ಪಂಚಮಸಾಲಿ ಜನಾಂಗದ ಮೂರನೇ ಪೀಠ ಸ್ಥಾಪನೆಗೆ ನಾನು ಅತಿಥಿ: ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು : ಪಂಚಮಸಾಲಿ ಜನಾಂಗದ ಮೂರನೇ ಪೀಠ ಸ್ಥಾಪನೆಗೆ ನಾನು ಅತಿಥಿಯಾಗಿ ಹೋಗುತ್ತೇನೆ. ವಚನಾನಂದ ಸ್ವಾಮೀಜಿ ಮುಂದೆ ನಿಂತು ಪೀಠ ಮಾಡುತ್ತಿದ್ದಾರೆ ಎಂದು ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಹರಿಹರ ಪೀಠ ಇದ್ದರೂ ಕೂಡಲ ಸಂಗಮ ಪೀಠ ನಾವೇ ಸ್ಥಾಪನೆ ಮಾಡಿದ್ದೇವೆ, ಅದರಂತೆ ಇದು ಕೂಡ ಒಂದು ಎಂದು ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ನಮ್ಮ ಹಿಂದು ಧರ್ಮದಲ್ಲಿ ಸ್ವಾಮೀಜಿಗಳಿಗೆ ಉನ್ನತ ಸ್ಥಾನವಿದೆ. ನಾವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಸ್ವಾಮೀಜಿಗಳಿಗೆ ಗೌರವಿಸುತ್ತೇವೆ. ಯಾವುದೇ ಪೀಠ ರಾಜಕಾರಣಿಗಳ ಲಾಭಕ್ಕೆ ಹುಟ್ಟಿಕೊಂಡಿದೆ ಅನ್ನುವುದನ್ನು ನಾನು ಒಪ್ಪುವುದಿಲ್ಲ ಎಂದರು.
ಇನ್ನಷ್ಟು ಪೀಠಗಳು ಹುಟ್ಡಿಕೊಂಡರೂ ಯಾವುದೇ ಸಮಸ್ಯೆ ಇಲ್ಲ. ನಾನು ತನು ಮನ ಧನದಿಂದ ಸಹಾಯ ಮಾಡುತ್ತೇನೆ ಎಂದು ತಿಳಿಸಿದ ಅವರು, ಮೂರನೇ ಪೀಠ ಸ್ಥಾಪನೆಗೆ ಸಮುದಾಯದ ವಿರೋಧ ಹಿನ್ನಲೆಯಲ್ಲಿ ಇದನ್ನು ನಾನು ಸ್ಥಾಪನೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಆ ಕಾರ್ಯಕ್ರಮಕ್ಕೆ ಜಯಮೃತ್ಯುಂಜಯ ಸ್ವಾಮೀಜಿಯವರನ್ನು ಕರೆಯೋದು ಬಿಡೋದು ಸಂಘಟಕರಿಗೆ ಬಿಟ್ಟದ್ದು, ನಾನು ಕೇವಲ ಅಲ್ಲಿ ಅತಿಥಿಯಾಗಿ ಹೋಗ್ತಿದ್ದೇನೆ, ಹಾಗೆ ನೋಡಿದ್ರೆ ಮೊದಲ ಪೀಠ ವಚನಾನಂದ ಶ್ರೀಗಳ ಹರಿಹರ ಪೀಠ, ಎರಡನೇ ಪೀಠ ಕೂಡಲ ಸಂಗಮ, ಈಗ ಮೂರನೇ ಪೀಠ ಮಾಡಿದರೆ ತಪ್ಪೇನು? ಎಂದು ಮರು ಪ್ರಶ್ನಿಸಿದ್ದಾರೆ.
ಹಿಂದೂ ಯುವಕರಿಗೆ ಕೇಸರಿ ಶಾಲು ಖರೀದಿಸುವ ಶಕ್ತಿ ಇದೆ
ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಕೇಸರಿ ಸಂಘರ್ಷ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಿಂದೂ ಯುವಕರಿಗೆ ಕೇಸರಿ ಶಾಲು ಖರೀದಿಸುವ ಶಕ್ತಿ ಇದೆ, ಬೇರೆಯವರಿಂದ ಶಾಲೂ ತೆಗೆದುಕೊಳ್ಳುವುದಿಲ್ಲ, ಈ ಸಂಘರ್ಷ ಬಿಜೆಪಿಯಿಂದ ಆರಂಭವಾಗಿಲ್ಲ, ಬೆಂಕಿ ಹಚ್ಚುವ ಕೆಲಸ ನಾವು ಮಾಡಿಲ್ಲ, ಬೆಂಕಿ ಆರಿಸುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ
ನವೆಂಬರ್ 2,3,4 ರಂದು ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲು ಈಗಾಗಲೇ ತೀರ್ಮಾನ ಮಾಡಲಾಗಿದೆ. 2010 ರಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದಾಗ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಲಾಗಿತ್ತು ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಈ ಬಾರಿ ಹೂಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಲಾಗುತ್ತಿದೆ. ಉದ್ಯೋಗ ನೀಡು ಉದ್ಯಮಿಯಾಗು ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಈ ತಿಂಗಳ 27 ರಂದು ಮಾಡಲಾಗುವುದು. ಅದರಲ್ಲಿ 5000 ಪದವೀಧರರು ಪಾಲ್ಗೊಳ್ಳಲಿದ್ದಾರೆ ಎಂದರು.
ನಾನು ಕೈಗಾರಿಕೆ ಇಲಾಖೆ ತೆಗೆದುಕೊಂಡ ನಂತರ ರಾಜ್ಯಕ್ಕೆ ಅತಿ ಹೆಚ್ಚು ಬಂಡವಾಳ ಹರಿದು ಬಂದು ನಂಬರ್ ಒನ್ ರಾಜ್ಯವಾಗಿದೆ. ನವೆಂಬರ್ ಒಳಗಾಗಿ 50 ಸಾವಿರ ಎಕರೆ ಭೂಮಿ ವಶಪಡಿಸಲಾಗುತ್ತಿದೆ. ಜಮೀನು ಪಡೆದವರು ಉದ್ಯಮ ಸ್ಥಾಪನೆ ಮಾಡದೇ ಇರುವವರ ಜಮೀನು ವಾಪಸ್ ಪಡೆಯಲಾಗುತ್ತಿದೆ. ಸುಮಾರು 1000 ಎಕರೆ ವಾಪಸ್ ಪಡೆಯಲಾಗುತ್ತಿದೆ ಎಂದರು.
ಎಸ್ಟಿ ಎಸ್ಟಿಯವರಿಗೆ ಶೇ 75% ಸಬ್ಸಿಡಿ ಕೊಡಲಾಗುತ್ತಿದೆ. ಆರ್ಥಿಕ ದುರ್ಬಲವಾಗಿರುವವರಿಗೆ 2 ಎಕರೆ ಜಮೀನು ಶೇ 75% ರಿಯಾಯ್ತಿ ದರದಲ್ಲಿ ಜಮೀನು ನೀಡಲು ತೀರ್ಮಾನ ಮಾಡಲಾಗಿದೆ ಎಂದು ವಿವರಿಸಿದರು.

More News