SANDLEWOOD QUEEN RAMYA: ಚಿತ್ರರಂಗಕ್ಕೆ ಸ್ಯಾಂಡಲ್‌ವುಡ್ ಕ್ವೀನ್ ಕಮ್‌ಬ್ಯಾಕ್!: ನಟಿ ರಮ್ಯಾ ಹೇಳಿದ್ದೇನು..?

ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂಬ ಮಾತುಗಳು ಆಗಾಗ ಗಾಂಧಿನಗರದಲ್ಲಿ ಹರಿದಾಡುತ್ತಲೇ ಇರುತ್ತವೆ. ದೊಡ್ಡ ಅಭಿಮಾನಿ ಬಳಗ ಹೊಂದಿರುವ ರಮ್ಯಾ ಯಾವಾಗ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದೀಗ ಈ ಎಲ್ಲಾ ಊಹಾಪೋಹಾಗಳಿಗೂ ಸ್ವತಃ ಮೋಹಕ ಬೆಡಗಿ ರಮ್ಯಾ ಅವರೇ ತೆರೆ ಎಳೆದಿದ್ದು, ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುವ ಮುನ್ಸೂಚನೆ ನೀಡಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ನಟಿ ರಮ್ಯಾ, `ನಾನು ಚಿತ್ರರಂಗಕ್ಕೆ ಮತ್ತೆ ಮರಳುವ ವಿಚಾರದ ಕುರಿತು ಕುತೂಹಲ ಮತ್ತು ಊಹಾಪೋಹಗಳು ಹೆಚ್ಚುತ್ತಿವೆ. ಇದು ನನಗೆ ಅರ್ಥವಾಗುತ್ತಿದೆ. ಕಳೆದ ಕೆಲ ತಿಂಗಳಿಂದ ನಾನು ಆಸಕ್ತಿಕರ ಚಿತ್ರಕಥೆಗಳನ್ನು ಕೇಳಿದ್ದೇನೆ. ಒಂದು ವೇಳೆ ಎಲ್ಲವೂ ಸರಿಯಾಗಿ ನಡೆದರೆ ಅದನ್ನು ನಾನು ನಿಮಗೆ ತಿಳಿಸುತ್ತೇನೆ. ಅಲ್ಲಿಯವರೆಗೂ ನಿಮ್ಮ ಕುತೂಹಲವನ್ನು ತಡೆಹಿಡಿದುಕೊಳ್ಳಿ’ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

ರಾಜಕೀಯ ಪ್ರವೇಶಿಸಿದ ಬಳಿಕ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ವರ್ಷಗಳ ಕಾಲ ನಟಿ ರಮ್ಯಾ ಎಲ್ಲಿದ್ದಾರೆ..? ಏನು ಮಾಡುತ್ತಿದ್ದಾರೆ..? ಎಂಬ ಸುಳಿವು ಕೂಡ ಸಿಕ್ಕಿರಲಿಲ್ಲ.

ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಿಂದಲೂ ದೂರ ಉಳಿದಿದ್ದ ನಟಿ ರಮ್ಯಾ, ಅಧ್ಯಾತ್ಮಕ್ಕೆ ಸಂಬಂಧಪಟ್ಟ ಕ್ಲಾಸ್ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದರು.

More News