DK SHIVAKUMAR V/S eSHWARAPPA: ಡಿಕೆಶಿ V/S ಈಶ್ವರಪ್ಪ ಫೈಟ್ : ಕೈ ಕೈ ಮಿಲಾಯಿಸುವ ಹಂತಕ್ಕೆ: ಮಾರ್ಷಲ್ ಗಳ ಮಧ್ಯಪ್ರವೇಶ

ಬೆಂಗಳೂರು: ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸಲಾಗುತ್ತದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ನೀಡಿದ್ದ  ಹೇಳಿಕೆ ವಿಚಾರವಾಗಿ ಚರ್ಚೆಗೆ ಅನುಮತಿ ನೀಡಬೇಕೆಂದು ಕಾಂಗ್ರೆಸ್ ಕೋರಿತ್ತು. ಆ ಹೇಳಿಕೆ ರಾಷ್ಟ್ರದ್ರೋಹದ ಅಡಿ ನಿಯಮ 60ರ ಅಡಿಯಲ್ಲಿ ಪ್ರಾಥಮಿಕ ಮಂಡನೆ ಮಾಡುವ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು.
ಮಂಡನೆ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿಗೆ ಧ್ವನಿಗೂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಚಿವ ಕೆ ಎಸ್ ಈಶ್ವರಪ್ಪ ರಾಷ್ಟ್ರದ್ರೋಹಿ ಎಂದರು. ಡಿಕೆಶಿ ಮಾತಿಗೆ ಕೆಂಡಾಮಂಡಲವಾದ ಈಶ್ವರಪ್ಪ, ಏಕವಚನದಲ್ಲಿ ವಾಚಾಮಗೋಚರವಾಗಿ ನೀನು ಬೈಲ್ ನಲ್ಲಿ ಇದ್ದಿಯಾ ಯಾವಾಗ ಜೈಲಿಗೆ ಹೋಗುತ್ತೀಯಾ ಗೊತ್ತಿಲ್ಲ, ದೇಶದ್ರೋಹಿ ನಾನಲ್ಲ ನೀನು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ ಕೆ ಶಿವಕುಮಾರ್ ನನ್ನನ್ನು ಏನು ಮಾಡುವುದಕ್ಕೆ ಆಗಲ್ಲ ಎಂದರು, ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನೀವು ಯಾರು ಜೈಲಿಗೆ ಹೋಗಿಲ್ವಾ ಎಂದು ಸಮರ್ಥಿಸಿಕೊಂಡರು.

ಗದ್ದಲ ತಿಳಿಗೊಳಿಸಲು ಪ್ರಯತ್ನಿಸಿದ ಸ್ಪೀಕರ್ ಕಾಗೇರಿ, ಕಲಾಪವನ್ನು ಮುಂದೂಡಿದರು. ವಿಧಾನಸಭೆ ಕಲಾಪ ಮುಂದೂಡಿದರೂ ಸಭೆಯಲ್ಲಿ ಗದ್ದಲ ಮಾತ್ರ ಮುಗಿಯಲಿಲ್ಲ, ಗದ್ದಲ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಆಕ್ರೋಶಗೊಂಡ ಡಿಕೆ ಶಿವಕುಮಾರ್ ಈಶ್ವರಪ್ಪ ಕುಳಿತುಕೊಳ್ಳುವ ಸ್ಥಳಕ್ಕೆ ಧಾವಿಸಿದರು. ಈ‌ ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ನಂತರ ಮಾರ್ಷಲ್ ಗಳು ಮಧ್ಯಪ್ರವೇಶ ಮಾಡಬೇಕಾದ ಸ್ಥಿತಿ ನಿರ್ಮಾಣವಾಯಿತು.
ಸಚಿವ ಈಶ್ವರಪ್ಪ ಸಮರ್ಥನೆಗೆ ನಿಂತ ಕಾನೂನು ಸಚಿವ ಮಾಧುಸ್ವಾಮಿ
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ಸಚಿವ ಈಶ್ವರಪ್ಪ ಅವರ ಹೇಳಿಕೆ ದೇಶದ್ರೋಹ ಮಾತುಗಳಾಗಿವೆ. ಕೂಡಲೇ ಇವರನ್ನು ಮಂತ್ರಿಮಂಡಲದಿಂದ ಕೈಬಿಟ್ಟು ಇವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಮಾತಿಗೆ ಮಧ್ಯಪ್ರವೇಶಿಸಿದ ಶಾಸಕ ಸಿಟಿ ರವಿ ಬಂದೂಕು ಕೈಯಲ್ಲಿ ಕೊಟ್ಟು ಬಾವುಟ ಹಾರಿಸಬೇಡಿ ಅಂದಾಗ ನಾವು (ಬಿಜೆಪಿ) ಕಾಶ್ಮೀರದಲ್ಲಿ ಬಾವುಟ ಹಾರಿಸಿದ್ವಿ ಎಂದರು.

ಈ ಸಂದರ್ಭದಲ್ಲಿ ಸಚಿವ ಈಶ್ವರಪ್ಪ ಸಮರ್ಥನೆಗೆ ಕಾನೂನು ಸಚಿವ ಮಾಧುಸ್ವಾಮಿ ನಿಂತು, ಹುಬ್ಬಳ್ಳಿಯಿಂದ ಕಾಶ್ಮೀರದವರೆಗೆ ಬಾವುಟ ಹಾರಿಸಿದ ಪಕ್ಷ ಬಿಜೆಪಿ. ಈಶ್ವರಪ್ಪ ಹೇಗೆ ದೇಶ ದ್ರೋಹಿ ಆಗ್ತಾರೆ..? ಅವರು ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ ಅಷ್ಟೇ. ಇದು ನಿಲುವಳಿ ಸೂಚನೆ ವ್ಯಾಪ್ತಿಗೆ ಬರಲ್ಲ, ತಿರಸ್ಕಾರ ಮಾಡಿ ಎಂದು ಮನವಿ ಮಾಡಿದರು. ಮಾಧುಸ್ವಾಮಿ ಮಾತಿಗೆ ಕಾಂಗ್ರೆಸ್ ಸದಸ್ಯರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಗದ್ದಲ ಉಂಟಾಯಿತು.

More News