ಫೆಬ್ರವರಿ ೨೦ರಂದು ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಕ್ಷಣಕ್ಷಣಕ್ಕೂ ರಂಗೇರುತ್ತಿದೆ. ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈ ನಾಯಕರಾದ ಗುಲಾಂ ನಬಿ ಆಜಾದ್ ಮತ್ತು ಲೋಕಸಭಾ ಸಂಸದ ಮನೀಶ್ ತಿವಾರಿ ಅವರನ್ನು ಕೈ ಬಿಡಲಾಗಿದೆ. ಕೇಂದ್ರ ಸರ್ಕಾರದ ಪದ್ಮಭೂಷಣ ಪ್ರಶಸ್ತಿಗೆ ಭಾಜನವಾಗುವ ಮೊದಲು ಉತ್ತರ ಪ್ರದೇಶ ಮೊದಲ ಹಂತದ ಸ್ಟಾರ್ ಪ್ರಚಾರಕರ ಲಿಸ್ಟ್ ನಲ್ಲಿ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹೆಸರಿತ್ತು. ಆದ್ರೆ, ಇದೀಗ ಸ್ಟಾರ್ ಕ್ಯಾಂಪೇನರ್ ಲಿಸ್ಟ್ ನಿಂದ ಕಾಂಗ್ರೆಸ್ ಪಕ್ಷದ ವರಿಷ್ಠರು ಗುಲಾಂ ನಬಿ ಆಜಾದ್ ಅವರನ್ನ ಹೊರಗಿಟ್ಟಿದ್ದಾರೆ.. ಇನ್ನು, ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನ ಸಂಸದ ಮನೀಶ್ ತಿವಾರಿ ಟೀಕಿಸಿದ್ದರು.
ಗುಲಾಂ ನಬಿ ಆಜಾದ್ ಮತ್ತು ಮನೀಶ್ ತಿವಾರಿ ಜಿ-೨೩ರ ಪ್ರಮುಖ ಸದಸ್ಯರಾಗಿದ್ದು, ಈ ಹಿಂದೆ ಪಕ್ಷದ ನಾಯಕತ್ವದ ವಿಚಾರದಲ್ಲಿ ಈ ಇಬ್ಬರು ನಾಯಕರು ಪತ್ರ ಬರೆದು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಮಧ್ಯೆ, ಜಿ-೨೩ರ ಇತರೆ ಕೆಲ ಸದಸ್ಯರಾದ ಆನಂದ್ ಶರ್ಮಾ ಮತ್ತು ಭೂಪಿಂದರ್ ಸಿಂಗ್ ಹೂಡಾ ಇಬ್ಬರನ್ನು ಪಂಜಾಬ್‌ನ ಸ್ಟಾರ್ ಪ್ರಚಾರಕರ ಭಾಗವಾಗಿದ್ದಾರೆ.

ಪಂಜಾಬ್ ಸ್ಟಾರ್ ಪ್ರಚಾರಕರ ಪಟ್ಟಿಯನ್ನ ಈಗಾಗಲೇ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಒಟ್ಟು ೩೦ ಸ್ಟಾರ್ ಪ್ರಚಾರಕರನ್ನು ಗುರುತಿಸಲಾಗಿದೆ. ಅಚ್ಚರಿ ಅಂದ್ರೆ ಈ ಹಿಂದೆ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿದ್ದ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನೂ ಪಕ್ಷ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಿಕೊಂಡಿದೆ.

ಈ ಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, ಹರೀಶ್ ಚೌಧರಿ, ಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಅಂಬಿಕಾ ಸೋನಿ ಮತ್ತು ಮಾಜಿ ಸ್ಪೀಕರ್ ಮೀರಾ ಕುಮಾರ್ ಕೂಡ ಇದ್ದಾರೆ.
ಅಲ್ಲದೆ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್ ಮತ್ತು ಭೂಪೇಶ್ ಬಾಘೇಲ್, ಮಾಜಿ ಪಿಸಿಸಿ ಮುಖ್ಯಸ್ಥರಾದ ಸುನಿಲ್ ಜಾಖರ್, ಪರತಾಪ್ ಸಿಂಗ್ ಬಾಜ್ವಾ, ಅಜಯ್ ಮಾಕನ್ ಮತ್ತು ರಣದೀಪ್ ಸುರ್ಜೆವಾಲಾ ಅವರು ಸ್ಟಾರ್ ಪ್ರಚಾರಕರಲ್ಲಿ ಸೇರಿದ್ದಾರೆ.




