Congress high command: ಕಾಂಗ್ರೆಸ್ ಹೈಕಮಾಂಡ್ ಭೇಟಿ ನಂತರ ಮುಂದಿನ ನಿರ್ಧಾರ ಪ್ರಕಟ : ಸಿ ಎಂ ಇಬ್ರಾಹಿಂ

ದಾವಣಗೆರೆ: ದೆಹಲಿಗೆ ಹೋಗಿ ಬಂದ ಮೇಲೆ ಕಾಂಗ್ರೆಸ್ ಪಕ್ಷದಲ್ಲಿ ಇರಬೇಕೋ ಬೇಡವೇ ಎಂಬುದರ ಬಗ್ಗೆ ಸೂಕ್ತ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಸಿ ಎಂ ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಬರಲು ಸೂಚನೆ ನೀಡಿದೆ. ಈ ಸಂಬಂಧ ಇನ್ನೂ ದಿನಾಂಕ ನಿಗಧಿಯಾಗಿಲ್ಲ, ಹೈಕಮಾಂಡ್ ಭೇಟಿ ಬಳಿಕ ಕಾಂಗ್ರೆಸ್ ಪಕ್ಷ ತೊರೆಯಬೇಕೋ ಬೇಡವೇ ಎನ್ನುವುದರ ಕುರಿತು ನಿರ್ಧಾರಿಸುವುದಾಗಿ ತಿಳಿಸಿದ್ದಾರೆ.
ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ, ಅಖಿಲೇಶ್ ಯಾದವ್ ಹಾಗೂ ಮಮತಾ ಬ್ಯಾನರ್ಜಿ ಕೂಡ ಸಂಪರ್ಕ ಮಾಡಿದ್ದರು ಎಂದು ತಿಳಿಸಿದರು.
40 ಕೋಟಿ ಸಾಲ ಇದೆ ಆ ಕಾರಣಕ್ಕಾಗಿ ಪರಿಷತ್ ವಿರೋಧ ಪಕ್ಷ ಸ್ಥಾನ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ವಿರೋಧ ಪಕ್ಷದ ಸ್ಥಾನದಲ್ಲಿ ಅಷ್ಟು ದುಡ್ಡು ಸಿಗುತ್ತದಾ ಎಂದು ಮರುಪ್ರಶ್ನಿಸಿದ್ದಾರೆ.
ನನ್ನ ಸಾಲ ಇರುವುದು ನಿಜ, ಅದು ಇಂಜಿನಿಯರಿಂಗ್ ಕಾಲೇಜ್ ಗೆ ಮಾಡಿದ ಸಾಲ, ಅ ಕಾರಣಕ್ಕಾಗಿ ನಾನು ವಿರೋಧಪಕ್ಷದ ಸ್ಥಾನ ಕೇಳುತ್ತಿಲ್ಲ, ಸದ್ಯ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಇಲ್ಲ. ವಿಧಾನಮಂಡಲ ಅಧಿವೇಶನ ಮುಗಿದ ಮೇಲೆ ರಾಜೀನಾಮೆ ನಿರ್ಧಾರ ಪ್ರಕಟಿಸುತ್ತೇನೆ ಎಂದರು.
ಪರಿಷತ್ ನಲ್ಲಿ ನನ್ನದು ಒಂದೇ ಸೀಟು ಮೆಜಾರಿಟಿಯಲ್ಲಿರುವುದು, ರಾಜೀನಾಮೆ ನೀಡಿದ್ರೆ ಬಿಜೆಪಿ ಮತಾಂತರ ಕಾಯಿದೆಯನ್ನು ಪಾಸ್ ಮಾಡುವ ಸಾಧ್ಯತೆ ಇದೆ, ಮತ್ತೆ ಅದನ್ನು ನನ್ನ ಮೇಲೆಯೇ ಗೂಬೆ ಕೂರಿಸುತ್ತಾರೆ. ಆ ಕಾರಣಕ್ಕಾಗಿ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ಧರಾಮಯ್ಯನವರು ಕಾಂಗ್ರೆಸ್ ನಲ್ಲಿ ಶಕ್ತಿ ಹೀನರಾಗಿದ್ದಾರೆ, ಸಿದ್ದರಾಮಯ್ಯನವರು ಸೇರಿದಂತೆ ಎಲ್ಲರೂ ನನ್ನ ಜೊತೆ ಮಾತನಾಡಿದ್ದಾರೆ. ಆದ್ರೆ ಬರೀ ಮಾತಿನಿಂದ ಏನು ಉಪಯೋಗವಿಲ್ಲ ಎಂದು ಸಿಎಂ ಇಬ್ರಾಹಿಂ ಕಾಂಗ್ರೆಸ್ ನಾಯಕರ ವಿರುದ್ಧ ತಮ್ಮ ಅಸಮಧಾನ ಹೊರಹಾಕಿದರು.
ಬಿಜೆಪಿ ಸರ್ಕಾರ ಬರಲು ನಮ್ಮ ಕಾಂಗ್ರೆಸ್ಸಿಗರೇ ಕಾರಣ ಎಂದು ಟೀಕಿಸಿದ ಅವರು, ಅದನ್ನು ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದರು.

ಮಂಡ್ಯದಲ್ಲಿ ಆ ಹುಡುಗಿ‌ಯ ಹಿಂದೆ ಇದ್ದವರು ಕಾಲೇಜ್ ವಿದ್ಯಾರ್ಥಿಗಳಲ್ಲ, ಆ ಹುಡುಗಿ ಹಿಂದೆ ಇದ್ದವರು ಬೇರೆ ಬೇರೆ ಹಿಂದೂ ಸಂಘಟನೆಯವರು, ಯಾವುದೇ ಸಂಘಟನೆಯವರಿದ್ದರು ಅವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

More News