Volvo Company: ರೈತರ ಮಕ್ಕಳಿಗೆ ಉದ್ಯೋಗ ನೀಡಲು ವೋಲ್ವೋ ಕಂಪನಿ ಒಪ್ಪಿಗೆ: ಸಚಿವರ ಸಂಧಾನ ಸಭೆ ಯಶಸ್ವಿ

ಬೆಂಗಳೂರು: ಹೊಸಕೋಟೆ ತಾಲ್ಲೂಕಿನ ಯಲಚೇನಹಳ್ಳಿಯಲ್ಲಿರುವ ವೋಲ್ವೋ ಕಂಪನಿಗೆ ಭೂಮಿ ನೀಡಿರುವ ರೈತ ಕುಟುಂಬಗಳಿಗೆ ಸೂಕ್ತ ಉದ್ಯೋಗ ನೀಡಲು ಕಂಪನಿ ಒಪ್ಪಿಗೆ ನೀಡಿದೆ ಎಂದು ಸಚಿವ ಎಂ ಟಿ ಬಿ ನಾಗರಾಜ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಮತ್ತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ವೋಲ್ವೋ ಕಂಪನಿ ಪ್ರತಿನಿಧಿಗಳು ಮತ್ತು ಭೂಮಿ ನೀಡಿರುವ ರೈತ ಪ್ರತಿನಿಧಿಗಳ ಸಭೆ ನಡೆಸಿದರು.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ವೋಲ್ವೋ ಕಂಪನಿಯ ಹಿರಿಯ ಅಧಿಕಾರಿ, ಭೂಮಿ ಕಳೆದುಕೊಂಡ 66 ಕುಟುಂಬಗಳಲ್ಲಿ 33 ಕುಟುಂಬಗಳ 42 ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ನೀಡಿದ್ದೇವೆ. ಉಳಿದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯನ್ನು ಕಡಿತಗೊಳಿಸಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿದರು.
ಪರಿಷ್ಕರಿಸಿದ ವೇತನ ನೀಡುವ ಪತ್ರಗಳನ್ನು ಐ.ಟಿ.ಐ. ಆದ ಐದು ಮಂದಿ ಅಭ್ಯರ್ಥಿಗಳಿಗೆ ನೀಡಿದ್ದರೂ ಅವರು ಒಪ್ಪದೆ ಡಿಸೆಂಬರ್ 15 ರಿಂದ ಧರಣಿ ನಡೆಸುತ್ತಿದ್ದಾರೆ. ಅವರಿಂದ ಕ್ಷಮಾಪಣೆ ಪತ್ರ ಪಡೆದು ಉದ್ಯೋಗ ನೀಡಲು ಕಂಪನಿ ಸಿದ್ದವಿದೆ ಎಂದು ಕಂಪನಿ ಅಧಿಕಾರಿ ತಿಳಿಸಿದರು.
ಇದಕ್ಕೂ ಮೊದಲು ಮಾತನಾಡಿದ ಸಚಿವ ಎಂ.ಟಿ.ಬಿ. ನಾಗರಾಜು ಸ್ಥಳೀಯರಿಂದ ಭೂಮಿ ಪಡೆದಿರುವ ಕಂಪನಿ ಸ್ಥಳೀಯರಿಗೆ ಖಾಯಂ ಉದ್ಯೋಗ ನೀಡುವಲ್ಲಿ ಮತ್ತು ಸಿ.ಎಸ್.ಆರ್. ನಿಧಿ ಬಳಕೆ ಮಾಡುವಲ್ಲಿ ತೀವ್ರ ನಿರ್ಲಕ್ಷ ವಹಿಸಿದೆ ಎಂದು ತರಾಟೆಗೆ ತಗೆದುಕೊಂಡರು.
ಅಧಿಕಾರಿಗಳು, ಕಾರ್ಮಿಕ ಕಾಯ್ದೆಯನ್ನು ಬಿಗಿಯಾಗಿ ಜಾರಿಗೊಳಿಸಿ ಕಾರ್ಮಿಕರ ಹಿತ ರಕ್ಷಿಸಬೇಕು. ಅಧಿಕಾರಿಗಳು ಕಾರ್ಮಿಕರ ಬಗ್ಗೆ ಕನಿಕರ ಇಟ್ಟು ಕೆಲಸ ಮಾಡಬೇಕು ಎಂದು ಸಚಿವ ಎಂ.ಟಿ.ಬಿ. ನಾಗರಾಜು ಕಟುವಾಗಿ ಎಚ್ಚರಿಸಿದರು.
ಹೊಸಕೋಟೆಯಲ್ಲಿರುವ ಇಂಡೋ ಮಿಮ್ ಕಂಪನಿ ಉತ್ತಮ ಲಾಭ ಗಳಿಸುತ್ತಿದ್ದರೂ ಕಾರ್ಮಿಕ ಕಾಯ್ದೆಯನ್ನು ನಿರ್ಲಕ್ಷಿಸಿದೆ. ವೇತನ ಹೆಚ್ಚಳ ಮತ್ತು ಕ್ಯಾಂಟೀನ್ ಸೌಲಭ್ಯ ಸೇರಿ ಇತರೇ ಸೌಲಭ್ಯಗಳನ್ನು ನೀಡುವಲ್ಲಿ ನಿರ್ಲಕ್ಷ ತೋರಿಸುತ್ತಿದೆ ಎಂದು ಸಚಿವರು ಹೇಳಿದರು.
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಕಂಪನಿ ಮತ್ತು ಭೂಮಿ ನೀಡಿರುವ ರೈತರು ಹಳೆಯದನ್ನೆಲ್ಲಾ ಮರೆತು ಮುಂದುವರಿಯಬೇಕಿದೆ. ಧರಣಿ ನಿರತ ಕಾರ್ಮಿಕರು ಕ್ಷಮಾಪಣೆ ಪತ್ರ ನೀಡಿ ಇಂದೇ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದರು.

ಸಭೆಯಲ್ಲಿ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ ಹಾಗೂ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಚಿವ ಎಂಟಿಬಿ ನಾಗರಾಜು ಸಂತಸ
ತಾವು ವೋಲ್ವೋ ಕಂಪನಿಗೆ ಮೂರು ಬಾರಿ ಭೇಟಿ ನೀಡಿ ನಡೆಸಿದ ಸಂಧಾನಗಳು ಇಂದಿನ ಸಭೆಯಲ್ಲಿ ಕಾರ್ಮಿಕರ ಪರವಾಗಿ ಇತ್ಯರ್ಥಗೊಂಡಿರುವುದಕ್ಕೆ ಪೌರಾಡಳಿತ,ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಸಂತಸ ವ್ಯಕ್ತಪಡಿಸಿದ್ದಾರೆ.

More News