ಬೆಂಗಳೂರು :ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿA ಕಾಂಗ್ರೆಸ್ ತೊರೆಯಲು ಸಜ್ಜಾಗಿದ್ದಾರೆ ಎನ್ನುವ ಗುಸುಗುಸು ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಕಳೆದ ಕೆಲ ದಿನಗಳಿಂದ ಜೋರಾಗೇ ಕೇಳಿಸುತ್ತಿತ್ತು.. ಇದೀಗ ಈ ಎಲ್ಲಾ ಊಹಾಪೋಹಾಗಳಿಗೂ ಸ್ವತಃ ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಅವರೇ ತೆರೆ ಎಳೆದಿದ್ದು, ಶೀಘ್ರದಲ್ಲೇ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಇಬ್ರಾಹಿಂ, ದಾವಣಗೆರೆಯಲ್ಲಿ ನಾನು ಜೆಡಿಎಸ್ ಪಕ್ಷವನ್ನ ಸೇರುತ್ತೇನೆ. ಶೀಘ್ರದಲ್ಲಿಯೇ ದಿನಾಂಕವನ್ನು ತಿಳಿಸುತ್ತೇನೆ ಎಂದು ತಿಳಿಸಿದರು.
ಧರ್ಮ ಪರಿವರ್ತನೆಯ ಬಿಲ್ ವಿಧಾನ ಪರಿಷತ್‌ನಲ್ಲಿ ಬರಲಿದೆ. ಅಲ್ಲಿ ಬಿಜೆಪಿಗೆ ಬಹುಮತವಿಲ್ಲ, ಒಂದು ಮತದ ಕೊರತೆಯಿದೆ. ಒಂದು ವೇಳೆ ಈಗೇನಾದ್ರೂ ನಾನು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರೆ ಧರ್ಮ ಪರಿವರ್ತನೆಯ ಬಿಲ್ ಪಾಸಾಗಿ ಬಿಡುತ್ತದೆ. ಆ ಆರೋಪ ನನ್ನ ಮೇಲೆ ಬರಬಾರದು. ಹೀಗಾಗಿ ವಿಧೇಯಕವನ್ನ ತರುವುದಿಲ್ಲ ಎಂಬುದು ಖಚಿತವಾದ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.
ಸಿದ್ದರಾಮಯ್ಯ ಅಹಿಂದ’ ವಿರುದ್ಧ ಇಬ್ರಾಹಿಂ `ಆಲಿಂಗಾ’ ಅಸ್ತ್ರ!
ಇನ್ನು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧವೂ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ಜೆಡಿಎಸ್ ಪಕ್ಷ ಸೇರುವುದಾಗಿ ತಿಳಿಸಿದ ಇಬ್ರಾಹಿಂ ಬೆಳಗಾವಿ ಅಥವಾ ವಿಜಯಪುರದಲ್ಲಿ ಅಲಿಂಗಾ ಸೇರುತ್ತೇನೆ. ಇದಕ್ಕೂ ಅಹಿಂದಕ್ಕೂ ಸಂಬಂಧವಿಲ್ಲ. ಸಿದ್ದರಾಮಯ್ಯ ಅಹಿಂದವನ್ನು ಅಲ್ಲಿಯೇ ಬಿಟ್ಟಿದ್ದಾರೆ ಎಂದು ಕಿಡಿಕಾರಿದರು.
ಅಲಿಂಗಾಕ್ಕೆ ಯಾರು ಅಧ್ಯಕ್ಷರು ಎನ್ನುವುದನ್ನು ಶೀಘ್ರ ನಿರ್ಧರಿಸಲಾಗುವುದು. ಇದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ, ಇದು ಸಾಮಾಜಿಕ ಚಳುವಳಿ. ಅಲಿಂಗಾ ಚಳುವಳಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಲಿಂಗಾಯತರು ಹಾಗೂ ಮಠಾಧೀಶರದಿಂದಲೂ ಬೆಂಬಲ ವ್ಯಕ್ತವಾಗಿದೆ.

ಇನ್ನು, ಅಲಿಂಗಾ ಚಳುವಳಿ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆಯೂ ಮಾತನಾಡಿದ್ದೇವೆ. ಅಲಿಂಗಾವನ್ನು ಯಾರು ಮುನ್ನಡೆಸಬೇಕು ಎಂಬುದರ ಚರ್ಚೆ ನಡೆಯುತ್ತದೆ. ನಾನು ಅಲಿಂಗಾದಲ್ಲಿ ಸಾಮಾನ್ಯನಾಗಿರುತ್ತೇನೆ. ಅಲಿಂಗಾ ಬಗ್ಗೆ ಶ್ರೀನಿವಾಸ ಪ್ರಸಾದ್, ಎಚ್.ವಿಶ್ವನಾಥ್ ಅವರೊಂದಿಗೆ ಚರ್ಚೆ ನಡೆಸಲು ನಾನು ಮೈಸೂರಿಗೆ ಹೋಗುತ್ತೇನೆ.

ಅಲಿಂಗಾ ರಾಜಕೀಯೇತರ ಚಳುವಳಿಯಷ್ಟೇ. ನಾವು ಈಗಾಗಲೇ ಬೆಳೆದಿದ್ದೇವೆ. ಈಗ ಅಲಿಂಗಾ ಮೂಲಕ ನಾವು ಬೆಳೆಯುವುದು ಬೇಡ. ನಾವೀಗ ಹೋಗುವ ಹಂತದಲ್ಲಿದ್ದೇವೆ. ಈ ಹಂತದಲ್ಲಿ ನಾವು ದುರುಪಯೋಗ ಪಡೆಯುವುದಿಲ್ಲ ಎಂದು ಸಿ.ಎಂ.ಇಬ್ರಾಹಿಂ ತಿಳಿಸಿದರು.




