ಲಖೀಂಪುರ ಖೇರಿ ಹಿಂಸಾಚಾರ: ಪ್ರಮುಖ ಆರೋಪಿಗೆ ಜಾಮೀನು: ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಬಿಡುಗಡೆ

ಅಲಹಾಬಾದ್: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಹಾಗೂ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ರೈತ ಸಮುದಾಯದ ಪ್ರಾಬಲ್ಯವಿರುವ ಪಶ್ಚಿಮ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಮತದಾನದ ದಿನವೇ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು ದೊರೆತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಳೆದ ವರ್ಷ ಅಕ್ಟೋಬರ್ ೩ರಂದು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಆಶಿಶ್ ಮಿಶ್ರಾ ಹಾಗೂ ಅವರ ಬೆಂಗಾವಲು ಪಡೆಯ ವಾಹನಗಳು ಹರಿದಿದ್ದವು. ಬಳಿಕ ಲಖೀಂಪುರ ಖೇರಿಯಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಈ ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ೮ ಮಂದಿ ಮೃತ ಪಟ್ಟಿದ್ದರು.

ಲಖಿಂಪುರ ಖೇರಿ ಹಿಂಸಾಚಾರ ಪೂರ್ವಯೋಜಿತ ಎಂದು ವಿಶೇಷ ತನಿಖಾ ತಂಡ ಹೇಳಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೨೭೯ (ಅಜಾಗರೂಕತೆಯಿಂದ ವಾಹನ ಚಾಲನೆ),

೩೩೮ (ನಿರ್ಲಕ್ಷ್ಯದಿಂದ ಗಂಭೀರ ಗಾಯಗೊಳ್ಳಲು ಕಾರಣವಾಗುವುದು) ಹಾಗೂ ೩೪೦ ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾಗುವುದು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಇದರ ಬದಲಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೦೭ರ (ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಬೇಕು ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.

More News