International terrorists: ಅಂತರಾಷ್ಟ್ರೀಯ ಭಯೋತ್ಪಾದಕರು ಹಿಜಾಬ್ ವಿವಾದವನ್ನ ಸೃಷ್ಟಿಸುತ್ತಿದ್ದಾರೆ: ರೇಣುಕಾಚಾರ್ಯ ಆರೋಪ

ದಾವಣಗೆರೆ: ಶಾಲಾ, ಕಾಲೇಜಿಗೆ ವಿದ್ಯಾರ್ಥಿಗಳು ಬರುವ ಮುನ್ನ ಹಿಜಾಬ್ ಅನ್ನು ಹೊರಗಿಟ್ಟು ಸರಸ್ವತಿಗೆ ಕೈ ಮುಗಿದು ಸಮವಸ್ತ್ರ ಧರಿಸಿ ಶಾಲೆಗಳಿಗೆ ಬನ್ನಿ ಎಂದು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಸಂಘರ್ಷ ನಡೆದರೆ ಸಾಮರಸ್ಯವಿರಲ್ಲ. ಕಳೆದ 10-15 ದಿನಗಳ ಹಿಂದೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ನೇಹಿತರಂತಿದ್ದರು, ಹಿಜಾಬ್-ಕೇಸರಿ ವಿವಾದವಾದ ಬಳಿಕ ಸಂಘರ್ಷ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಳೆಯಿಂದ ಶಾಲೆಗಳು ತೆರೆಯುತ್ತಿವೆ, ಧೈರ್ಯವಾಗಿ ನಿಮ್ಮ ಮಕ್ಕಳನ್ನ ಶಾಲೆಗಳಿಗೆ ಕಳುಹಿಸಿ ಎಂದು ವಿದ್ಯಾರ್ಥಿಗಳ ಪಾಲಕರಲ್ಲಿ ಮನವಿ ಮಾಡಿದ ರೇಣುಕಾಚಾರ್ಯ, ಅಂತರಾಷ್ಟ್ರೀಯ ಭಯೋತ್ಪಾದಕರು ಹಿಜಾಬ್ ವಿವಾದವನ್ನ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನವರು ಈ ವಿವಾದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ನವರು ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದಾರೆ, ಹಿಂದೆ ಕಾಂಗ್ರೆಸ್ ನವರು ಧರ್ಮ ಒಡೆಯುವ ಪ್ರಯತ್ನ ಮಾಡಿದರು, ಹೀಗಾಗಿಯೇ ಹಿಂದೆ ನಾಡಿನ ಜನ ಕಾಂಗ್ರೆಸ್ ನವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ದೂರಿದರು.

ಶಿಕ್ಷಣದಲ್ಲಿ ಯಾರು ಧರ್ಮ ಹಾಗೂ ರಾಜಕಾರಣವನ್ನ ಬೆರೆಸಬಾರದು, ಬೇಕಾದರೆ ಶಿಕ್ಷಣ ಸಂಸ್ಥೆಯಿಂದ ಹೊರಗೆ ಬೇಕಾದರೆ ರಾಜಕಾರಣ ಮಾಡಲಿ ಎಂದು ರೇಣುಕಾಚಾರ್ಯ ಹೇಳಿದರು.

More News