ಮುಂಬೈ: ಖ್ಯಾತ ಸಂಗೀತ ನಿರ್ದೇಶಕ, ಗಾಯಕ 69 ವರ್ಷ ವಯಸ್ಸಿನ ಬಪ್ಪಿ ಲಹರಿ ನಿಧನಹೊಂದಿದ್ದಾರೆ. ಸ್ಯಾಂಡಲ್ ವುಡ್ ಸೇರಿದಂತೆ ಬಾಲಿವುಡ್ ನಲ್ಲಿ ಪ್ರಖ್ಯಾತ ಸಂಗೀತ ನಿರ್ದೇಶಕರಾಗಿದ್ದ ಹಾಗೂ ಡಿಸ್ಕೋ ಸಾಮ್ರಾಜ್ಯದ ಸಾಮ್ರಾಟರಾಗಿದ್ದ ಬಪ್ಪಿ ಲಹರಿ ತಮ್ಮ ಇಂಪಾದ ಹಾಡುಗಳಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು.
ಹಿಂದಿಯಲ್ಲಿ ಅವರ ಸಂಗೀತ ನಿರ್ದೇಶನದಲ್ಲಿ ಅವರೇ ಹಾಡಿರುವ ಡಿಸ್ಕೋ ಡ್ಯಾನ್ಸರ್, ಬಂಬಾಯ್ ಸೇ ಆಯಾ ಮೇರಾ ದೋಸ್ತ್ ಸೇರಿದಂತೆ ಹತ್ತು ಹಲವಾರು ಹಿಟ್ ಹಾಡುಗಳನ್ನು ನೀಡಿರುವ ಅವರು ಕಳೆದ ಹಲವಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರವಷ್ಟೇ ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ನಿನ್ನೆ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ರಾಚ್ರಿ ನಿಧನ ಹೊಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲೂ ಕೆಲಸ ಮಾಡಿದ್ದ ಬಪ್ಪಿ
ಬಪ್ಪಿ ಲಹರಿ ಅವರು ಕನ್ನಡ ಚಿತ್ರರಂಗದಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ. 1986ರಲ್ಲಿ ತೆರೆಕಂಡ ಆಫ್ರಿಕಾದಲ್ಲಿ ಶೀಲಾ ಹಾಗೂ ಕೃಷ್ಣಾ ನೀ ಬೇಗನೇ ಬಾರೋ ಮುಂತಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಅದಲ್ಲದೆ, ತೀರಾ ಇತ್ತೀಚೆಗೆ ಲವ್ ಇನ್ ಮಂಡ್ಯ ಚಿತ್ರದಲ್ಲಿ ಅವರು ಹಾಡನ್ನು ಹಾಡಿದ್ದರು.

ಇದಲ್ಲದೆ ಅವರು ಹೆಸರುವಾಸಿಯಾಗಿದ್ದು ಹಿಂದಿ ಮತ್ತು ಬೆಂಗಾಳಿ ಚಿತ್ರರಂಗದಲ್ಲಿ, ಅವರು ಡಿಸ್ಕೋವನ್ನು ಪರಿಚಯಿಸಿದ್ದರು. ಹಿಂದಿ ಚಿತ್ರರಂಗದಲ್ಲಿ ಅವರು ಬಪ್ಪಿಡಾ ಎಂದೇ ಚಿರಪರಿಚಿತರಾಗಿದ್ದರು. ಗಾಯಕರು, ಸಂಗೀತ ನಿರ್ದೇಶಕರು ಜತೆಗೆ ಅವರು ಚಿತ್ರ ನಿರ್ಮಾಪಕರೂ ಆಗಿದ್ದರು. ಹಾಗೆಯೇ ಬಿಜೆಪಿ ಪಕ್ಷ ಸೇರಿದ್ದ ಅವರು, 2014ರಲ್ಲಿ ಪಶ್ಚಿಮ ಬಂಗಾಳದ ಶ್ರೇರಾಂಪುರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಅಲೋಕೇಶ್ ಲಹರಿ ಅವರು ಬಪ್ಪಿ ಲಹರಿಯಾಗಿದ್ದರು ಅಂದಿನಿಂದ ಅವರು ಪ್ರತಿಯೊಬ್ಬರ ಬಪ್ಪಿದಾದಾ ಆಗಿದ್ದರು. ಅವರಿಗೆ ಗಾಯನದ ಜತೆ ಚಿನ್ನ ಎಂದರೆ ಅಚ್ಚುಮೆಚ್ಚು, ಮೈತುಂಬಾ ಚಿನ್ನಾಭರಣ ಧರಿಸಿ ಖ್ಯಾತಿಯನ್ನು ಗಳಿಸಿದ್ದರು.

ಬಪ್ಪಿ ಲಹರಿ ಅವರ ನಿಧನಕ್ಕೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಇನ್ನಿತರ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.




