಿದ್ದೆ. ಆಕ್ರೋಶ ಮಾಡಲು ಹೊರಟಿರುವ ಬಿಜೆಪಿಯವರು ಈಗ ಉತ್ತರ ಕೊಡಬೇಕು ಎಂದರು.

ಎಐಸಿಸಿ ಸಭೆಗೆ ನಾನು ಹೋಗಿಲ್ಲ. ಬೇರೆಬೇರೆ ಕೆಲಸಗಳಿರುವುದರಿಂದ ಹೋಗು ಸಾಧ್ಯವಾಗಿಲ್ಲ. ಸಭೆಯಲ್ಲಿ ಏನೆಲ್ಲ ರೆಸ್ಯೂಲೂಷನ್ ಮಾಡುತ್ತಾರೆ ಎಂಬುದನ್ನು ನೋಡಬೇಕು‌. ಎಐಸಿಸಿ ಸಭೆಗಳಾದಾಗ ಸಂಘಟನೆ ಮತ್ತು ಬಲವರ್ಧನೆ ಕುರಿತಂತೆ ಅನೇಕ ಚರ್ಚೆ ಮತ್ತು ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಪಕ್ಷದ ಮುಂದಿನ ದೃಷ್ಟಿಕೋನದ ಬಗ್ಗೆ ಪ್ರಮುಖವಾದ ರೆಸ್ಯೂಲೂಷನ್‌ಗಳನ್ನು ಮಾಡುತ್ತಾರೆ. ಪಕ್ಷ ಸಂಘಟನೆ ಕುರಿತಂತೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ವರ್ಕಿಂಗ್ ಕಮಿಟಿ ಏನು ತೀರ್ಮಾನ ಕೈಗೊಳ್ಳುತ್ತಾರೆ, ಅದೆಲ್ಲವನ್ನು ನಾವು ಅನುಷ್ಟಾನಗೊಳಿಸಲು ಸಿದ್ಧರಿರುತ್ತೇವೆ ಎಂದು ಹೇಳಿದರು.

More News

You cannot copy content of this page