ಚೆನ್ನೈನಲ್ಲಿನ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆತ: ಓರ್ವ ವ್ಯಕ್ತಿ ವಶಕ್ಕೆ

ಚೆನ್ನೈ: ತಮಿಳುನಾಡಿನ ಟಿ.ನಗರದ ವೈದ್ಯರಾಮನ್ ರಸ್ತೆಯಲ್ಲಿ ಬಿಜೆಪಿ ಕಚೇರಿ ಮೇಲೆ ವ್ಯಕ್ತಿಯೊಬ್ಬ ಮಧ್ಯರಾತ್ರಿ ೧.೩೦ರ ಸುಮಾರಿಗೆ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ನಡೆದಿದೆ. ಬುಧವಾರ ಮಧ್ಯರಾತ್ರಿ ೧.೩೦ರ ಸುಮಾರಿನಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರು ಗಾಯಗೊಂಡಿಲ್ಲ.
ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದ ಚೆನ್ನೈ ಪೊಲೀಸರು ಚೆನ್ನೈನ ನಂದನಂ ಎಂಬ ಪ್ರದೇಶದಲ್ಲಿ ವಿನೋದ್ ಎಂಬ ಓರ್ವ ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಎನ್‌ಐಎ ತನಿಖೆಗೆ ಒಪ್ಪಿಸಲು ಅಣ್ಣಾಮಲೈ ಆಗ್ರಹ
ಪೆಟ್ರೋಲ್ ಬಾಂಬ್ ದಾಳಿ ಸಂಬಂಧ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಈ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆಯ ಹಿಂದೆ ದೊಡ್ಡ ಪಿತೂರಿ ಇದೆ. ಹೀಗಾಗಿ ಈ ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಒಪ್ಪಿಸುತ್ತೇವೆ ಎಂದು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ…

ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳುತ್ತೇವೆ. ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಡುತ್ತಿದೆ.

ಹಾಗಾಗಿ ಈ ಘಟನೆಗೆ ಎನ್‌ಐಎ ತನಿಖೆಯೊಂದೇ ಪರಿಹಾರ. ಇದರಿಂದ ಸತ್ಯ ಮತ್ತು ಇದು ಯಾರ ಪಿತೂರಿ ಎಂಬುದು ಹೊರ ಬರುತ್ತದೆ ಎಂದು ಹೇಳಿದರು.

More News